ADVERTISEMENT

ಕಾಲ್ತುಳಿತ ಪ್ರಕರಣ | ಕೆಎಸ್‌ಸಿಎಯಿಂದ ಯಾವುದೇ ಪ್ರಮಾದವಾಗಿಲ್ಲ: ಅಥಣಿ ವೀರಣ್ಣ

ಬಾಪೂಜಿ ‘ಬಿ’ ಸ್ಕೂಲ್ ಅಧ್ಯಕ್ಷ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:38 IST
Last Updated 28 ಜುಲೈ 2025, 6:38 IST
ದಾವಣಗೆರೆಯಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ಕ್ಲಬ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿರುವ ವೀನಸ್ ಕ್ರಿಕೆಟ್ ಕ್ಲಬ್‌ನ ಆಟಗಾರರಿಗೆ ಟ್ರೋಫಿ ಪ್ರದಾನ ಮಾಡಲಾಯಿತು. ಸಂಜಯ್ ಪಾಲ್, ಕೆ.ಶಶಿಧರ್, ಉದ್ಯಮಿ ಅಥಣಿ ವೀರಣ್ಣ, ದಿನೇಶ್ ಶೆಟ್ಟಿ, ಕೆ.ವಿ.ಮಂಜುನಾಥ್ ರಾಜು ಉಪ‍ಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ಕ್ಲಬ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿರುವ ವೀನಸ್ ಕ್ರಿಕೆಟ್ ಕ್ಲಬ್‌ನ ಆಟಗಾರರಿಗೆ ಟ್ರೋಫಿ ಪ್ರದಾನ ಮಾಡಲಾಯಿತು. ಸಂಜಯ್ ಪಾಲ್, ಕೆ.ಶಶಿಧರ್, ಉದ್ಯಮಿ ಅಥಣಿ ವೀರಣ್ಣ, ದಿನೇಶ್ ಶೆಟ್ಟಿ, ಕೆ.ವಿ.ಮಂಜುನಾಥ್ ರಾಜು ಉಪ‍ಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯಿಂದ ಯಾವುದೇ ಪ್ರಮಾದವಾಗಿಲ್ಲ’ ಎಂದು ಬಾಪೂಜಿ ‘ಬಿ’ ಸ್ಕೂಲ್ ಅಧ್ಯಕ್ಷ ಅಥಣಿ ವೀರಣ್ಣ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕೆಎಸ್‌ಸಿಎ ತುಮಕೂರು ವಲಯದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಚಲನಚಿತ್ರಗಳ ನಾಯಕ ನಟರನ್ನು ಬಿಟ್ಟರೆ ಕ್ರಿಕೆಟ್ ಆಟಗಾರರಿಗೆ ಮಾತ್ರ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಖ್ಯಾತ ಆಟಗಾರ ವಿರಾಟ್ ಕೊಹ್ಲಿಯನ್ನು ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬಂದಿದ್ದ ಅಭಿಮಾನಿಗಳು ನೋವು ಅನುಭವಿಸುವಂತಾಗಿದ್ದು ವಿಷಾದನೀಯ. ಈ ಘಟನೆಯಿಂದ ಕೆಎಸ್‌ ಸಿಎಯ ಕೆಲವು ಪದಾಧಿಕಾರಿಗಳು ರಾಜೀನಾಮೆ ನೀಡುವಂತಾಗಿದ್ದು ಬೇಸರದ ಸಂಗತಿ’ ಎಂದರು.

ADVERTISEMENT

‘ಕೆಎಸ್‌ಸಿಎ‌ ವತಿಯಿಂದ ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುತ್ತಿರುವುದು ಅಭಿನಂದನೀಯ. ಸಂಸ್ಥೆಯು ರಾಜ್ಯದ ವಿವಿಧೆಡೆ ಕ್ರೀಡಾಂಗಣ‌ ಅಭಿವೃದ್ಧಿಗೆ ನೀಡಿದಂತೆಯೇ ₹10 ಕೋಟಿ ಅನುದಾನ ನೀಡುವ ಮೂಲಕ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

‘ಭಾರತದಲ್ಲಿ ಕ್ರಿಕೆಟ್‌ಗೆ ಸಾಕಷ್ಟು ಜನಪ್ರಿಯತೆ ಇದೆ. ಐಪಿಎಲ್ ಗೆಲುವಿನ ವಿಜಯೋತ್ಸವದ ಸಂದರ್ಭ ಆರ್‌ಸಿಬಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ್ದರಿಂದ ದುರ್ಘಟನೆ ನಡೆಯಿತು’ ಎಂದು ಧೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ತಿಳಿಸಿದರು.

‘ಫುಟ್‌ಬಾಲ್, ಹಾಕಿ, ಬ್ಯಾಡ್ಮಿಂಟನ್, ಕೊಕ್ಕೊ, ಕಬಡ್ಡಿ, ಅಥ್ಲೆಟಿಕ್ಸ್ ಮತ್ತಿತರ ಕ್ರೀಡೆಗಳು ಇದ್ದರೂ ಯುವಕರು ಕ್ರಿಕೆಟ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಾಕಷ್ಟು ಸ್ಪರ್ಧೆ ಇರುವುದರಿಂದ ಎಲ್ಲ ಆಟಗಾರರೂ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಿಲ್ಲ. ಯುವಜನರು ಮೂರು ಹೊತ್ತು ಕ್ರಿಕೆಟ್ ಆಡದೇ ಓದಿನತ್ತಲೂ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಜೆ.ಎಚ್. ಪಟೇಲ್ ಬಡಾವಣೆಯಲ್ಲಿನ ಕ್ರೀಡಾಂಗಣದ ಪಕ್ಕದಲ್ಲಿರುವ ಮುಕ್ಕಾಲು ಎಕರೆ ಭೂಮಿಗಾಗಿ ಸಂಸ್ಥೆ ಬೇಡಿಕೆ ಇರಿಸಿದೆ. ಅರ್ಜಿ ಕೊಟ್ಟರೆ ಪ್ರಾಧಿಕಾರ ಅದನ್ನು ಪರಿಗಣಿಸಲಿದೆ’ ಎಂದು ಭರವಸೆ ನೀಡಿದರು.

ತುಮಕೂರು ವಲಯದ ಸಂಚಾಲಕ ಕೆ.ಶಶಿಧರ, ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ಷಿಕ ವರದಿ ವಾಚಿಸಿದರು. ‘ಎರಡರಿಂದ ಮೂರು ತಿಂಗಳಲ್ಲಿ ಜೆ.ಎಚ್. ಪಟೇಲ್ ಬಡಾವಣೆಯಲ್ಲಿನ ನೂತನ ಟರ್ಫ್ ಅಂಕಣದಲ್ಲಿ ಪಂದ್ಯಗಳು ನಡೆಯಲಿವೆ’ ಎಂದರು.

ಸಂಸ್ಥೆಯ ವಲಯ ಸಂಯೋಜಕ ಕೆ.ವಿ.ಮಂಜುನಾಥ್‌ ರಾಜು, ಕ್ರೀಡಾ ಕೇಂದ್ರದ ಸಹಾಯಕ ಕಾರ್ಯದರ್ಶಿ ಸಂಜಯ್ ಪಾಲ್, ಚಿತ್ರದುರ್ಗದ ಅಶೋಕ್,‌ ಬಳ್ಳಾರಿಯ ಮೆಹಫೂಜ್ ಅಲಿ ಖಾನ್ ಹಾಜರಿದ್ದರು.

2024-25ನೇ ಸಾಲಿನ ವಿವಿಧ ಹಂತಗಳ ಟೂರ್ನಿಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಂಗ್ ಬಾಯ್ಸ್ ಹರಿಹರ‌ ತಂಡ ನಾಲ್ಕನೇ ಡಿವಿಷನ್‌ನಲ್ಲಿ, ದಾವಣಗೆರೆಯ ಸಿಟಿ ಸ್ಪೋರ್ಟ್ಸ್ ಕ್ಲಬ್ ಮೂರನೇ‌ ಡಿವಿಷನ್‌ನಲ್ಲಿ, ತೋರಣಗಲ್ಲಿನ ವಿಜಯ ನಗರ ಸ್ಪೋರ್ಟ್ಸ್ ಕ್ಲಬ್ ಎರಡನೇ ಡಿವಿಷನ್‌ನಲ್ಲಿ, ವೀನಸ್ ಕ್ರಿಕೆಟ್ ಕ್ಲಬ್ ತಂಡ ಮೊದಲ ಡಿವಿಷನ್‌ನಲ್ಲಿ ಚಾಂಪಿಯನ್ ಆಗಿದೆ. 

ಅಂತರಕ್ಲಬ್ ಟೂರ್ನಿಯ 16 ವರ್ಷದೊಳಗಿನವರ ವಿಭಾಗದಲ್ಲಿ ವೀನಸ್ ಕ್ರಿಕೆಟ್ ಕ್ಲಬ್, 19 ವರ್ಷದೊಳಗಿನವರ ವಿಭಾಗದಲ್ಲಿ ತುಮಕೂರಿನ ಅಕೇಷನಲ್ಸ್ ತಂಡಗಳು ಚಾಂಪಿಯನ್ ಆದವು.

ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪಾರ್ಥ ಜೋಯಿಸ ಪ್ರಾರ್ಥಿಸಿದರು. ರಾಘವೇಂದ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.