ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದ ಕಾರ್ಣೀಕದ ಕಟ್ಟೆಯಲ್ಲಿ ಮಂಗಳವಾರ ತುಂತುರು ಮಳೆ ಸಿಂಚನದ ನಡುವೆ ಕಾರ್ಣೀಕೋತ್ಸವ ವೈಭವದಿಂದ ಜರುಗಿತು.
ಹರಳಹಳ್ಳಿ ಆಂಜನೇಯ ಸ್ವಾಮಿ ಆವಾಹಿತ ವ್ಯಕ್ತಿ ʼ ಕರಿ ಕಂಬಳಿ ಮೇಲೆ ಮುತ್ತಿನ ರಾಶಿ, ಸುರಿದೀತಲೆ ರಾಶಿ ಮೂರಾದೀತಲೆ ಎಚ್ಚರʼ ಎಂದು ನುಡಿದ.
ಮುಂದಿನ ದಿನಮಾನಗಳ ಕುರಿತು ಕಾರ್ಣೀಕೋತ್ಸವ ಆಲಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಹಸ್ರಾರು ಸಂಖ್ಯೆ ಜನತೆ ಆಗಮಿಸಿದ್ದರು.
ರಾಜಬೀದಿ ಉತ್ಸವ: ಕಾರ್ಣೀಕೋತ್ಸವಕ್ಕೂ ಮುನ್ನ ಗ್ರಾಮದ ರಾಜಬೀದಿಯಲ್ಲಿ ಹರಳಹಳ್ಳಿ ಆಂಜನೇಯ ಸ್ವಾಮಿ, ಹಿರೆಹಾಲಿವಾಣದ ಏಳೂರು ಕರಿಯಮ್ಮ, ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
ಪಟ್ಟಣದ ಜೋಯ್ಸರ ಬೀದಿಯಲ್ಲಿ ಕಾರ್ಣೀಕ ಹೇಳುವ ಹರಳಹಳ್ಳಿ ಆಂಜನೇಯಸ್ವಾಮಿಗೆ 'ತುಳಸಿಹಾರ' ಸಮರ್ಪಿಸಿ ಪೂಜೆ ಮಾಡಿ ಬೀಳ್ಕೊಟ್ಟರು.
ಕೊಂಬು. ಕಹಳೆ, ಮಂಗಳವಾದ್ಯ, ಜಾಗಟೆ ಮೇಳ, ಗೊರವರ ತಂಡ, ಜಾಂಚ್ ಮೇಳ, ನಾಸಿಕ್ ಡೋಲು. ಭೂತದ ಹಲಗೆ ಹಿಡಿದವರು, ದಾಸರು, ಗೊರವರ ತಂಡ, ಡೊಳ್ಳು, ತಮಟೆ ಮೇಳ ಉತ್ಸವಕ್ಕೆ ಕಳೆ ತಂದಿದ್ದವು.
ಬೀರಲಿಂಗೇಶ್ವರ, ದುರ್ಗಾಂಬಿಕ, ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಕಾಳಮ್ಮ, ಜೋಡಿ ಆಂಜನೇಯ ಉತ್ಸವಮೂರ್ತಿಗಳು ಸುತ್ತಮುತ್ತಲ ಗ್ರಾಮಗಳಾದ ದಿಬ್ಬದಹಳ್ಳಿ, ಕೊಪ್ಪ, ಹಾಲಿವಾಣ, ತಿಮ್ಲಾಪುರದಿಂದ ಆಗಮಿಸಿದ್ದವು.
ಕೆರೆ ಬಯಲಿನ ಜಾತ್ರೆಗೆ ಜನಸಾಗರ ಹರಿದುಬಂದು ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾರ ಮಂಡಕ್ಕಿ, ಮೆಣಸಿನಕಾಯಿ, ಬೆಂಡು ಬತ್ತಾಸು, ಐಸ್ ಕ್ರೀಂ, ಜ್ಯೂಸ್ ಸ್ಟಾಲ್. ಬಲೂನ್, ಆಟಿಕೆ ಸಾಮಾನು, ಪೂಜಾ ಸಾಮಗ್ರಿ ಅಂಗಡಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗಿದ್ದು ವಿಶೇಷ.
ಟ್ರಾಕ್ಟರ್, ಆಟೋ, ದ್ವಿಚಕ್ರವಾಹನ, ಕಾರುಗಳ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಪೊಲೀಸರು ಭದ್ರತೆ ಒದಗಿಸಿ ಸುಗಮ ವಾಹನ ಸಂಚಾರ ವ್ಯವಸ್ಥೆ ಮಾಡಿದ್ದರು.
ಹೆಳವನಕಟ್ಟೆ ಗಿರಿಯಮ್ಮ ಸಂಸ್ಮರಣೆ: ಹರಿಹರ ದಾಸ ಸಾಹಿತಿ ಹೆಳವನಕಟ್ಟೆ ಗಿರಿಯಮ್ಮನ ಐಕ್ಯದಿನವನ್ನು ಕೊಮಾರನಹಳ್ಳಿಯ ದೇವಾಲಯದಲ್ಲಿ ಮಂಗಳವಾರ ಆಚರಿಸಿದರು.
ಸಂಸ್ಮರಣಾ ದಿನದ ಪ್ರಯುಕ್ತ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ, ವಸಂತೋತ್ಸವ, ಗಿರಿಯಮ್ಮ ವಿರಚಿತ ಗೀತೆಗಳನ್ನು ಹಾಡಿದರು.
ಹುತ್ತ ಪೂಜೆ: ನಾಗರ ಪಂಚಮಿ ಹಬ್ಬದ ಪ್ರಯುಕ್ತ ಕೆಲವೆಡೆ ಹುತ್ತಕ್ಕೆ ಹಾಲೆರದು ಮಹಿಳೆಯರು ಪೂಜೆ ಸಲ್ಲಿಸಿದರು. ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸಿದರು.
ಕುಂಬಳೂರು ಹನುಮಂತ ದೇವರ ಕಾರ್ಣೀಕ ʼಬಸವನ ಪಾದಕ್ಕೆ ಗೆಜ್ಜೆ ಬಿಗಿದೀತು, ಆಕಾಶಕ್ಕೆ ಸಿಡಿಲು ಬಡಿದು ಮುತ್ತಿನ ಮಳೆ ಸುರಿಸೀತು, ಕಾಳಿಂಗ ಸರ್ಪ ವಿಷ ಕಕ್ಕಿ ಅಮೃತ ಕುಡಿದೀತು, ಸಂಪುʼ
ದೇವರಬೆಳಕೆರೆ ಮೈಲಾರ ಲಿಂಗೇಶ್ವರ ಕಾರ್ಣೀಕ’ ಕಂಚಿನ ಗಂಗಾಳದಾಗ ಪಂಜರದ ಗಿಳಿ ಕುತೀತಲೆ ಪರಾಕ್ʼ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.