ADVERTISEMENT

ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಕೊಠಡಿಗಳ ಕೊರತೆ

ಪಿಯುಸಿಯಲ್ಲಿ ಉತ್ತಮ ಫಲಿತಾಂಶ * ಪದವಿಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ

ಡಿ.ಕೆ.ಬಸವರಾಜು
Published 31 ಜುಲೈ 2021, 6:46 IST
Last Updated 31 ಜುಲೈ 2021, 6:46 IST
ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಒಂದು ನೋಟ ಪ್ರಜಾವಾಣಿ ಚಿತ್ರ–ಸತೀಶ್ ಬಡಿಗೇರ್
ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಒಂದು ನೋಟ ಪ್ರಜಾವಾಣಿ ಚಿತ್ರ–ಸತೀಶ್ ಬಡಿಗೇರ್   

ದಾವಣಗೆರೆ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಕಾಲೇಜಿನಲ್ಲಿ ಪಾಳಿ ಪ್ರಕಾರ ತರಗತಿಗಳನ್ನು ನಡೆಸುವ ಪರಿಸ್ಥಿತಿ ಬಂದಿದೆ.

ಕೊರೊನಾದ ಇಂದಿನ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಬೇಕಾದರೆ ಹೆಚ್ಚಿನ ಕೊಠಡಿಗಳು ಅಗತ್ಯ. ಆದರೆ, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಅದಕ್ಕೆ ತಕ್ಕಂತೆ ಕೊಠಡಿಗಳು ನಿರ್ಮಾಣವಾಗುತ್ತಿಲ್ಲ.

29 ವರ್ಷಗಳ ಇತಿಹಾಸವಿರುವ ಈ ಕಾಲೇಜಿನಲ್ಲಿ ಪ್ರಸ್ತುತ 4 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲದೇ ಹಾವೇರಿ, ಶಿವಮೊಗ್ಗ ಹಾಗೂ ರಾಯಚೂರು ಜಿಲ್ಲೆಗಳಿಂದಲೂ ಬಂದಿರುವ ಶೇ 10ರಷ್ಟು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಅಗತ್ಯಕ್ಕೆ ತಕ್ಕಂತೆ ಕೊಠಡಿಗಳು ಇಲ್ಲ.

ADVERTISEMENT

ಬೆಳಿಗ್ಗೆ 6ಕ್ಕೆ ಕಾಲೇಜು ಆರಂಭವಾದರೆ ಸಂಜೆ 6ಕ್ಕೆ ಕಾಲೇಜು ಮುಚ್ಚುತ್ತದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರಥಮ ಪದವಿ ತರಗತಿಗಳಿಗೆ ಪಾಠ ನಡೆದರೆ ಮಧ್ಯಾಹ್ನ ದ್ವಿತೀಯ ಹಾಗೂ ಕೊನೆಯ ವರ್ಷದ ಬಿ.ಎಸ್ಸಿ, ಬಿಕಾಂ, ಬಿಕಾಂ ಹಾಗೂ ಬಿ.ಬಿ.ಎಂ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತದೆ.

‘₹ 7.50 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಈಗ ಇರುವ ವಿದ್ಯಾರ್ಥಿಗಳಿಗೆ ಸಾಲುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಒಂದು ಸಾವಿರ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚಿನ ಕೊಠಡಿಗಳು ಅನಿವಾರ್ಯ’ ಎಂಬುದು ಕಾಲೇಜಿನ ಪ್ರಾಂಶುಪಾಲ ಪ್ರೊ.ಶಂಕರ್ ಆರ್. ಶೀಲಿ ಅವರ ಬೇಡಿಕೆ.

ಆಟದ ಮೈದಾನದ ಕೊರತೆ: ‘ಕಾಲೇಜು ಎರಡೂವರೆ ಎಕರೆಯಷ್ಟು ಜಾಗ ಮಾತ್ರ ಇದ್ದು, ಕಾಲೇಜಿನಲ್ಲಿ ಸುಸಜ್ಜಿತ ಆಟದ ಮೈದಾನವಿಲ್ಲ. ಕ್ರೀಡಾಕೂಟಗಳು, ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಜಿಲ್ಲಾ ಕ್ರೀಡಾಂಗಣವನ್ನೇ ಅವಲಂಬಿಸಬೇಕಿದೆ. 25 ವರ್ಷಗಳಿಂದಲೂ ಈ ಸಮಸ್ಯೆ ಇದೆ. ಕಾಲೇಜಿಗೆ ಅನುಗುಣವಾಗಿ ಮೂಲಸೌಲಭ್ಯಕ್ಕಾಗಿ ಕನಿಷ್ಠ 20 ಎಕರೆ ಭೂಮಿ ಬೇಕು. ಆದರೆ ಅಷ್ಟು ಜಾಗ ಒದಗಿಸುವುದು ಕಷ್ಟಕರವಾಗಿದೆ. ಇದಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲ. ವಿದ್ಯಾರ್ಥಿಗಳು ಅಲ್ಲಲ್ಲಿ ಬಿ.ಸಿ.ಎಂ ಹಾಸ್ಟೆಲ್‌ಗಳಲ್ಲಿ ದಾಖಲಾಗುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

‘ಶೌಚಾಲಯ, ಕುಡಿಯುವ ನೀರಿಗೆ ಕೊರತೆ ಇಲ್ಲ: ಈ ಕಾಲೇಜಿಗೆ ಶಶಿ ಸೋಪ್ ಇಂಡಸ್ಟ್ರೀಸ್ ಅವರು ₹ 8 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ 1 ಸಾವಿರ ಲೀಟರ್ ಸಾಮರ್ಥ್ಯದ ವಾಟರ್ ಫಿಲ್ಟರ್ ಸೌಲಭ್ಯ ಕಲ್ಪಿಸಿದ್ದಾರೆ. ಅಲ್ಲದೇ ಕೆಎಚ್‌ಬಿಯಿಂದ ಕುಡಿಯುವ ನೀರಿಗೆ ₹13 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕುಡಿಯುವ ನೀರಿಗೆ ಕೊರತೆ ಇಲ್ಲ. ಹೊಸ ಕಟ್ಟಡದಲ್ಲಿ ಶೌಚಾಲಯಗಳು ನಿರ್ಮಾಣವಾಗುತ್ತಿದ್ದು, ಎಲ್ಲಾ ಉತ್ತಮವಾಗಿವೆ’ ಎಂದು ಪ್ರೊ.ಶಂಕರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.