ADVERTISEMENT

28ರಂದು ಜಯದೇವ ಶ್ರೀ 64ನೇ ಸ್ಮರಣೋತ್ಸವ

ಸರಳ ಆಚರಣೆ * ‘ಜಯದೇವ ಶ್ರೀ’, ‘ಶೂನ್ಯಪೀಠ’ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:20 IST
Last Updated 26 ಫೆಬ್ರುವರಿ 2021, 2:20 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ದಾವಣಗೆರೆ: ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 64ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವವನ್ನು ಫೆ.28ರಂದು ಸಂಜೆ 6.30ಕ್ಕೆ ಸರಳವಾಗಿ ಆಚರಿಸಲಾಗುವುದು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲ್ಲಿನ ಶಿವಯೋಗಾಶ್ರಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೊರೊನಾ ಕಾರಣ ಮೂರು ದಿನಗಳ ಕಾಲ ನಡೆಯುತ್ತಿದ್ದ ಸ್ಮರಣೋತ್ಸವ ಸಮಾರಂಭವನ್ನು ಈ ಬಾರಿ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಹಿಂದಿನಂತೆ ನಡೆದುಕೊಂಡು ಬಂದ ಪರಂಪರೆ ನಿಲ್ಲಬಾರದು ಎಂಬ ಕಾರಣಕ್ಕೆ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಸ್ಮರಣೋತ್ಸವ ಅಂಗವಾಗಿ ‘ಜಯದೇವ ಶ್ರೀ’ ಮತ್ತು ‘ಶೂನ್ಯಪೀಠ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಂಗಳೂರಿನ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಅವರಿಗೆ‘ಜಯದೇವ ಶ್ರೀ’, ಚಿತ್ರದುರ್ಗದ ಸಾಹಿತಿ ಪ್ರೊ. ಎಚ್‌.ಲಿಂಗಪ್ಪ ಅವರಿಗೆ ‘ಶೂನ್ಯಪೀಠ ಚನ್ನಬಸವ’ ಪ್ರಶಸ್ತಿ, ರಾಯಚೂರಿನ ‘ಸುದ್ದಿಮೂಲ’ ಪತ್ರಿಕೆಯಸಂಪಾದಕ ಬಸವರಾಜಸ್ವಾಮಿ ಅವರಿಗೆ‘ಶೂನ್ಯಪೀಠ ಅಲ್ಲಮ’ ಹಾಗೂ ಕರ್ನಾಟಕ ರಾಜ್ಯ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಡಿ. ಮೌದ್ಗೀಲ್‌ ಅವರಿಗೆ ‘ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳು ತಲಾ ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿವೆ ಎಂದು ಮಾಹಿತಿ ನೀಡಿದರು.

ADVERTISEMENT

ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ ವಹಿಸುವರು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸುವರು. ಸಚಿವರಾದ ಅರವಿಂದ ಲಿಂಬಾವಳಿ, ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಭಾಗವಹಿಸುವರು. ಚಿತ್ರದುರ್ಗದ ಜಮುರಾ ಕಲಾವಿದರು ಹಾಗೂ ವಿರಕ್ತಮಠದ ಬಸವ ಕಲಾಲೋಕ ಬಳಗದಿಂದ ವಚನ ಸಂಗೀತ, ರಿಯಾಲಿಟಿ ಶೋ ಖ್ಯಾತಿಯ ಗಾಯಕ ಬಸವ ಪ್ರಸಾದ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.