ADVERTISEMENT

‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 5:23 IST
Last Updated 12 ಸೆಪ್ಟೆಂಬರ್ 2023, 5:23 IST
ದಾವಣಗೆರೆಯ ಅಮರ್ ಜವಾನ್ ಉದ್ಯಾನದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ (ಮೇರಾ ಮಿಟ್ಟಿ ಮೇರಾ ದೇಶ) ಅಭಿಯಾನದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಸ್‌.ಎ.ರವೀಂದ್ರನಾಥ್ ಇತರರು ಇದ್ದರು.
ದಾವಣಗೆರೆಯ ಅಮರ್ ಜವಾನ್ ಉದ್ಯಾನದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ (ಮೇರಾ ಮಿಟ್ಟಿ ಮೇರಾ ದೇಶ) ಅಭಿಯಾನದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಸ್‌.ಎ.ರವೀಂದ್ರನಾಥ್ ಇತರರು ಇದ್ದರು.   

ದಾವಣಗೆರೆ: ಬಿಜೆಪಿಯಿಂದ ಇಲ್ಲಿನ ಅಮರ್ ಜವಾನ್ ಉದ್ಯಾನದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ (ಮೇರಾ ಮಿಟ್ಟಿ ಮೇರಾ ದೇಶ) ಅಭಿಯಾನಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಸೋಮವಾರ ಚಾಲನೆ ನೀಡಿದರು.

`ರಾಷ್ಟ್ರ ನಾಯಕರ ಸೂಚನೆಯ ಮೇರೆಗೆ ಜಿಲ್ಲೆಯಲ್ಲಿ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು, ಬೂತ್ ಮಟ್ಟದಲ್ಲಿ ಸಂಗ್ರಹಿಸುವ ಮಣ್ಣನ್ನು, ಬೆಂಗಳೂರಿಗೆ ಕಳುಹಿಸಲಾಗುವುದು. ಅಲ್ಲಿಂದ ನವದೆಹಲಿಗೆ ಕಳುಹಿಸಲಿದ್ದು, ಕರ್ತವ್ಯ ಪಥದಲ್ಲಿ ನಿರ್ಮಿಸಿರುವ ಅಮೃತ ಉದ್ಯಾನದಲ್ಲಿ ಸಮರ್ಪಿಸಿ, ಸೈನಿಕರಿಗೆ ಪ್ರೋತ್ಸಾಹ ನೀಡುವ ಮೂಲಕ ಯೋಧರದಲ್ಲಿ ಉತ್ಸಾಹ ತುಂಬಲಾಗುವುದು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಹುತಾತ್ಮ ಸೈನಿಕರ ಸ್ಮಾರಕಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಸಂಸದರು ಪುಷ್ಪಾಲಂಕೃತ ಕುಂಭವನ್ನು ಹಿಡಿದು, ಮಾಜಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಮಾಜಿ ಮುಖ್ಯ ಸಚೇತಕ ಎ.ಎಚ್‌. ಶಿವಯೋಗಿ ಸ್ವಾಮಿ ಸೇರಿದಂತೆ ಇತರೆ ನಾಯಕರು, ಜಿಲ್ಲಾ ಬಿಜೆಪಿ ಪದಾಕಾರಿಗಳು, ಕಾರ್ಯಕರ್ತರೊಂದಿಗೆ ಉದ್ಯಾನದ ಸುತ್ತಮುತ್ತಲಿನ ಐದು ಮನೆಗಳಿಗೆ ತೆರಳಿ ಮನೆ ಅಂಗಳದ ಮಣ್ಣು ಸ್ವೀಕರಿಸಿದರು.

ADVERTISEMENT

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಪ್ರತಿಜ್ಞಾವಿಧಿ ಬೋಧಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಅಭಿಯಾನದ ಸಂಚಾಲಕ ರಾಜನಹಳ್ಳಿ ಶಿವಕುಮಾರ್, ಧೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಕೆಂ.ಎಂ. ಸುರೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಕೆ.ಪ್ರಸನ್ನ ಕುಮಾರ್, ಸದಸ್ಯರಾದ ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್, ಗಾಯತ್ರಿ ಬಾಯಿ ಖಂಡೋಜಿರಾವ್, ರೇಖಾ ಸುರೇಶ್ ಗಂಡಗಾಳೆ, ಸೋಗಿ ಶಾಂತಕುಮಾರ್, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಪಿ.ಸಿ. ಶ್ರೀನಿವಾಸ್, ಬಿ. ರಮೇಶ ನಾಯ್ಕ, ಜಿ.ಎಸ್. ಶ್ಯಾಮ್, ಶಿವನಗೌಡ ಪಾಟೀಲ್, ಕೋಟಿ, ಟಿಂಕರ್ ಮಂಜಣ್ಣ, ಭಾಗ್ಯ ಪಿಸಾಳೆ, ಮಾಜಿ ಸೈನಿಕರು ಇದ್ದರು.

‘ಎರಡೂವರೆ ತಿಂಗಳು ಮಾತನಾಡಲ್ಲ’

ಇವತ್ತಿನ ಕಾರ್ಯಕ್ರಮ ಬಿಟ್ಟು, ಬೇರೆ ಯಾವುದರ ಬಗ್ಗೆಯೂ ಇನ್ನು ಎರಡೂವರೆ, ಮೂರು ತಿಂಗಳು ಮಾತನಾಡುವುದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಸ್ವಪಕ್ಷದವರ ವಿರುದ್ಧ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆಗಳಿಗೆ ಉತ್ತರಿಸಿದ ಅವರು, ‘ನನಗೆ ಬಿ.ಎಸ್. ಯಡಿಯೂರಪ್ಪ ಅವರೇ ಇನ್ನು ಮೂರು ತಿಂಗಳು ಏನೂ ಮಾತನಾಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ, ನಾನು ಕಾರ್ಯಕ್ರಮಕ್ಕೆ ಸಂಬಂಧಪಟ್ಟ ವಿಚಾರ ಬಿಟ್ಟು ಬೇರೆ ಏನನ್ನು ಮಾತನಾಡುವುದಿಲ್ಲ’ ಎಂದು ಹೇಳಿದರು.

‘ನನಗೆ ಎಲ್ಲವುದಕ್ಕೂ ಉತ್ತರ ಕೊಡುವ ಶಕ್ತಿ ಇದೆ. ಆದರೆ, ನಮ್ಮ ನಾಯಕ ಬಿಎಸ್‍ವೈ ಹೇಳಿರುವುದರಿಂದ ಮಾತನಾಡುತ್ತಿಲ್ಲ. ಚುನಾವಣೆಗೆ ಇನ್ನು ಆರೂವರೆ ತಿಂಗಳುಗಳಿವೆ. ಎರಡ್ಮೂರು ತಿಂಗಳ ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.