ADVERTISEMENT

ಸಂದರ್ಶನ | ಪ್ರತಿ ಗ್ರಾಮದಲ್ಲಿ ಕನ್ನಡ ಧ್ವಜ ಹಾರಬೇಕು: ಬಿ. ವಾಮದೇವಪ್ಪ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಬಿ. ವಾಮದೇವಪ್ಪ ಆಶಯ

ಬಾಲಕೃಷ್ಣ ಪಿ.ಎಚ್‌
Published 26 ನವೆಂಬರ್ 2021, 2:30 IST
Last Updated 26 ನವೆಂಬರ್ 2021, 2:30 IST
ಬಿ. ವಾಮದೇವಪ್ಪ
ಬಿ. ವಾಮದೇವಪ್ಪ   

‘ಕನ್ನಡಿಗರ ಪರಿಷತ್ತು ಇದು. ಹಾಗಾಗಿ ಜನರ ಬಳಿಗೆ ಪರಿಷತ್ತನ್ನು ಒಯ್ಯುತ್ತೇನೆ. ಸ್ಥಳೀಯ ಗ್ರಾಮ ಪಂಚಾಯಿತಿ, ಪ್ರಜಾಪ್ರತಿನಿಧಿಗಳ ನೆರವು ಪಡೆದು ಪ್ರತಿ ಗ್ರಾಮಗಳಲ್ಲಿ ಕನ್ನಡ ಧ್ವಜಸ್ತಂಭ ನಿರ್ಮಿಸಿ ಕನ್ನಡ ಧ್ವಜ ಹಾರಿಸಲು ಕ್ರಮ ಕೈಗೊಳ್ಳಲಾಗುವುದು. ಕನ್ನಡ ಇತಿಹಾಸ, ಭಾಷೆಯ ಮಹತ್ವ ಸೇರಿದಂತೆ ಕನ್ನಡ ಧ್ವಜ ಹಾರಿಸುವುದರ ಅರ್ಥ, ಹಿನ್ನೆಲೆಯನ್ನು ತಿಳಿಸಿ ಕೊಡುವ ಚಿಂತನೆ ಇದೆ’...

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಬಿ. ವಾಮದೇವಪ್ಪ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ತನ್ನ ಯೋಜನೆಗಳನ್ನು ಬಿಚ್ಚಿಟ್ಟರು. ಅದರ ವಿವರ ಇಲ್ಲಿದೆ.

ನಿಮ್ಮನ್ನೇ ಯಾಕೆ ಪರಿಷತ್ತಿನ ಮತದಾರರು ಆಯ್ಕೆ ಮಾಡಿದರು?

ADVERTISEMENT

– ತಾಲ್ಲೂಕು ಕಾರ್ಯದರ್ಶಿಯಾಗಿ, ಎರಡು ಬಾರಿ ಅಧ್ಯಕ್ಷನಾಗಿ ನಾನು ಮಾಡಿದ ಕಾರ್ಯಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತವುಗಳಾಗಿದ್ದವು. ಜತೆಗೆ ನನ್ನ ಅನುಭವ, ಹಿರಿತನವನ್ನು ಕನ್ನಡಿಗರು ಗುರುತಿಸಿ ಆಯ್ಕೆ ಮಾಡಿದ್ದಾರೆ. ಅಲ್ಲದೇ ಈ ಬಾರಿ ಸ್ಪರ್ಧೆ ಮಾಡಿದ್ದವರಲ್ಲಿ ಒಬ್ಬರನ್ನು ಹೊರತುಪಡಿಸಿ ಮತ್ತೆಲ್ಲರೂ ನಾಮಪತ್ರ ವಾಪಸ್‌ ತಗೊಂಡು ನನಗೆ ಬೆಂಬಲ ನೀಡಿದರು. ಇದು ಸುಲಭ ಮತ್ತು ಸರಳ ಆಯ್ಕೆಗೆ ಕಾರಣವಾದವು.

ರಾಜಕೀಯ ಪಕ್ಷಗಳ ಪ್ರವೇಶದ ಬಗ್ಗೆ ನಿಮ್ಮ ಅಭಿಪ್ರಾಯ

– ರಾಜ್ಯ ಸಮಿತಿಯ ಆಯ್ಕೆಯಲ್ಲಿ ಪಕ್ಷ ರಾಜಕೀಯ ಬಂದಿದ್ದು ದುರದೃಷ್ಟಕರ. ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ಕನ್ನಡಿಗರ ಆಸ್ತಿ. ಇದರಲ್ಲಿ ಪಕ್ಷಗಳು ನುಸುಳಲೇಬಾರದು.

5 ವರ್ಷಗಳಲ್ಲಿ ಎಷ್ಟು ಸದಸ್ಯತ್ವ ಮಾಡುತ್ತೀರಿ?

–ಆನ್‌ಲೈನ್‌ ಮೂಲಕ ಕಡಿಮೆ ದರದಲ್ಲಿ ಸದಸ್ಯತ್ವ ಮಾಡಲಾಗುವುದು.ಅಂಗವಿಕಲರು, ಮಾಜಿ ಸೈನಿಕರು ಹೀಗೆ ವಿಶಿಷ್ಟರಿಗೆ ಉಚಿತವಾಗಿ ಸದಸ್ಯತ್ವ ನೀಡಲಾಗುವುದು ಎಂದು ರಾಜ್ಯಾಧ್ಯಕ್ಷ ಮಹೇಶ್‌ ಜೋಶಿ ಘೋಷಿಸಿದ್ದಾರೆ. ಅದಕ್ಕೆ ರಾಜ್ಯ ಸಮಿತಿಯಲ್ಲಿ ಅನುಮೋದನೆ ಸಿಕ್ಕಿದ ಕೂಡಲೇ ಸದಸ್ಯತ್ವ ಆರಂಭಿಸುತ್ತೇವೆ. ಇಷ್ಟೇ ಎಂದಲ್ಲ, ಕನ್ನಡಿಗರೆಲ್ಲ ಸದಸ್ಯರಾಗಬೇಕು.

ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ?

– ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಹಿಂದಿನ ಸರ್ಕಾರ ನಿರ್ಧರಿಸಿ, ₹ 5 ಕೋಟಿ ಬಿಡುಗಡೆ ಕೂಡ ಮಾಡಿತ್ತು. ಜಿಲ್ಲಾಧಿಕಾರಿ ಸಮ್ಮೇಳನ ಸಮಿತಿ ಅಧ್ಯಕ್ಷರಾಗಿದ್ದರು. ಸರ್ಕಾರ ಬದಲಾಗಿದ್ದು, ಪ್ರವಾಹ ಬಂದಿದ್ದೆಲ್ಲ ಸಮ್ಮೇಳನ ನಡೆಯದಿರಲು ಕಾರಣವಾಯಿತು. ಮತ್ತೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ಮಾಡೇ ಮಾಡುತ್ತೇವೆ. ಅಲ್ಲದೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕೂಡ 5 ವರ್ಷಗಳ ಒಳಗೆ ಜಿಲ್ಲೆಯಲ್ಲಿ ನಡೆಸಲಾಗುವುದು.

ಬೇರೆ ಮುಂದಿನ ಗುರಿಗಳೇನು?

– ಕನ್ನಡ ಭವನ ಇಲ್ಲದ ತಾಲ್ಲೂಕು/ಹೋಬಳಿ ಮಟ್ಟಗಳಲ್ಲಿ ಭವನವನ್ನು ಸಂಸದರು, ಶಾಸಕರು, ಸರ್ಕಾರದ ನೆರವಿನಿಂದ ಮಾಡಬೇಕು. ಆಜೀವ ಸದಸ್ಯರು, ಕನ್ನಡಾಭಿಮಾನಿಗಳ ಸಭೆ ಕರೆದು ಮುಂದಿನ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲಾ, ತಾಲ್ಲೂಕು ಸಮ್ಮೇಳನಗಳನ್ನು ಅರ್ಥಪೂರ್ಣವಾಗಿ ಮಾಡಲಾಗುವುದು. ಶಾಲಾ, ಕಾಲೇಜು ಉಪನ್ಯಾಸಕರಿಗೆ ಹಳೇ, ನಡು, ಹೊಸಗನ್ನಡದ ಬಗ್ಗೆ ತರಬೇತಿ ನೀಡಿ ಕನ್ನಡವನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳುವಂತೆ ಮಾಡಲಾಗುವುದು. ಗೋಷ್ಠಿ, ಸಂವಾದಗಳನ್ನು ಹಮ್ಮಿಕೊಳ್ಳ ಲಾಗುವುದು. ಹೀಗೆ ನೂರಾರು ಕನಸು, ಗುರಿಗಳನ್ನು ಐದು ವರ್ಷಗಳಲ್ಲಿ ಸಾಧಿಸಲು ಪ್ರಯತ್ನಿಸುತ್ತೇನೆ.

‘ಜೀವಂತಿಕೆಯ ದೃಢೀಕರಣ ಪತ್ರವೊಂದೇ ದಾರಿ’

‘ಜಿಲ್ಲೆಯಲ್ಲಿ 10,800ರಷ್ಟು ಮಂದಿ ಸದಸ್ಯರಿದ್ದಾರೆ. ಅದರಲ್ಲಿ ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅದನ್ನು ಗುರುತಿಸಲು ಕಷ್ಟವಾಗುತ್ತಿದೆ. ಅದಕ್ಕಾಗಿ ಬ್ಯಾಂಕ್‌ಗಳಲ್ಲಿ ಇರುವ ರೀತಿಯಲ್ಲೇ ನಿವೃತ್ತ ನೌಕರರು ಇಲ್ಲೂ ಜೀವಂತಿಕೆಯ ದೃಢೀಕರಣ ಪತ್ರ ನೀಡುವುದೊಂದೆ ದಾರಿ. ಹಾಗೆ ದೃಢೀಕರಣ ನೀಡದವರ ಹೆಸರನ್ನು ಅಮಾನತ್ತಲ್ಲಿ ಇಡುವಂತಾಗಬೇಕು. ಆದರೆ ಇದೆಲ್ಲ ರಾಜ್ಯ ಸಮಿತಿಯಲ್ಲಿ ನಿರ್ಧಾರ ಆಗಬೇಕು. ಅಲ್ಲಿ ಧ್ವನಿ ಎತ್ತುವೆ’ ಎಂದು ವಾಮದೇವಪ್ಪ ತಿಳಿಸಿದರು.

ವಾಮದೇವಪ್ಪ ಪರಿಚಯ

ಬಿ. ವಾಮದೇವಪ್ಪ ಅವರು ದಾವಣಗೆರೆ ಹಿರೇತೊಗಲೇರಿ ದಿವಂಗತ ಬಿ. ಬಸಪ್ಪ–ಗಂಗಮ್ಮ ದಂಪತಿಯ ಏಳು ಮಕ್ಕಳಲ್ಲಿ ಒಬ್ಬರು. 1950ರ ಜ.18ರಂದು ಜನಿಸಿರುವ ಅವರು ಎಂಎ, ಬಿಎಡ್‌ ಮಾಡಿ ಪ್ರೌಢಶಾಲೆ ಅಧ್ಯಾಪಕನಾಗಿ, ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಪಠ್ಯ ಪುಸ್ತಕ ಪುನರ್‌ರಚನೆ ಸಮಿತಿ ಸದಸ್ಯರಾಗಿ, ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಕೋಷ್ಠಕ ತಯಾರಿ ಸದಸ್ಯರಾಗಿ ಕೆಲಸ ಮಾಡಿದ್ದರು. 4 ಕೃತಿಗಳು, 8 ಸಂಪಾದನಾ ಕೃತಿಗಳನ್ನು ಹೊರ ತಂದಿದ್ದಾರೆ. ವಾಮದೇವಪ್ಪ–ಎಂ.ಜಿ. ಕಮಲಮ್ಮ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.