ADVERTISEMENT

ದುರ್ಗಾಂಬಿಕಾ ದೇವಿ ದೇವಸ್ಥಾನದ ದಸರಾ ಮಹೋತ್ಸವ: 20 ಜೋಡಿಗಳ ಸಾಮೂಹಿಕ ವಿವಾಹ

‘ಸಮಾಜಮುಖಿ, ಆದರ್ಶ ಜೀವನ ನಡೆಸಿ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 11:41 IST
Last Updated 20 ಅಕ್ಟೋಬರ್ 2018, 11:41 IST
ದಸರಾ ಮಹೋತ್ಸವದ ಅಂಗವಾಗಿ ದಾವಣಗೆರೆಯ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್‌ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಅಕ್ಕಿ–ಕಾಳು ಹಾಕಿ ಶುಭ ಹಾರೈಸಿದರು.
ದಸರಾ ಮಹೋತ್ಸವದ ಅಂಗವಾಗಿ ದಾವಣಗೆರೆಯ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್‌ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಶಾಸಕ ಶಾಮನೂರು ಶಿವಶಂಕರಪ್ಪ ಅಕ್ಕಿ–ಕಾಳು ಹಾಕಿ ಶುಭ ಹಾರೈಸಿದರು.   

ದಾವಣಗೆರೆ: ದಸರಾ ಮಹೋತ್ಸವದ ಅಂಗವಾಗಿ ಇಲ್ಲಿನ ಶಿವಾಜಿನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್‌ ಆಶ್ರಯದಲ್ಲಿ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 20 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

ಮಧ್ಯಾಹ್ನ 11.55ಕ್ಕೆ ಮಂಗಲ ವಾದ್ಯಗಳ ನಡುವೆ ಮಾಂಗಲ್ಯ ಧಾರಣೆಯೊಂದಿಗೆ ವಧು–ವರರು ನವಜೀವನದ ದೋಣಿಯನ್ನೇರಿದರು. ಮಾಂಗಲ್ಯ ಸರ, ಬಟ್ಟೆ, ಬೆಳ್ಳಿ ಕಾಲುಂಗುರು, ಬಾಸಿಂಗವನ್ನು ವಧು–ವರರಿಗೆ ಉಚಿತವಾಗಿ ನೀಡಲಾಗಿತ್ತು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ‘ನವ ದಂಪತಿಗಳು ಪರಸ್ಪರ ಪ್ರೀತಿ–ವಿಶ್ವಾಸದಿಂದ ತಂದೆ–ತಾಯಿಯ ಮಾರ್ಗದರ್ಶನದಲ್ಲಿ ಬದುಕು ಸಾಗಿಸಬೇಕು. ಸಮಾಜಮುಖಿ ಹಾಗೂ ಆದರ್ಶಮಯ ಜೀವನವನ್ನು ನಡೆಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ದಸರಾ ಮಹೋತ್ಸವದ ಸಂದರ್ಭದಲ್ಲಿ ದುರ್ಗಾದೇವಿಯ ಸಮ್ಮುಖದಲ್ಲಿ ಸತಿ–ಪತಿಗಳಾಗಿರುವ ನೀವು ದೇವಿಯ ಕೃಪೆಗೆ ಪಾತ್ರರಾಗುತ್ತೀರಿ’ ಎಂದರು.

ಪ್ರತಿ ವರ್ಷ ದಸರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಹಾಗೂ 108 ಕಳಸಗಳೊಂದಿಗೆ ದುರ್ಗಾದೇವಿ ಮೂರ್ತಿಯ ಮೆರವಣಿಗೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ. ಶಾಮನೂರು ಶಿವಶಂಕರಪ್ಪ ಕುಟುಂಬದ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ನಗರದ ಹೃದಯ ಭಾಗದಲ್ಲಿರುವ ದುರ್ಗಾಂಬಿಕಾ ದೇವಿ ಮಂದಿರಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ದೇವಿಯೂ ಭಕ್ತರ ಭವಣೆ ನಿವಾರಣೆ ಮಾಡುತ್ತಿದೆ ಎಂದು ಹೇಳಿದರು.

‘ಧಾರ್ಮಿಕ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಹೀಗಾಗಿ ದೇವಿಯು ಕಾಲ ಕಾಲಕ್ಕೆ ಮಳೆ–ಬೆಳೆ ಸರಿಯಾಗಿ ಆಗುವಂತೆ ಮಾಡಿ ರೈತರ ಬದುಕನ್ನು ಹಸನುಗೊಳಿಸಬೇಕು. ದೇಶವನ್ನು ಸುಭಿಕ್ಷಗೊಳಿಸಬೇಕು’ ಎಂದು ಸ್ವಾಮೀಜಿ ಆಶಿಸಿದರು.

ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ‘ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಒಳ್ಳೆಯ ಸಂಗತಿ. ಸತಿ–ಪತಿಗಳು ಬಂಡಿಯ ಎರಡು ಚಕ್ರಗಳಿದ್ದಂತೆ. ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು’ ಎಂದು ಕಿವಿಮಾತು ಹೇಳಿದರು.

‘ಗಂಡ ಸಿಟ್ಟು ಮಾಡಿಕೊಂಡಾಗ ಹೆಂಡತಿ ತಾಳ್ಮೆಯಿಂದ ವರ್ತಿಸಬೇಕು. ಅದೇ ರೀತಿ ಹೆಂಡತಿ ಮುನಿಸಿಕೊಂಡಾಗ ಗಂಡ ತಾಳ್ಮೆಯಿಂದ ನಡೆದುಕೊಳ್ಳಬೇಕು. ಆಗ ಮಾತ್ರ ಜೀವನ ಸುಮಧುರವಾಗಿರುತ್ತದೆ’ ಎಂದರು.

ದೇವಸ್ಥಾನದ ಟ್ರಸ್ಟಿಗಳಾದ ಗೌಡ್ರ ಚನ್ನಬಸಪ್ಪ, ಎಚ್‌.ಬಿ. ಗೋಣೆಪ್ಪ, ಹನುಂತರಾವ್‌ ಸಾವಂತ್‌, ಪಿಸಾಳೆ ಸತ್ಯನಾರಾಯಣ, ಉಮೇಶ್‌ ಸಾಳಂಕಿ, ಹನುಮಂತರಾವ್‌ ಜಾಧವ್‌, ರಾಮಕೃಷ್ಣ ಬಡಗಿ, ಗುರುರಾಜ್‌, ಪಾಲಿಕೆ ಸದಸ್ಯ ತಿಪ್ಪಣ್ಣ ಅವರೂ ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.