ADVERTISEMENT

ಮಕ್ಕಳ ಬಾಲ್ಯ ಹಾಳಾಗದಂತೆ ನೋಡಿಕೊಳ್ಳಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಸಲಹೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:47 IST
Last Updated 15 ನವೆಂಬರ್ 2025, 6:47 IST
ದಾವಣಗೆರೆಯ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಕ್ಕಳ ಕನಸುಗಳಿಗೆ ಕಾನೂನಿನ ಕವಚ’ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಮಾತನಾಡಿದರು
ದಾವಣಗೆರೆಯ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಕ್ಕಳ ಕನಸುಗಳಿಗೆ ಕಾನೂನಿನ ಕವಚ’ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಮಾತನಾಡಿದರು   

ದಾವಣಗೆರೆ: ಬಾಲ್ಯಾವಸ್ಥೆ ಬದುಕಿನ ಪ್ರಮುಖ ಘಟ್ಟ. ಮಕ್ಕಳ ಬಾಲ್ಯ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಅಭಿಪ್ರಾಯಪಟ್ಟರು.

ಇಲ್ಲಿನ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಮಕ್ಕಳ ಕನಸುಗಳಿಗೆ ಕಾನೂನಿನ ಕವಚ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಕನಸು ಕಾಣುವುದು ಸಹಜ. ಅವರ ಕನಸು ನನಸಾಗಿಸುವಲ್ಲಿ ಎದುರಾಗುವ ಅಡೆತಡೆಗೆಗಳನ್ನು ನಿವಾರಿಸಬೇಕು. ಕಾನೂನಿನ ಅರಿವು, ಶ್ರೀರಕ್ಷೆಯೊಂದಿಗೆ ಭವಿಷ್ಯಕ್ಕೆ ಬೆಳಕಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪ್ರೌಢಾವಸ್ಥೆಯಿಂದ ಬಾಲ್ಯಕ್ಕೆ ಮರಳಲು ಸಾಧ್ಯವಿಲ್ಲ. ಬಾಲ್ಯಾವಸ್ಥೆಯ ಜೀವನ ತುಂಬಾ ಮಹತ್ವವಾದುದು. ಮಕ್ಕಳ ಪಾಲನೆಗೆ ಹೆಚ್ಚು ಒತ್ತು ನೀಡಬೇಕು. ಪೋಷಕರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳು ಹೆಚ್ಚಿನ ಸಮಯವನ್ನು ಡಿಜಿಟಲ್‌ ಉಪಕರಣಗಳ ಜೊತೆಗೆ ಕಳೆಯುತ್ತಿದ್ದಾರೆ. ಮೊಬೈಲ್, ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ನಾಶವಾಗುತ್ತಿದೆ. ಇವುಗಳಿಂದ ಮಕ್ಕಳನ್ನು ದೂರವಿಟ್ಟು ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ಹೇಳಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್. ಗುರುಬಸವರಾಜ್, ದಕ್ಷಿಣ ವಲಯ ಸಂಚಾರಿ ಪೊಲೀಸ್ ಠಾಣಾಧಿಕಾರಿ ಶೈಲಜ, ಉತ್ತರ ವಲಯ ಸಂಚಾರಿ ಪೊಲೀಸ್ ಠಾಣಾಧಿಕಾರಿ ಜಯಶೀಲ, ವಕೀಲ ವೆಂಕಟೇಶ್, ಗ್ಲೋಬಲ್ ಪಬ್ಲಿಕ್ ಶಾಲೆ ಕಾರ್ಯದರ್ಶಿ ಅಸಾದ್ ಉಲ್ಲಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.