ADVERTISEMENT

ರಾಜ್ಯದಲ್ಲಿ ಶಾಸಕರ ಮೋಜು ಮಸ್ತಿ

ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾತಿ ಸುಂದರೇಶ್ ಟೀಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 16:19 IST
Last Updated 13 ಜುಲೈ 2019, 16:19 IST
ದಾವಣಗೆರೆಯಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷದ ಬೇತೂರು ರಸ್ತೆಯ ಶಾಖೆಯ ನೂತನ ಕಟ್ಟಡ ಹಾಗೂ ಕಚೇರಿಯನ್ನು ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾತಿ ಸುಂದರೇಶ್ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷದ ಬೇತೂರು ರಸ್ತೆಯ ಶಾಖೆಯ ನೂತನ ಕಟ್ಟಡ ಹಾಗೂ ಕಚೇರಿಯನ್ನು ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾತಿ ಸುಂದರೇಶ್ ಉದ್ಘಾಟಿಸಿದರು   

ದಾವಣಗೆರೆ: ಪ್ರಸ್ತುತ ರಾಜಕಾರಣ ದುಡ್ಡು ಮಾಡಿಕೊಳ್ಳುವ ದಂಧೆಯಾಗಿದೆ. ರಾಜ್ಯದಲ್ಲಿ ಕುಡಿಯಲು ನೀರಿಲ್ಲ, ಜಾನುವಾರಿಗೆ ಮೇವಿಲ್ಲ ಈ ಸಂಕಷ್ಟ ಪರಿಸ್ಥಿತಿಯನ್ನು ನಿವಾರಿಸುವ ಬದಲು ರಾಜ್ಯದ ಶಾಸಕರು ರೆಸಾರ್ಟ್‍ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.

ಭಾರತ ಕಮ್ಯುನಿಸ್ಟ್‌ ಪಕ್ಷದ ಬೇತೂರು ರಸ್ತೆಯ ಶಾಖೆಯ ನೂತನ ಕಟ್ಟಡ ಹಾಗೂ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವ ಬದಲು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇದು ಕರ್ನಾಟಕದ ಜನತೆಗೆ ಮಾಡುತ್ತಿರುವ ಅಪಮಾನ. ನಮ್ಮ ಪಕ್ಷದ ಶಾಸಕರು ಯಾರೂ ಮೋಜು ಮಾಡದೇ ಜನರ ಸಂಕಷ್ಟ ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತ ಮತ್ತು ಶ್ರಮವೇ ಕಾರಣ ಎಂದರು.

ADVERTISEMENT

‘ರಾಜ್ಯದಲ್ಲಿ ನಡೆಯುತ್ತಿರುವ ಅತಂತ್ರ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ, ಮುಂದಿನ ರಾಜಕೀಯಕ್ಕೆ ಭವಿಷ್ಯ ಇಲ್ಲದಂತಾಗಿದೆ ಎಂಬುದು ಸ್ಪಷ್ಟ. ಹಿಂದೆ ನಗರಸಭೆಯಲ್ಲಿ ಮೂರು ಜನ ಸದಸ್ಯರಾಗಿದ್ದರು. ಮುಂದಿನ ದಿನಗಳಲ್ಲಿ ಉದ್ಘಾಟನೆ ಕಂಡ ನೂತನ ಶಾಖೆಯು ಈ ಭಾಗದ ಶೋಷಿತರ ಚಟುವಟಿಕೆಯ ಕೇಂದ್ರವಾಗಬೇಕು. ನೋಂದ ಜನರ ದನಿಯಾಗಿ ನಿಲ್ಲಬೇಕು ಎಂಬುದೇ ಸಿಪಿಐನ ಆಶಯ. ಈ ಕಚೇರಿಯನ್ನು ನಿರಂತರವಾಗಿ ತೆರೆದು, ಪ್ರತಿನಿತ್ಯ ಕೂಲಿ ಕಾರ್ಮಿಕರು, ಬಡವರು, ಶೋಷಿತರು, ಸಾಮಾನ್ಯ ಜನರಿಗೆ ಸ್ಪಂದಿಸುವ ಚಿಂತನೆ ಮಾಡುವ ಕೇಂದ್ರ ಆಗಬೇಕು’ ಎಂದು ಹೇಳಿದರು.

‘ದಾವಣಗೆರೆ ಜಿಲ್ಲೆಯ ಕಮ್ಯುನಿಸ್ಟ್ ಪಕ್ಷದ ಹೋರಾಟದ ಇತಿಹಾಸವನ್ನು ನೋಡಿದರೆ ರೋಮಾಂಚನವಾಗುತ್ತದೆ. ಹಿಂದೆ ಈ ಪಕ್ಷ ಹೋರಾಟದಿಂದ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತ್ತು. ಇದಕ್ಕೆ ಶಾಸಕರಾಗಿದ್ದ ಪಂಪಾಪತಿ ಅವರಂತಹ ಹಿರಿಯರ ಶ್ರಮವೇ ಕಾರಣ. ಈ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಮರು ಹುಟ್ಟಾಗಬೇಕು’ ಎಂದರು.

ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಡಾ.ಕೆ.ಎಸ್. ಜನಾರ್ದನ ಮಾತನಾಡಿ, ‘ದೇಶದ ಜನರ ಜವಾಬ್ದಾರಿ ಇಲ್ಲದೇ, ಪ್ರಸ್ತುತ ಅಧಿಕಾರ, ಕುರ್ಚಿಗಾಗಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಹೊಡೆದಾಡುವ ಕೊಳಕು ರಾಜಕಾರಣ ನಡೆಯುತ್ತಿದ್ದು, ಇದನ್ನು ಜನರು ದೂರ ಇಡಬೇಕು’ ಎಂದು ಸಲಹೆ ನೀಡಿದರು.

ಪಕ್ಷದ ಜಿಲ್ಲಾ ಮಂಡಳಿ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್, ಸಹ ಕಾರ್ಯದರ್ಶಿ ಎಚ್.ಜಿ. ಉಮೇಶ್ ಆವರಗೆರೆ, ಆವರಗೆರೆ ಚಂದ್ರು, ಆವರಗೆರೆ ವಾಸು, ಪಿ. ಷಣ್ಮುಖಸ್ವಾಮಿ, ಎಂ.ಬಿ. ಶಾರದಮ್ಮ, ಕೆ.ಜಿ. ಶಿವಮೂರ್ತಿ, ಶಾಖೆಯ ಕಾರ್ಯದರ್ಶಿ ಜಿ. ಯಲ್ಲಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.