ADVERTISEMENT

ಜಗಳೂರು | ಬಾರದ ಮಳೆ: ಬಸವಳಿದ ರೈತ

ಜಗಳೂರು ತಾಲ್ಲೂಕಿನಲ್ಲಿ 55 ಸಾವಿರ ಹೆಕ್ಟೇರ್ ಬೆಳೆ ನಾಶ

ಡಿ.ಶ್ರೀನಿವಾಸ
Published 22 ಅಕ್ಟೋಬರ್ 2023, 5:22 IST
Last Updated 22 ಅಕ್ಟೋಬರ್ 2023, 5:22 IST
ಜಗಳೂರು ತಾಲ್ಲೂಕಿನ ಉದ್ದಗಟ್ಟ ಸಮೀಪ ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಮೀಸಲಿಟ್ಟಿದ್ದ ಫಲವತ್ತಾದ ಎರೆಭೂಮಿಯಲ್ಲಿ ತೇವಾಂಶವನ್ನು ಪರೀಕ್ಷಿಸುತ್ತಿರುವ ಕೃಷಿ ಅಧಿಕಾರಿ ಮಿಥುನ್ ಕಿಮಾವತ್
ಜಗಳೂರು ತಾಲ್ಲೂಕಿನ ಉದ್ದಗಟ್ಟ ಸಮೀಪ ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಮೀಸಲಿಟ್ಟಿದ್ದ ಫಲವತ್ತಾದ ಎರೆಭೂಮಿಯಲ್ಲಿ ತೇವಾಂಶವನ್ನು ಪರೀಕ್ಷಿಸುತ್ತಿರುವ ಕೃಷಿ ಅಧಿಕಾರಿ ಮಿಥುನ್ ಕಿಮಾವತ್   

ಜಗಳೂರು: ನೂರು ವರ್ಷಗಳಲ್ಲಿ ಬರೋಬ್ಬರಿ ಅರ್ಧಕ್ಕೂ ಹೆಚ್ಚಿನ ವರ್ಷಗಳಲ್ಲಿ ಬರಗಾಲಕ್ಕೆ ಸಿಲುಕಿ ನಲುಗಿರುವ ಜಗಳೂರು ತಾಲ್ಲೂಕು ಪ್ರಸ್ತುತ ಮತ್ತೊಮ್ಮೆ ಬರದ ಬೇಗೆಯಲ್ಲಿ ಬೇಯುತ್ತಿದೆ.

ಯಾವುದೇ ನದಿ ಅಥವಾ ಜಲಾಶಯ ಮೂಲಗಳ ನೀರಾವರಿ ಸೌಲಭ್ಯವಿಲ್ಲದ ಇಲ್ಲಿ ಶೇ100ರಷ್ಟು ಮಳೆಯನ್ನೇ ನೆಚ್ಚಿಕೊಂಡು ರೈತರು ಸದಾ ಸಂಕಷ್ಟದ ಬದುಕನ್ನು ನಿರ್ವಹಿಸುತ್ತಿದ್ದಾರೆ. ಕಳೆದ ಮುಂಗಾರಿನಲ್ಲಿ ಮಳೆಯ ವೈಫಲ್ಯದಿಂದ ತಾಲ್ಲೂಕಿನ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಸಂಪೂರ್ಣ ಒಣಗಿ ಮುರುಟಿಕೊಂಡಿವೆ.

ಮುಂಗಾರಿನ ಬರದ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಹಿಂಗಾರು ಮಳೆಯೂ ಕೈಕೊಟ್ಟಿದ್ದು, ತಾಲ್ಲೂಕಿನ ರೈತಾಪಿ ಸಮುದಾಯ ಹಾಗೂ ಕೃಷಿ ಕೂಲಿಕಾರ್ಮಿಕರಿಗೆ ಬರ ಸಿಡಿಲು ಎರಗಿದಂತಾಗಿದೆ.

ADVERTISEMENT

ಕಸಬಾ ಮತ್ತು ಸೊಕ್ಕೆ ಹೋಬಳಿ ಪ್ರದೇಶದಲ್ಲಿ ಕಪ್ಪು ಮಣ್ಣಿನ ಭೂಮಿ ಹೆಚ್ಚಾಗಿರುವ ಪ್ರದೇಶದಲ್ಲಿ ಪ್ರತಿ ವರ್ಷ ಹಿಂಗಾರಿನ ಮಳೆಗೆ ಕಡಲೆ, ಬಿಳಿಜೋಳ, ಸೂರ್ಯಕಾಂತಿ ಮತ್ತು ರಾಗಿಯನ್ನು ಬೆಳೆಯಲಾಗುತ್ತಿತ್ತು. ಆದರೆ ಕಳೆದ 2 ತಿಂಗಳಿಂದ ಸತತವಾಗಿ ಮಳೆ ಕೊರತೆಯಾಗಿದ್ದು, ಬೇಸಿಗೆಯನ್ನೂ ಮೀರಿಸುವಂತೆ ಸುಡು ಬಿಸಿಲಿಗೆ ಭೂಮಿ ಕಾದ ಕಾವಲಿಯಂತಾಗಿದೆ.

‘ಪ್ರತಿ ವರ್ಷ ಅಕ್ಟೋಬರ್ ವೇಳೆಗೆ ಹದವಾದ ಮಳೆಯಾಗಿ, ಕಡಲೆ ಮತ್ತು ಜೋಳದ ಬಿತ್ತನೆ ಮಾಡಲಾಗುತ್ತಿತ್ತು. ಈ ಬಾರಿ ಮುಂಗಾರಿನ ಮಳೆ ಕೈಕೊಟ್ಟಿದ್ದರಿಂದ ಐದು ಎಕರೆಯಲ್ಲಿ ಬಿತ್ತೆನ ಮಾಡದೇ ಹೊಲವನ್ನು ಹದ ಮಾಡಿಕೊಂಡು ಕಡಲೆ ಬೆಳೆಗೆ ಬಿಟ್ಟುಕೊಂಡಿದ್ದೆ. ಆದರೆ ನಾಲ್ಕೈದು ತಿಂಗಳಿಂದ ಸರಿಯಾಗಿ ಮಳೆಯೇ ಬೀಳದ ಎರೆಹೊಲಗಳು ಆಳವಾಗಿ ಬಿರುಕು ಬಿಟ್ಟಿವೆ. ಮುಂದೆಯೂ ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಡಲೆ ಬಿತ್ತನೆ ಅವಧಿಯೂ ಮುಗಿಯುತ್ತಾ ಬಂದಿದ್ದು, ತೀವ್ರ ಬರ ಎರಗಿ ಬಂದಿದೆ. ದನಕರುಗಳಿಗೆ ಮೇವಿಲ್ಲ. ಜೀವನ ನಿರ್ವಹಣೆ ಹೇಗೆ ಎಂಬ ದಿಗಿಲು ಕಾಡುತ್ತಿದೆ’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ರೈತ ತಿಪ್ಪೇಸ್ವಾಮಿ ಪಾಂಡುರೆಡ್ಡಿ ‘ಪ್ರಜಾವಾಣಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದರು.

‘ಹಿಂಗಾರು ಹಂಗಾಮಿನ ಕಳೆದ 3 ತಿಂಗಳಲ್ಲಿ ತಾಲ್ಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ 70 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು.  ಕೇವಲ 19 ಮಿ.ಮೀ ಬಂದಿದೆ. ಸೆಪ್ಟೆಂಬರ್‌ನಲ್ಲಿ 79 ಮಿ.ಮೀ.ಗೆ 54 ಮಿ ಮೀ ಮತ್ತು ಅಕ್ಟೋಬರ್ 20ರವೇಳೆಗೆ 65 ಮಿ.ಮೀಗೆ 3 ಮಿ.ಮೀ ಮಳೆಯಾಗಿದ್ದು, ಪ್ರಸ್ತುತ ಆಕ್ಟೋಬರ್ ತಿಂಗಳಲ್ಲಿ ಶೇ 95ರಷ್ಟು ಮಳೆ ಕೊರತೆಯಾಗಿದೆ. ಕಳೆದ ವರ್ಷ ವಾಡಿಕೆಗಿಂತ ಶೇ 148ರಷ್ಟು ಮಳೆ ಹೆಚ್ಚು ಸುರಿದಿತ್ತು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾಹಿತಿ ನೀಡಿದ್ದಾರೆ.

‘ಜೋಳ, ರಾಗಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ ಸೇರಿದಂತೆ ಹಿಂಗಾರು ಹಂಗಾಮಿನಲ್ಲಿ 7,600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ಒಂದು ಹನಿಯೂ ಮಳೆಯಾಗದ ಕಾರಣ ಭೂಮಿಯಲ್ಲಿ ತೇವಾಂಶ ಸಂಪೂರ್ಣ ಕೊರತೆಯಾಗಿದ್ದು, ಸುಡುಬಿಸಿಲಿನ ತಾಪ ಹೆಚ್ಚಾಗಿದೆ. ಇಡೀ ತಾಲ್ಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ಎಲ್ಲೂ ಸಹ ಹಿಂಗಾರಿನ ಬಿತ್ತನೆಯಾಗಿಲ್ಲ. ಕಳೆದ ಬಾರಿ ಉತ್ತಮವಾಗಿ ಮಳೆಯಾಗಿದ್ದರಿಂದ 8 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಹಿಂಗಾರು ಬೆಳೆಗಳನ್ನು ಬಿತ್ತನೆಯಾಗಿ ಉತ್ತಮ ಇಳುವರಿ ಕೂಡ ಬಂದಿತ್ತು’ ಎಂದು ಅವರು ತಿಳಿಸಿದ್ದಾರೆ.

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಬೀಳದ ಕಾರಣ ತಾಲ್ಲೂಕಿನ ಹಲವೆಡೆ ಅಂತರ್ಜಲ ಪ್ರಮಾಣ ಕುಸಿಯುತ್ತಿದ್ದು, ನೂರಾರು ಕೊಳವೆಬಾವಿಗಳು ಬತ್ತಿ ಹೋಗಿ, ರೈತರು ಚಿಂತಾಕ್ರಾಂತರಾಗಿದ್ದಾರೆ.

ಜಗಳೂರು ತಾಲ್ಲೂಕಿನ ಉದ್ದಗಟ್ಟ ಸಮೀಪ ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಮೀಸಲಿಟ್ಟಿದ್ದ ಫಲವತ್ತಾದ ಎರೆಭೂಮಿಯಲ್ಲಿ ತೇವಾಂಶವನ್ನು ಪರೀಕ್ಷಿಸುತ್ತಿರುವ ಕೃಷಿ ಅಧಿಕಾರಿ ಮಿಥುನ್ ಕಿಮಾವತ್
ತಿಪ್ಪೇಸ್ವಾಮಿ ಪಾಂಡುರೆಡ್ಡಿ

ಅಕ್ಟೋಬರ್ ನಲ್ಲಿ ಶೇ 95ರಷ್ಟು ಮಳೆ ಕೊರತೆ ಕಾದ ಕಾವಲಿಯಾದ ಕೃಷಿ ಭೂಮಿ ಅಂತರ್ಜಲ ಕುಸಿದು, ಬತ್ತಿರುವ ಕೊಳವೆಬಾವಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.