ADVERTISEMENT

ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ನಿರಾಸೆ

ಕಾಯಂ ಇಲ್ಲ, ನೇರ ನೇಮಕಾತಿಯಲ್ಲಿ ಆದ್ಯತೆಯೂ ಇಲ್ಲ * ವಯಸ್ಸು ಮೀರುತ್ತಿರುವ ಅತಿಥಿ ಉಪನ್ಯಾಸಕರು ಕಂಗಾಲು

ಬಾಲಕೃಷ್ಣ ಪಿ.ಎಚ್‌
Published 7 ಜುಲೈ 2021, 9:50 IST
Last Updated 7 ಜುಲೈ 2021, 9:50 IST
ಕೊಟ್ರೇಶ ಎಚ್.
ಕೊಟ್ರೇಶ ಎಚ್.   

ದಾವಣಗೆರೆ: 1242 ಸಹಾಯಕ ಪ್ರಾಧ್ಯಾಪಕರನ್ನು ಮತ್ತು 310 ಪ್ರಿನ್ಸಿಪಾಲರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚಿಸಿದೆ. ಇದರಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿಲ್ಲ. 15–20 ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ನಿರಾಸೆ ಉಂಟುಮಾಡಿದೆ.

ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ನೇಮಕಾತಿಗೆ ನಿಗದಿ ಪಡಿಸಿದ ವಯಸ್ಸನ್ನು ಮೀರಿದ್ದಾರೆ. ಅಂಥವರಿಗೆ ವಯಸ್ಸಿನ ಸಡಿಲಿಕೆಯನ್ನು ನೀಡಿಲ್ಲ.

‘ಒಬ್ಬ ಪ್ರಾಧ್ಯಾಪಕ ನೇಮಕಾತಿ ಆದರೆ ಇಬ್ಬರು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಾರೆ. ಈ ಬಾರಿಯ ನೇರ ನೇಮಕಾತಿ ನಡೆದರೆ 3 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರಿಗೆ ಕೆಲಸ ಇಲ್ಲದಾಗುತ್ತದೆ. ಕೊರೊನಾ ಕಾರಣದಿಂದ ಮೊದಲೇ ಸಂಕಷ್ಟದಲ್ಲಿ ಇರುವ ನಮಗೆ ಇದು ಇನ್ನೊಂದು ಹೊಡೆತ ನೀಡಲಿದೆ. ಹಾಗಾಗಿ ನೇಮಕಾತಿಯಲ್ಲಿ ಶೇ 50ರಷ್ಟು ಮೀಸಲಾತಿಯನ್ನು ಅತಿಥಿ ಉಪನ್ಯಾಸಕರಿಗೆ ನೀಡಬೇಕು’ ಎಂಬುದು ಚನ್ನಗಿರಿಯ ಅತಿಥಿ ಉಪನ್ಯಾಸಕ ಶಿವಕುಮಾರ್‌ ಯರಗಟ್ಟಿ ಅವರ ಒತ್ತಾಯ.

ADVERTISEMENT

‘ನೆಟ್‌, ಸ್ಲೆಟ್‌, ಪಿಎಚ್‌.ಡಿ. ಮಾಡಿದ ಅತಿಥಿ ಉಪನ್ಯಾಸಕರಿಗೆ ₹ 13 ಸಾವಿರ, ಉಳಿದವರಿಗೆ ₹ 11 ಸಾವಿರ ವೇತನ ಇದೆ. ಇಷ್ಟು ಕಡಿಮೆ ಸಂಬಳಕ್ಕೆ ಬೇರೆ ಯಾವ ಇಲಾಖೆಯಲ್ಲಿಯೂ ಕೆಲಸ ಮಾಡುತ್ತಿಲ್ಲ. ಸ್ಥಳೀಯ ಅಭ್ಯರ್ಥಿ, ಸ್ಟಾಪ್‌ಗ್ಯಾಪ್, ಗುತ್ತಿಗೆ ಆಧಾರ ಹಾಗೂ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಅವರ ಸೇವಾ ಅನುಭವ, ವಿದ್ಯಾರ್ಹತೆ ಪರಿಗಣಿಸಿ ಮತ್ತು ಮಾನವೀಯತೆ ಆಧಾರದ ಮೇಲೆ 1982, 1992, 1996 ಮತ್ತು 2003 ರಲ್ಲಿ ಕಾಯಂಗೊಳಿಸಿದ ಉದಾಹರಣೆಗಳಿವೆ. 2003ರಿಂದ ಇಲ್ಲಿವರೆಗೆ ಪ್ರತಿ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ’ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೊಟ್ರೇಶ ಎಚ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ನೇಮಕಾತಿಗೆ ವಿರೋಧವಿಲ್ಲ. ಮೊದಲು ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕು. ಇಲ್ಲವೇ ಸೇವಾ ಭದ್ರತೆ ಒದಗಿಸಿ ಸರ್ಕಾರದ ಸೌಲಭ್ಯಗಳನ್ನು ನೀಡಬೇಕು. ಬಳಿಕ ನೇಮಕಾತಿ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಎಲ್ಲ ಅರ್ಹತೆಯೊಂದಿಗೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಬೀದಿಗೆ ಬೀಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.