ADVERTISEMENT

ಜಗಳೂರು | ಪಠ್ಯದಷ್ಟೇ ಸಾಹಿತ್ಯದ ಓದಿಗೂ ಆದ್ಯತೆ ಇರಲಿ: ಶಾಸಕ ಬಿ. ದೇವೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:26 IST
Last Updated 17 ಅಕ್ಟೋಬರ್ 2025, 6:26 IST
 ಜಗಳೂರಿನಲ್ಲಿ ಬುಧವಾರ ನವೀಕೃತ ಸ್ಮರಣ ಸಂಚಿಕೆ ‘ಚಿನ್ನಹಗರಿಯ ನುಡಿತೇರು’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು
 ಜಗಳೂರಿನಲ್ಲಿ ಬುಧವಾರ ನವೀಕೃತ ಸ್ಮರಣ ಸಂಚಿಕೆ ‘ಚಿನ್ನಹಗರಿಯ ನುಡಿತೇರು’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು   

ಜಗಳೂರು: ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತಗೊಳ್ಳದೇ, ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಕನ್ನಡ ಭಾಷೆ, ನಾಡು, ನುಡಿ ಮತ್ತು ಸಂಸ್ಕ್ರತಿಯ ಬಗ್ಗೆ ಜ್ಞಾನ ಹೆಚ್ಚುತ್ತದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಕಿವಿಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಬುಧವಾರ ನವೀಕೃತ ಸ್ಮರಣ ಸಂಚಿಕೆ ‘ಚಿನ್ನಹಗರಿಯ ನುಡಿತೇರು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಶಿಕ್ಷಣ ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಬಾರದು. ಶಿಕ್ಷಣದಿಂದ ಮಾತ್ರ ಕುಟುಂಬದ ಬದಲಾವಣೆ ಸಾಧ್ಯ ಎಂಬುದಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿದ್ದ ನಾನು ಇಂದು ಶಾಸಕನಾಗಿ, ನನ್ನ ಮಗ ಐಎಎಸ್ ಅಧಿಕಾರಿಯಾಗಿರುವುದೇ ನಿದರ್ಶನ. ವಿಧ್ಯೆ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ. ಸ್ಮರಣ ಸಂಚಿಕೆಯ ಪುಸ್ತಕವನ್ನು ವಿದ್ಯಾರ್ಥಿಗಳು ಖರೀದಿಸಬೇಕು. ಮುಖಬೆಲೆಯ ದರದ ಅರ್ಧ ಹಣವನ್ನು ನಾನು ಭರಿಸುತ್ತೇನೆ ಎಂದರು.

ADVERTISEMENT

ಜಗಳೂರಿನಲ್ಲಿ ನಡೆದ 14‌ನೇ ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನ ರಾಜ್ಯ ಸಮ್ಮೇಳನದಂತೆ ಭಾಸವಾಯಿತು. ಶಾಸಕ ಬಿ. ದೇವೇಂದ್ರಪ್ಪ ಸೇರಿದಂತೆ ಇಲ್ಲಿನ ಕನ್ನಡಾಭಿಮಾನಿಗಳ ಸಹಕಾರದಿಂದ ಮೆರವಣಿಗೆ ಹಾಗೂ ಎಲ್ಲಾ ಗೋಷ್ಠಿಗಳು ಅದ್ಭುತವಾಗಿ ನಡೆದವು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಸಣ್ಣಪುಟ್ಟ ತಕರಾರು ಬರುವುದು ಸಹಜ. ‌ಜಗಳೂರಿನ ಋಣವನ್ನು ನಾನು ತೀರಿಸಲು ಸಾಧ್ಯವಿಲ್ಲ. ಬರದನಾಡಿನಲ್ಲಿ ಸಾಹಿತಿಗಳಿಗೆ ಬರವಿಲ್ಲ. ಅರ್ಥಪೂರ್ಣವಾಗಿದ್ದ ಈ ಸಮ್ಮೇಳನ ರಾಜ್ಯದಲ್ಲಿಯೇ ಹೆಸರು ಮಾಡಿದೆ ಎಂದು ಸಮ್ಮೇಳನ ಅಧ್ಯಕ್ಷ ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಪ್ರತಿ ಸಾಹಿತ್ಯ ಸಮ್ಮೇಳನ ನಡೆದ ನಂತರ ಒಂದು ಸ್ಮರಣಾ ಕೃತಿಯನ್ನು ಬಿಡುಗಡೆ ಮಾಡುವುದು ಪರಿಪಾಠವಾಗಿದೆ. ಈ ಪುಸ್ತಕದಲ್ಲಿ ಜಗಳೂರಿನ ಭೌಗೋಳಿಕ, ಸಾಂಸ್ಕ್ರತಿಕ, ಐತಿಹಾಸಿಕ ದಟ್ಟ ವಿವರ ಇದೆ ಎಂದು ಸಂಚಿಕೆಯ ಸಂಪಾದಕ‌ ಎನ್‌.ಟಿ ಎರ್ರಿಸ್ವಾಮಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಾಮದೇವಪ್ಪ, ತಾಲ್ಲೂಕು ಘಟಕದ ಅಧ್ಯಕ್ಷೆ ಸುಜಾತಮ್ಮ, ಗೌರವ ಕಾರ್ಯದರ್ಶಿ ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಪದಾಧಿಕಾರಿಗಳಾದ ಪಲ್ಲಾಗಟ್ಟೆ ಶೇಖರಪ್ಪ, ಪ್ರಾಂಶುಪಾಲ ರಂಗಪ್ಪ, ನಾಗಲಿಂಗಪ್ಪ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಸ್. ಚಿದಾನಂದಪ್ಪ, ಪತ್ರಕರ್ತ ಬಿ.ಪಿ. ಸುಭಾನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.