ADVERTISEMENT

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 2:58 IST
Last Updated 14 ಅಕ್ಟೋಬರ್ 2025, 2:58 IST
ದಾವಣಗೆರೆಯ ಜಯದೇವ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರಗಳು
ದಾವಣಗೆರೆಯ ಜಯದೇವ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರಗಳು   

ದಾವಣಗೆರೆ: ‘ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಲ್ಲಿನ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು‌. 

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ‘ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದುಬಾರಿ ಅರ್ಜಿ ಶುಲ್ಕವನ್ನು ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು. 

‘ರಾಜ್ಯದಲ್ಲಿ ಕಳೆದ 4–5 ವರ್ಷಗಳಿಂದ ಯಾವುದೇ ನೇಮಕಾತಿಗಳು ನಡೆದಿಲ್ಲ. ಪೊಲೀಸ್‌ ಕಾನ್‌ಸ್ಟೆಬಲ್‌ ಸೇರಿದಂತೆ ಎಲ್ಲ ನೇಮಕಾತಿಗಳಿಗೂ ವಯೋಮಿತಿಯನ್ನು ಕನಿಷ್ಠ 5 ವರ್ಷ ಸಡಿಲಿಕೆ ಮಾಡಬೇಕು. ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿ, ಹೊರಗುತ್ತಿಗೆ ಪದ್ಧತಿ ಕೈಬಿಟ್ಟು, ಎಲ್ಲಾ ಹುದ್ದೆಗಳನ್ನು ಕಾಯಂಗೊಳಿಸಬೇಕು’ ಎಂದು ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಪರಶುರಾಮ್ ಎಸ್. ಒತ್ತಾಯಿಸಿದರು.  

ADVERTISEMENT

‘ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿಯ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆದರೂ ಯಾವುದೇ ನೇಮಕಾತಿಯನ್ನು ಮಾಡಿಲ್ಲ’ ಎಂದು ಸಂಘಟನಕಾರ ಅನಿಲ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು. 

‘2025-26ನೇ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಕಿಂಚಿತ್ತೂ ಪ್ರಯತ್ನಗಳು ನಡೆಯುತ್ತಿಲ್ಲ. ಕುಂಟುನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ರಾಜ್ಯದ ಎಲ್ಲೆಡೆ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದೆಂದು ಹಲವು ವರ್ಷಗಳಿಂದ ಪರೀಕ್ಷಾ ತಯಾರಿ ನಡೆಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಯುವಜನರು ಆತ್ಮಹತ್ಯೆಯಂತಹ ಕಠಿಣ, ನೋವಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಸಂಘಟನಕಾರರಾದ ಅರ್ಪಿತಾ ಕಿಡಿಕಾರಿದರು. 

ಜಯದೇವ ವೃತ್ತದಿಂದ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಕಾರರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

ಸಮಿತಿಯ ಪ್ರಮುಖರಾದ ರಾಕೇಶ್, ಇಮ್ರಾನ್, ಮಲ್ಯಾನಾಯ್ಕ, ಕಿರಣ್, ಕಾವ್ಯಾ, ರಾಧಾ, ವಿಶ್ವನಾಥ್, ಲಕ್ಷ್ಮಿ, ಶ್ರೀನಿವಾಸ್‌, ಸುಹೈಲ್‌ ಹಾಗೂ ಇನ್ನಿತರರು ಭಾಗವಹಿಸಿದ್ದರು. 

ದಾವಣಗೆರೆಯ ಜಯದೇವ ವೃತ್ತದಲ್ಲಿ ಬಸವಪರ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ನಡೆಸಿದರು

ಕನ್ನೇರಿ ಮಠದ ಸ್ವಾಮೀಜಿ ವಿರುದ್ಧ ಆಕ್ರೋಶ 

‘ಲಿಂಗಾಯತ ಮಠಾಧೀಶರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ದೇಶದಿಂದ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ಜಯದೇವ ವೃತ್ತದಲ್ಲಿ ಬಸವಪರ ಸಂಘಟನೆಗಳ ಒಕ್ಕೂಟದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.  ‘ಬುದ್ಧನ ತರುವಾಯ ಮಹತ್ವದ ಸಾಮಾಜಿಕ ಕ್ರಾಂತಿಗೆ ಸಮಸಮಾಜಕ್ಕೆ ಮುನ್ನುಡಿ ಬರೆದವರು 12ನೇ ಶತಮಾನದ ಬಸವಾದಿ ಶರಣರು. ಬಸವಣ್ಣ ರೂಪಿಸಿದ ಜೀವಪರ ನೆಲೆಯ ಲಿಂಗಾಯತ ಧರ್ಮವು ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ವೈದಿಕಶಾಹಿಯ ಗುಲಾಮರಂತೆ ವರ್ತಿಸುತ್ತಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯು ಬಸವಪರ ಲಿಂಗಾಯತ ಮಠಾಧೀಶರಿಗೆ ಅಸಂವಿಧಾನಿಕ ಮತ್ತು ಅವಾಚ್ಯ ಪದಳಿಂದ ನಿಂದಿಸಿರುವುದು ಖಂಡನೀಯ’ ಎಂದು ಪ್ರತಿಭಟನಕಾರರು ದೂರಿದರು.  ‘ಕಾಡಸಿದ್ದೇಶ್ವರ ಸ್ವಾಮೀಜಿಯ ಮಾತಿನಿಂದ ಬಸವಪರವಾದ ಲಿಂಗಾಯತ ಸಮುದಾಯಕ್ಕೆ ಅಪಮಾನವಾಗಿದೆ. ಇವರ ಮಾತು ಸಾಮಾಜಿಕ ಶಾಂತಿಗೆ ಧಕ್ಕೆ ತರುವಂತಿವೆ. ಕೋಮುದ್ವೇಷ ಸಾಮಾಜಿಕ ಶಾಂತಿಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ’ ಎಂದರು.  ‘ಭಾರತೀಯ ಸಮಾಜದಲ್ಲಿ ಲಿಂಗಾಯತ ಮಠಾಧೀಶರು ಗೌರವಯುತ ಸ್ಥಾನಮಾನ ಪಡೆದಿದ್ದಾರೆ. ಸಂವಿಧಾನದ ಆಶಯದಡಿ ಈ ನೆಲದ ಸೌಹಾರ್ದತೆಯನ್ನು ಪಾಲಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಇಂತಹ ಮಠಾಧೀಶರನ್ನು ನಿಂದಿಸಿ ಸಾಮಾಜಿಕ ಶಾಂತಿಗೆ ಧಕ್ಕೆ ಉಂಟು ಮಾಡಿರುವ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.  ಮುಖಂಡರಾದ ಹುಚ್ಚಪ್ಪ ಮಾಸ್ತರ್ ಕೆ.ಬಿ. ಪರಮೇಶ್ವರಪ್ಪ ರುದ್ರಗೌಡ ಗೋಪನಾಳ್ ವಿಶ್ವೇಶ್ವರಯ್ಯ ಶಿವಮೂರ್ತಯ್ಯ ಲಿಂಗರಾಜ್ ಶಾಮನೂರು ಲಿಂಗಾನಂದ ಕಮ್ಮತ್ತಹಳ್ಳಿ ಅವಿನಾಶ್ ಶಿವರಾಜ್ ಕಬ್ಬೂರ್ ವನಜಾ ಮಹಾಲಿಂಗಯ್ಯ ವೀಣಾ ಮಂಜುನಾಥ್ ಪೂರ್ಣಿಮಾ ಪ್ರಸನ್ನ ಮಮತಾ ನಾಗರಾಜ್ ಕಕ್ಕರಗೊಳ್ಳ ನಾಗರಾಜ್ ಆವರಗರೆ ರುದ್ರಮುನಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.