ADVERTISEMENT

ವಕೀಲ ವೃತ್ತಿಯ ಘನತೆ ಕಾಪಾಡಿಕೊಳ್ಳಿ: ನ್ಯಾ.ಅಮರ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:21 IST
Last Updated 4 ಡಿಸೆಂಬರ್ 2025, 6:21 IST
ಜಗಳೂರು ನ್ಯಾಯಾಲಯದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ.ಅಮರ್ ಹಾಗೂ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಆರ್. ಚೇತನ್ ಅವರನ್ನು ಸನ್ಮಾನಿಸಲಾಯಿತು
ಜಗಳೂರು ನ್ಯಾಯಾಲಯದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ.ಅಮರ್ ಹಾಗೂ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಆರ್. ಚೇತನ್ ಅವರನ್ನು ಸನ್ಮಾನಿಸಲಾಯಿತು   

ಜಗಳೂರು: ‘ಸಮಾಜದಲ್ಲಿ ವಕೀಲರ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ವ್ಯಾಪಾರೀಕರಣವಾಗದಂತೆ ಎಚ್ಚರ ವಹಿಸಬೇಕು’ ಎಂದು ಪಟ್ಟಣದ ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಅಮರ್ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಬುಧವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಹಿರಿಯ ಹಾಗೂ ಕಿರಿಯ ವಕೀಲರ ಮಧ್ಯೆ ಉತ್ತಮ ಬಾಂಧವ್ಯ ಹೊಂದಬೇಕು. ವೃತ್ತಿಯಲ್ಲಿ ಗೌಪ್ಯತೆ ಕಾಪಾಡಿಕೊಳ್ಳಬೇಕು. ವೃತ್ತಿಯಲ್ಲಿ ಬೇಸರ ಬೇಡ, ಅನಗತ್ಯವಾಗಿ ಸಮಯ ವ್ಯರ್ಥ ಮಾಡದೇ ಕಾನೂನು ಜ್ಞಾನ ಹೆಚ್ಚಿಸಿಕೊಳ್ಳಿ. ಪ್ರಾಮಾಣಿಕತೆ, ನಮ್ರತೆ, ಗಟ್ಟಿತನ ಬೆಳೆಸಿಕೊಂಡರೆ ವಕೀಲ ವೃತ್ತಿಯಲ್ಲಿ ಯಶಸ್ಸು ಸಾಧ್ಯ’ ಎಂದು ತಿಳಿಸಿದರು.

ADVERTISEMENT

‘ನಾನು ನ್ಯಾಯಾಧೀಶನಾಗಿ ಆಯ್ಕೆಗೊಳ್ಳಲು ಹಿರಿಯ ವಕೀಲರ ಮಾರ್ಗದರ್ಶನವೇ ಸ್ಫೂರ್ತಿ. ಗಾಢ ಅಧ್ಯಯನ ಮತ್ತು ಪರಿಶ್ರಮದಿಂದ ಮಾತ್ರ ವಕೀಲ ವೃತ್ತಿಯಲ್ಲಿ ಯಶಸ್ಸು ಸಾಧ್ಯ. ಮೊದಲು ಗೂಗಲ್ ಮ್ಯಾಪ್‌ನಲ್ಲಿ ಹುಡುಕುತ್ತಾ ಜಗಳೂರಿಗೆ ಬಂದೆ. ಆದರೆ ಇಲ್ಲಿ ವಕೀಲರ ಉತ್ತಮ ಸಹಕಾರದಿಂದ ಎರಡು ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ’ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಆರ್. ಚೇತನ್ ತಮ್ಮ ಅನುಭವ ಹಂಚಿಕೊಂಡರು.

‘ವಕೀಲ ವೃತ್ತಿಯಲ್ಲಿ ನೈತಿಕತೆ ಕಾಪಾಡಿಕೊಳ್ಳಬೇಕು. ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಪರಿಣಾಮ ಕಕ್ಷಿದಾರರು ವಕೀಲರಿಗಿಂತ ಅಧಿಕ ಜ್ಞಾನ ಹೊಂದಿರುತ್ತಾರೆ. ವಕೀಲರು ವೃತ್ತಿ ಗೌರವ ಕಾಪಾಡಿಕೊಂಡರೆ ಗೌರವ ಪಡೆಯಲು ಸಾಧ್ಯ. ಜಗಳೂರಿನಲ್ಲಿ ಹಿರಿಯ ಸಿವಿಲ್ ಸಂಚಾರಿ ಕೋರ್ಟ್ ಖಾಯಂಗೊಳಿಸಬೇಕು’ ಎಂದು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಆಗ್ರಹಿಸಿದರು.

ಹಿರಿಯ ವಕೀಲ ಎ.ಎನ್. ಪರಮೇಶ್ವರಪ್ಪ, ಟಿ.ಸ್ವಾಮಿ, ಕೆ.ಎಂ. ಬಸವರಾಜಪ್ಪ, ವೈ. ಹನುಮಂತಪ್ಪ ಹಾಗೂ ಎಂ.ಟಿ. ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಎಪಿಪಿ ಮಂಜುನಾಥ್, ವಕೀಲರಾದ ಕೆ.ವಿ. ರುದ್ರೇಶ್, ಮರೇನಹಳ್ಳಿ ತಿಪ್ಪೇಸ್ವಾಮಿ ವಿ, ತಿಪ್ಪೇಸ್ವಾಮಿ, ಎಸ್.ಐ. ಕುಂಬಾರ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.