ADVERTISEMENT

ಸಿ.ಸಿ.ಟಿವಿ ಕ್ಯಾಮೆರಾಗಳಿಗೆ ಅನುದಾನದ ಕೊರತೆ

ಅಡಿಕೆ ಕಳವು ತಡೆಗೆ ಬೇಕು ಕಣ್ಗಾವಲು l ಪೊಲೀಸ್ ಠಾಣೆಗಳಿಂದ ಕ್ಯಾಮೆರಾಗಳಿಗೆ ಬೇಡಿಕೆ

ಡಿ.ಕೆ.ಬಸವರಾಜು
Published 1 ಆಗಸ್ಟ್ 2022, 3:13 IST
Last Updated 1 ಆಗಸ್ಟ್ 2022, 3:13 IST
ಆವರಗೊಳ್ಳ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ
ಆವರಗೊಳ್ಳ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ   

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆಗೆ ಪಂಚಾಯಿತಿಗಳಿಗೆ ಅನುದಾನದ ಕೊರತೆ ಇದೆ. ಇದರಿಂದಾಗಿ ಆಯಕಟ್ಟಿನ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವುದು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಕೆಲವು ಗ್ರಾಮ ಪಂಚಾಯಿತಿಗಳ ಕಟ್ಟಡಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಸ್ವಂತ ಕಟ್ಟಡ ಇಲ್ಲದಿರುವುದು ಇದಕ್ಕೆ ಕಾರಣ. ಕೆಲವೊಂದು ಪಂಚಾಯಿತಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಅವುಗಳು ಕಾರ್ಯ ನಿರ್ವಹಿಸುತ್ತಿಲ್ಲ. ಜಿಲ್ಲೆಯಲ್ಲಿ ಶೇ 99ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಕ್ಯಾಮೆರಾಗಳ ಅಳವಡಿಕೆಯಾಗಿವೆ ಎಂಬುದು ಜಿಲ್ಲಾ ಪಂಚಾಯಿತಿ ಕಚೇರಿಯ ಅಧಿಕಾರಿಗಳ ಲೆಕ್ಕಾಚಾರವಾದರೂ ಇನ್ನೂ ಕೆಲವು ಗ್ರಾಮ ಪಂಚಾಯಿತಿಗಳ ಕಟ್ಟಡಗಳಲ್ಲಿ ಆಗಿಲ್ಲ.

ಗ್ರಾಮ, ಪಟ್ಟಣಗಳ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಬೇಡಿಕೆಗಳು ಬರುತ್ತಿವೆ. ಅದನ್ನು ಪೂರೈಸಲು ಆಗುತ್ತಿಲ್ಲ. ಅನುದಾನ ಕೊರತೆಯೇ ಇದಕ್ಕೆ ಕಾರಣ.

ADVERTISEMENT

ಕ್ಯಾಮೆರಾ ಅಳವಡಿಕೆ ಏಕೆ ಅವಶ್ಯಕ?

ಗ್ರಾಮ ಪಂಚಾಯಿತಿಗಳಿಂದ ದೊರಕುವ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಕಚೇರಿ ದಾಖಲೆಗಳ ಸುರಕ್ಷತೆ, ನೌಕರರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, .ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ.

‘ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆಗೆ ಜಿಲ್ಲಾ ಪಂಚಾಯಿತಿಯಿಂದ ಯಾವುದೇ
ಅನುದಾನವಿಲ್ಲ. ಸ್ವಂತ ಸಂಪನ್ಮೂಲ
ಗಳನ್ನು ಕ್ರೋಡೀಕರಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಎಚ್.ಬಸವರಾಜ ಹೇಳುತ್ತಾರೆ.

‘ದಾವಣಗೆರೆ ತಾಲ್ಲೂಕಿನಲ್ಲಿ ಕನಗೊಂಡನಹಳ್ಳಿ, ಮಾಯಕೊಂಡ, ಹುಚ್ಚವ್ವನಹಳ್ಳಿ ಗ್ರಾಮಗಳಲ್ಲಿ ತಾಂತ್ರಿಕ ಕಾರಣಗಳಿಂದ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ದಾವಣಗೆರೆ ತಾಲ್ಲೂಕು ಪಂಚಾಯಿತಿ ಇಒ ಆನಂದ್ ಎಂ.ಜೆ. ಮಾಹಿತಿ ನೀಡಿದರು.

‘ಸಿ.ಸಿ.ಟಿವಿ ಕ್ಯಾಮೆರಾಗಳ ನಿರ್ವಹಣೆ ಕಷ್ಟ. ಅವಘಡವಾದರೆ ಕೋರ್ಟು ಕಚೇರಿಗಳಿಗೆ ಅಲೆದಾಡಬೇಕು. ಪೊಲೀಸರೇ ನಿರ್ವಹಣೆ ಜವಾಬ್ದಾರಿ ತೆಗೆದುಕೊಂಡರೆ ಒಳಿತು ಎಂಬುದು’ ಆವರಗೊಳ್ಳ ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ್ ಅವರ ಅಭಿಪ್ರಾಯ.

‘ಮಾಯಕೊಂಡ ಮುಖ್ಯ ರಸ್ತೆ, ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಪೊಲೀಸ್ ಠಾಣೆಯಿಂದ ಪ್ರಸ್ತಾವ ಬಂದಿದೆ. ಇದನ್ನು ಸಭೆಯಲ್ಲಿ ಇಟ್ಟು ಅನುಮೋದನೆ ಪಡೆದುಕೊಂಡು ಲಭ್ಯವಿರುವ ಅನುದಾನದಲ್ಲಿ ಅಳವಡಿ
ಸಲಾಗುತ್ತದೆ’ ಎಂದರು ಮಾಯಕೊಂಡ ಪಿಡಿಒ ನಾಗರಾಜ್.

ಅಡಿಕೆ ಕಳ್ಳತನ ತಡೆಗೆಸಿ.ಸಿ.ಟಿವಿ ಕ್ಯಾಮೆರಾ ಬೇಕು

‘ನಮ್ಮ ಭಾಗದಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿವೆ. ರಾತ್ರಿ ವೇಳೆಯಲ್ಲಿ ಕಳ್ಳರು ಅಡಿಕೆ, ಮೋಟರ್ ಕೇಬಲ್‌ಗಳನ್ನು ಕದಿಯುತ್ತಿದ್ದು, ಅದನ್ನು ಪತ್ತೆ ಹಚ್ಚಲು ಸಿ.ಸಿ.ಟಿವಿ ಕ್ಯಾಮೆರಾಗಳು ಬೇಕು. ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿದರೆ ಕಳ್ಳರ ಚಲನವಲನಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ರೈತರು ಜಮೀನಿನಲ್ಲಿ ರಾತ್ರಿಯ ವೇಳೆ ನಿದ್ರೆಗೆಟ್ಟು ಅಡಿಕೆಯನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಕಕ್ಕರಗೊಳ್ಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಜಿ. ಶಾಂತರಾಜು.

ಹರಿಹರದಲ್ಲಿಬಹುತೇಕ ನಿಷ್ಕ್ರಿಯ

ಇನಾಯತ್ ಉಲ್ಲಾ ಟಿ.

ಹರಿಹರ: ತಾಲ್ಲೂಕಿನಲ್ಲಿ 23 ಗ್ರಾಮ ಪಂಚಾಯಿತಿಗಳಿದ್ದು, ಆ ಪೈಕಿ ಬೆಳ್ಳೂಡಿ, ಡಿ.ಬಿ.ಕೆರೆ ಸೇರಿದಂತೆ ಬಹುತೇಕ ಪಂಚಾಯಿತಿಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ನಿಷ್ಕ್ರಿಯವಾಗಿವೆ. ನಿರ್ವಹಣೆ ಕೊರತೆಯಿಂದ ಅವು ಪ್ರದರ್ಶನಕ್ಕೆ ಮಾತ್ರ ಎಂಬಂತಾಗಿವೆ. ಕೆಲವೆಡೆ ಉದ್ದೇಶಪೂರ್ವಕವಾಗಿ ಕ್ಯಾಮೆರಾಗಳು ಕೆಲಸ ಮಾಡದಿದ್ದರೆ ಒಳ್ಳೆಯದು ಎಂಬ ಭಾವನೆ ಇದೆ.

‘ಎಲ್ಲಾ ಪಂಚಾಯಿತಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ನಿಷ್ಕ್ರಿಯವಾಗಿರುವ ಕಡೆ ಕಾರ್ಯ ನಿರ್ವಹಣೆ ಮಾಡುವಂತೆ ಸೂಚನೆ ನೀಡುತ್ತೇನೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಗಂಗಾಧರನ್ ಜಿ.ಡಿ. ಹೇಳಿದರು.

46 ಪಂಚಾಯತಿಗಳಲ್ಲಿ ಅಳವಡಿಕೆ

ಎನ್‌.ಕೆ. ಆಂಜನೇಯ

ಹೊನ್ನಾಳಿ: ‘ಅವಳಿ ತಾಲ್ಲೂಕಿನ 46 ಗ್ರಾಮ ಪಂಚಾಯಿತಿಗಳಲ್ಲೂ ಸಿ.ಸಿ.ಟಿವಿ ಕ್ಯಾಮೆರಾಗಳು ಅಳವಡಿಕೆಯಾಗಿವೆ. ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ದುರಸ್ತಿಗೆ ಬಂದಿದ್ದು, ಅವುಗಳನ್ನು ತಕ್ಷಣ ದುರಸ್ತಿ ಮಾಡಲಾಗುವುದು’ತಾಲ್ಲೂಕು ಪಂಚಾಯಿತಿ ಇಒ ರಾಮಾಭೋವಿ ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪೊಲೀಸರ ಕೋರಿಕೆಯ ಮೇರೆಗೆ ಚೀಲೂರು, ಸುರಹೊನ್ನೆ ಗ್ರಾಮಗಳ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸವಳಂಗ ಗ್ರಾಮ ಪಂಚಾಯಿತಿಯಿಂದ ಬೇಡಿಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮೂರು ಗ್ರಾ.ಪಂ.ಗಳಲ್ಲಿ ಅಳವಡಿಕೆಯಾಗಿಲ್ಲ

ಡಿ.ಎಂ.ಹಾಲಾರಾಧ್ಯ

ನ್ಯಾಮತಿ: ತಾಲ್ಲೂಕಿನಲ್ಲಿ ಒಟ್ಟು 17 ಗ್ರಾಮ ಪಂಚಾಯಿತಿಗಳಲ್ಲಿ ಚಟ್ನಹಳ್ಳಿ, ಫಲವನಹಳ್ಳಿ ಮತ್ತು ಗುಡ್ಡೇಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಗ್ರಾಮ ಪಂಚಾಯಿತಿಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಫಲವನಹಳ್ಳಿ ಪಂಚಾಯಿತಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೆ,ಚಟ್ನಹಳ್ಳಿಯಲ್ಲಿ ಕಟ್ಟಡ ಹಳೆಯದಾಗಿದೆ. ಗುಡ್ಡೆಹಳ್ಳಿಯಲ್ಲಿ ಸ್ವಂತ
ಕಟ್ಟಡವಿದ್ದರೂ ಕ್ಯಾಮರಾ ಅಳವಡಿಸಿಲ್ಲ.

‘ತಾಲ್ಲೂಕಿನ ಗಂಗನಕೋಟೆಯಲ್ಲಿ ಈಚೆಗೆ ಹಸು ಕಳವು ಪ್ರಕರಣ, ಚಿನ್ನಿಕಟ್ಟೆ ಗ್ರಾಮ ಪಂಚಾಯಿತಿ ಕಚೇರಿಯ ಮಹಿಳಾ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಸಿ.ಸಿ.ಟಿವಿ ಕ್ಯಾಮೆರಾಗಳು ಸಹಕಾರಿಯಾದವು. ಗ್ರಾಮಗಳಲ್ಲಿಯೂ ಕಳವು ಪ್ರಕರಣಗಳು ಕಡಿಮೆ ಆಗುತ್ತಿವೆ’ ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಪಿಡಿಒ ಜಿ.ಬಿ. ವಿಜಯಕುಮಾರ ಹೇಳುತ್ತಾರೆ.

21 ಗ್ರಾ.ಪಂ.ಗಳಿಗಿಲ್ಲ ಕ್ಯಾಮೆರಾ ಕಣ್ಗಾವಲು

ಎಚ್.ವಿ. ನಟರಾಜ್

ಚನ್ನಗಿರಿ: ಇಡೀ ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ತಾಲ್ಲೂಕು ಆಗಿರುವ ಚನ್ನಗಿರಿಯಲ್ಲಿ 21 ಗ್ರಾಮ ಪಂಚಾಯಿತಿಯಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ.‘21 ಗ್ರಾಮ ಪಂಚಾಯಿತಿಗಳಿಗೆ ಶೀಘ್ರವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ’ ಎಂದು ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್ ಮಾಹಿತಿ ನೀಡಿದರು.

---

ಗ್ರಾಮ ಪಂಚಾಯಿತಿಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆಯಿಂದ ಮಹಿಳಾ ಸಿಬ್ಬಂದಿ ಧೈರ್ಯವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ.

-ಆಶಾ, ಪಿಡಿಒ, ಕುಂಕುವ ಗ್ರಾಮ ಪಂಚಾಯಿತಿ

ಸರ್ಕಾರದ ಸವಲತ್ತುಗಳನ್ನು ಪಡೆಯಲು ಬರುವ ಜನರನ್ನು ಅಧಿಕಾರಿಗಳು ಅಲೆದಾಡಿಸುತ್ತಾರೆ. ಸಿ.ಸಿ.ಟಿವಿ ಕ್ಯಾಮೆರಾಗಳ ಸಹಾಯದಿಂದ ಅದನ್ನು ಪತ್ತೆ ಹಚ್ಚಬಹುದು.

-ವೈ.ಎಸ್. ಪ್ರಸನ್ನಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ, ಕಕ್ಕರಗೊಳ್ಳ

‘ಗ್ರಾಮ ಪಂಚಾಯಿತಿಯ ಸ್ವಂತ ನಿಧಿಯು ಸಿಬ್ಬಂದಿಯ ಸಂಬಳ, ಕುಡಿಯುವ ನೀರು ನಿರ್ವಹಣೆಗೆ ಹೋಗುವುದರಿಂದ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಫಂಡ್ ಅಗತ್ಯವಿದೆ.

-ಶಾಂತ, ಪಿಡಿಒ, ಐಗೂರು ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.