ಜಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಸಂಸತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ನೀಡಿರುವ ಅವಹೇಳನಾಕಾರಿ ಹೇಳಿಕೆ ಖಂಡಿಸಿ ತಾಲ್ಲೂಕು ವಕೀಲರ ಸಂಘದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
‘ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನವನ್ನು ಕೊಟ್ಟ ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದು ಆಘಾತಕಾರಿಯಾಗಿದೆ. ಮನುವಾದದ ಪ್ರತಿಪಾದಕರಾದ ಸಚಿವರು ಪರೋಕ್ಷವಾಗಿ ಶೋಷಿತ ಸಮುದಾಯಗಳ ನಾಯಕರಾದ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಬಹಿರಂಗವಾಗಿ ತಮ್ಮೊಳಗಿನ ವಿಷವನ್ನು ಕಾರಿದ್ದಾರೆ’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.
‘ಮನುವಾದವನ್ನು ಬಲವಂತವಾಗಿ ಬಿತ್ತುವುದು ಸಂವಿಧಾನದ ಆಶಯಗಳಿಗೆ ದಕ್ಕೆ ಉಂಟುಮಾಡಿದಂತಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ವಕೀಲ ಬಿ.ಪಂಪಣ್ಣ ಆಗ್ರಹಿಸಿದರು.
ವಕೀಲ ಎ.ರಂಗಪ್ಪ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಎ.ಕೆ.ಪರಶುರಾಮ್, ಪದಾಧಿಕಾರಿಗಳಾದ ಎಚ್.ಬಸವರಾಜಪ್ಪ, ಎಸ್.ಐ. ಕುಂಬಾರ್, ಸಣ್ಣೋಬಯ್ಯ, ಆರ್.ಓಬಳೇಶ್, ಎಚ್.ಕರಿಬಸಪ್ಪ, ಸಿ.ಬಸವರಾಜ್, ನಾಗೇಶ್, ಮರೇನಹಳ್ಳಿ ತಿಪ್ಪೇಸ್ವಾಮಿ, ಕೆ.ವಿ.ರುದ್ರೇಶ್, ಭೂಪತಿ, ಶ್ರೀನಿವಾಸ್, ವೀರೇಶ್, ಮಹಾಂತೇಶ್, ಗೋಗುದ್ದು ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.