ಚನ್ನಗಿರಿ: ತಾಲ್ಲೂಕಿನ ದೇವರಹಳ್ಳಿಯಲ್ಲಿ ಲಕ್ಷ್ಮಿರಂಗನಾಥಸ್ವಾಮಿ ದೊಡ್ಡ ರಥೋತ್ಸವ ಭಾನುವಾರ ಮುಂಜಾನೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆಯಿಂದಲೇ ಭಕ್ತರು ವಾಹನಗಳು ಹಾಗೂ ಎತ್ತಿನಗಾಡಿಗಳಲ್ಲಿ ಬಂದು ರಥೋತ್ಸವದಲ್ಲಿ ಭಾಗಿಯಾದರು.
ಸ್ವಾಮಿಯ ಉತ್ಸವಮೂರ್ತಿಯನ್ನು ವಿವಿಧ ಮಂಗಳವಾದ್ಯಗಳ ಮೇಳದೊಂದಿಗೆ ಅಡ್ಡ ಪಲ್ಲಕ್ಕಿಯಲ್ಲಿ ತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ 180 ಅಡಿಗಳಿಗಿಂತಲೂ ಎತ್ತರ ಬೆಟ್ಟದ ಮೇಲಿಂದ ರಥವನ್ನು ಭಕ್ತರು 1 ಕಿ.ಮೀ ದೂರದವರೆಗೆ ಎಳೆದರು.
ರಥವನ್ನು ಬೆಟ್ಟದ ಮೇಲಿಂದ ಕೆಳಗಿಳಿಸಿ, ನಂತರ ಮತ್ತೆ ಬೆಟ್ಟದ ಮೇಲೆ ಇರುವ ದೇವಸ್ಥಾನದ ಆವರಣದವರೆಗೆ ಎಳೆದುಕೊಂಡು ಹೋದರು. ರಥವನ್ನು ಎಳೆಯುತ್ತಿದ್ದಂತೆ ನೆರೆದಿದ್ದ ಭಕ್ತರು ‘ಗೋವಿಂದ, ಗೋವಿಂದ’ ಎಂಬ ಜಯಘೋಷ ಹಾಕಿದರು. ಬಾಳೆಹಣ್ಣು, ಮೆಣಸು, ಮಂಡಕ್ಕಿಯನ್ನು ಎಸೆದು ಹರಕೆ ಸಮರ್ಪಿಸಿದರು.
ರಥೋತ್ಸವದ ನಂತರ ಎತ್ತಿನಗಾಡಿಗಳಲ್ಲಿ ತಂದ ಪಾನಕ ಹಾಗೂ ಕೋಸುಂಬರಿಯನ್ನು ನೆರೆದಿದ್ದ ಭಕ್ತರಿಗೆ ವಿತರಿಸಲಾಯಿತು.
ಲಕ್ಷ್ಮಿರಂಗನಾಥಸ್ವಾಮಿ ದೇವಸ್ಥಾನವನ್ನು ವಿಜಯನಗರದ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಿಸಲಾಗಿದೆ ಎಂಬ ಐತಿಹ್ಯ ಇದೆ. ಸ್ವಾಮಿ ‘ಉಡ’ದ ರೂಪದಲ್ಲಿ ಬೆಟ್ಟದ ಮೇಲೆ ಬಂದು ನೆಲೆಸಿದ್ದರಿಂದ ಈ ದೇವರಿಗೆ ಉಡುಗಿರಿ ಲಕ್ಷ್ಮಿರಂಗನಾಥ ಸ್ವಾಮಿ ಹೆಸರು ಇದೆ. ಈ ಭಾಗದಲ್ಲಿ ಉಡದ ದೇವಸ್ಥಾನವನ್ನು ಕಟ್ಟಿ ಪೂಜೆಯನ್ನು ಸಲ್ಲಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.