ದಾವಣಗೆರೆ: ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮುಖಂಡರು ಇಲ್ಲಿನ ಎಸ್.ಎಸ್.ಮಾಲ್ ಹಾಗೂ ಗೀತಾಂಜಲಿ ಚಿತ್ರಮಂದಿರಕ್ಕೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಚಿತ್ರಮಂದಿರದಲ್ಲಿನ ಪೋಸ್ಟರ್‌ಗಳನ್ನು ಕಿತ್ತೆಸೆದು, ಕಮಲ್ ಹಾಸನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟಿದ್ದು ಎಂಬ ಹೇಳಿಕೆ ನೀಡಿರುವ ಕಮಲ್ ಹಾಸನ್ ವಿರುದ್ಧ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಲಾಗಿದೆ. ಕ್ಷಮೆ ಕೇಳಿದರೆ ಮಾತ್ರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದರೂ, ಕ್ಷಮೆ ಕೇಳದಿರುವುದು ದುರಹಂಕಾರದ ಪರಮಾವಧಿ’ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಭಾಷೆಗಿಂತ ಯಾರೂ ದೊಡ್ಡವರಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು. ಕನ್ನಡ ವಿರೋಧಿ ಚಿತ್ರಮಂದಿರಗಳ ಮಾಲೀಕರು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿರುವುದು ಖಂಡನೀಯ’ ಎಂದರು.
‘ನಗರದಲ್ಲಿನ ಎಸ್‌ಎಸ್ ಮಾಲ್ ಸೇರಿದಂತೆ ಯಾವುದೇ ಚಿತ್ರಮಂದಿರಗಳು ಥಗ್ ಲೈಫ್ ಸಿನಿಮಾ ಪ್ರದರ್ಶನಕ್ಕೆ ಮುಂದಾದರೆ ಮುಂದಾಗುವ ಅನಾಹುತಗಳಿಗೆ ಮಾಲೀಕರೇ ಹೊಣೆಯಾಗುತ್ತಾರೆ’ ಎಂದು ಎಚ್ಚರಿಸಿದರು.
ಮಹಿಳಾ ಘಟಕದ ಮಂಜುಳಾ ಮಾಂತೇಶ್, ಮೀನಾಕ್ಷಮ್ಮ, ಸರೋಜಮ್ಮ, ಗೋಪಾಲ್ ದೇವ್ರಮನೆ, ಜಬೀವುಲ್ಲಾ, ಗಿರೀಶ್ ಕುಮಾರ್, ಆಟೊ ರಫೀಕ್, ಸುರೇಶ್, ತುಳಸಿ ರಾಮ್, ರಾಕಿ, ವಿನಯ್, ಚಂದ್ರು, ಗುರುಮೂರ್ತಿ, ಮುಸ್ತಫಾ, ಇಬ್ರಾಹಿಂ, ಸಾಧಿಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.