ದಾವಣಗೆರೆ: ಆರನೇ ಶ್ರೇಯಾಂಕದ ಆಟಗಾರ ಗೌತಮ್ ಎಸ್.ನಾಯರ್ ಹಾಗೂ ಎಂಟನೇ ಶ್ರೇಯಾಂಕಿತ ಆದಿತ್ಯ ಜೋಶಿ ಅವರು15 ಮತ್ತು 17
ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಘಾತ ಅನುಭವಿಸಿದರು.
ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ (ಡಿಡಿಬಿಎ) ಆಶ್ರಯದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಹಣಾಹಣಿಯಲ್ಲಿ ಗೌತಮ್ 22–20, 18–21, 7–21ರಿಂದ ಬೆಂಗಳೂರಿನ ವಿಶಾಲ್ ಡಿ.ಆನಂದ್ ವಿರುದ್ಧ ಪರಾಭವಗೊಂಡರು.
ತೀವ್ರ ಪೈಪೋಟಿ ಕಂಡ ಮೊದಲ ಗೇಮ್‌ನಲ್ಲಿ ಗೌತಮ್ ಪ್ರಯಾಸದಿಂದಲೇ ಗೆದ್ದರು. ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ವಿಶಾಲ್ 1–1ರಿಂದ ಸಮಬಲ ಸಾಧಿಸಿದರು. ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ವಿಶಾಲ್ ನಿರಾಯಾಸವಾಗಿ ಎದುರಾಳಿಯನ್ನು ಸೋಲಿಸಿ ಸಂಭ್ರಮಿಸಿದರು.
17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲೂ ಗೌತಮ್ ಹೋರಾಟ ಅಂತ್ಯವಾಯಿತು. ಅವರು 17–21, 11–21ರಿಂದ ಬೆಳಗಾವಿಯ ಮಹಿಮ್ ಎದುರು ಮಣಿದರು.
15 ವರ್ಷದೊಳಗಿನ ವಿಭಾಗದ ಮತ್ತೊಂದು ಪಂದ್ಯದಲ್ಲಿ ಆದಿತ್ಯ 17–21, 15–21ರಿಂದ ದೇವಾಂಶ್ ಲಾಲ್ ಎದುರು ಸೋಲು ಕಂಡರು.
ಬಾಲಕಿಯರ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕದ ಸುಪ್ರಿತಾ ದೀಪಕ್ 21–23, 18–21ರಿಂದ ಅದಿತಿ ಸುಶಾಂತ್ ವಿರುದ್ಧ ಆಘಾತ ಕಂಡರು.
ಇತರ ಪಂದ್ಯಗಳಲ್ಲಿ ಧನ್ಯಾ ಮಂಜುನಾಥ್ 21–15, 21–9ರಿಂದ ವೈಷ್ಣವಿ ನಾರಾಯಣನ್ ವಿರುದ್ಧ, ಎಸ್.ಸ್ಮೃತಿ 17–21, 21–16, 21–13ರಿಂದ ಹನ್ಸಿಕಾ ರಾಕೇಶ್ ವಿರುದ್ಧ, ಶ್ರೀನಾಗಲಕ್ಷ್ಮಿ 21–18, 21–18ರಿಂದ ಬಿ.ಜನ್ಯಶ್ರೀ ವಿರುದ್ಧ ಗೆಲುವು ಪಡೆದರು.
ರೋಚಕ ಹಣಾಹಣಿ: 17 ವರ್ಷದೊಳ ಗಿನ ಬಾಲಕರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಎರಡು ಪಂದ್ಯಗಳಲ್ಲಿ ರೋಚಕ ಹಣಾಹಣಿ ಕಂಡುಬಂತು.
ಬೆಂಗಳೂರಿನ ಆಟಗಾರರಾದ ಆರವ್ ಬಾಸಕ್ ಮತ್ತು ಮೆಹುಲ್ ಮಾನವ್ ಅವರು ಸೊಗಸಾದ ಆಟ ಆಡಿ ನೆರೆದಿದ್ದವರನ್ನು ರಂಜಿಸಿದರು. ಆರವ್ 22–20, 20–22, 21–14ರಿಂದ ದೇವಾಂಶ್ ಚೌಧರಿ ಅವರನ್ನು ಮಣಿಸಿದರೆ, ಮೆಹುಲ್ 20–22, 26–24, 21–16ರಿಂದ ಸ್ವರೂಪ್ ಪಾಲಾಕ್ಷಯ್ಯ ವಿರುದ್ಧ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.