ADVERTISEMENT

ಕಸಾಪ ಸದಸ್ಯತ್ವ ಶುಲ್ಕ ಇಳಿಸಲಿ

ಕನ್ನಡಿಗರ ಪ್ರಾತಿನಿಧ್ಯ ಸಂಸ್ಥೆಯಿಂದ ಅಧಿಕ ವಸೂಲಿಗೆ ವಿರೋಧ

ಬಾಲಕೃಷ್ಣ ಪಿ.ಎಚ್‌
Published 4 ಅಕ್ಟೋಬರ್ 2021, 4:37 IST
Last Updated 4 ಅಕ್ಟೋಬರ್ 2021, 4:37 IST
ಮಂಜುಳಾ ಪ್ರಸಾದ್
ಮಂಜುಳಾ ಪ್ರಸಾದ್   

ದಾವಣಗೆರೆ: ಕನ್ನಡಿಗರ ಪ್ರಾತಿನಿಧ್ಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸದಸ್ಯತ್ವ ಶುಲ್ಕ ಮತ್ತು ಕನ್ನಡ ನುಡಿ ಮಾಸಿಕ ಪತ್ರಿಕೆಯ ಶುಲ್ಕವನ್ನು ₹ 1 ಸಾವಿರಕ್ಕೆ ಏರಿಸಿರುವುದು ಸರಿಯಲ್ಲಿ ₹ 250ಕ್ಕೆ ಇಳಿಸಬೇಕು ಎಂದು ಯುವ ಸಾಹಿತಿಗಳು ಒತ್ತಾಯಿಸಿದ್ದಾರೆ.

ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಆಶಯಗಳೊಂದಿಗೆ 1915ರಲ್ಲಿ ಆರಂಭಗೊಂಡಿರುವ ಈ ಸಂಸ್ಥೆಯ ಸದಸ್ಯರ ಸಂಖ್ಯೆ ಕೇವಲ 3.10 ಲಕ್ಷ ಇದೆ. ಈಗ ಸದಸ್ಯತ್ವ ಶುಲ್ಕ ಏರಿಸಿದರೆ ಈ ಪ್ರಮಾಣ ಏರುವ ಸಾಧ್ಯತೆ ಇಲ್ಲ ಎಂಬುದು ಅವರ ಒತ್ತಾಯಕ್ಕೆ ಕಾರಣವಾಗಿದೆ.

ಕರುನಾಡಿನಲ್ಲಿ ಏಳು ಕೋಟಿ ಜನಸಂಖ್ಯೆ ಇದೆ. ಇದರ ಶೇ 10ರಷ್ಟು ಮಂದಿ ಸದಸ್ಯರಾಗಿದ್ದರೂ 70 ಲಕ್ಷ ಮಂದಿ ಪರಿಷತ್ತಿನಲ್ಲಿ ಇರುತ್ತಿದ್ದರು. ಈ ಕೊರತೆಯನ್ನು ನೀಗಿಸಿಕೊಳ್ಳಲು ಇತ್ತೀಚೆಗೆ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಎಸ್‌. ರಂಗಪ್ಪ ನಿರ್ಧರಿಸಿದ್ದಾರೆ. ಸದಸ್ಯತ್ವ ಪ್ರಮಾಣವನ್ನು 50 ಸಾವಿರಕ್ಕೆ ಏರಿಸುವ ಸಂಕಲ್ಪದೊಂದಿಗೆ ಆನ್‌ಲೈನ್‌ನಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ. ಇದು ಸ್ವಾಗತಾರ್ಹ ವಿಚಾರ. ಆದರೆ ₹ 1000 ನೀಡಿ ಸದಸ್ಯರಾಗಲು ಈ ಕೋವಿಡ್‌ ಸಂಕಷ್ಟದ ಕಾಲದಲ್ಲಿ ಕನ್ನಡಾಭಿಮಾನಿಗಳು ಹಿಂದು ಮುಂದು ನೋಡುವ ಪರಿಸ್ಥಿತಿ ಇದೆ ಎಂದು ಕನ್ನಡಪರ ಚಿಂತಕ ಎಲ್‌.ಜಿ. ಮಧುಕುಮಾರ್‌ ಬಸವಾಪಟ್ಟಣ ವಿವರಿಸಿದ್ದಾರೆ.

ADVERTISEMENT

ಕನ್ನಡ ಪ್ರೇಮಿಗಳಿಂದ ಹಿಂದೆ ಇದ್ದಷ್ಟೇ ಶುಲ್ಕ ಪಡೆಯಬೇಕು. ಮುದ್ರಣ ಕಾಗದ ಬೆಲೆ ಹೆಚ್ಚಳ, ಅಂಚೆ ವೆಚ್ಚ, ಸಾಗಾಣೆ ವೆಚ್ಚ ಮತ್ತು ಸಿಬ್ಬಂದಿಯ ವೇತನ ಎಂದೆಲ್ಲ ಹೆಚ್ಚುವರಿ ವೆಚ್ಚವನ್ನು ಸರ್ಕಾರದಿಂದ ಭರಿಸಲು ಒತ್ತಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.

₹ 1000 ಇರುವ ಸದಸ್ಯತ್ವದ ಶುಲ್ಕವನ್ನು ₹ 250ಕ್ಕೆ ಇಳಿಸಿದರೆ ಗ್ರಾಮೀಣ ಭಾಗದ ಸಾಹಿತ್ಯಾಭಿಮಾನಿಗಳಿಗೆ ಅನುಕೂಲ ಆಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ನಿಜವಾಗಿ ಆಸಕ್ತಿ ಇರುವ ಯೋಗ್ಯರು ಕ್ಷೇತ್ರದಲ್ಲಿ ಮುಂದೆ ಬರುತ್ತಾರೆ. ಇಲ್ಲವಾದಲ್ಲಿ ದುಡ್ಡು ಇರುವವರೇ ಪರಿಷತ್ತಿನ ಹಿಡಿತ ಸಾಧಿಸಲಿದ್ದಾರೆ ಎಂಬುದು ಸಾಹಿತ್ಯಾಭಿಮಾನಿ ದಾವಣಗೆರೆಯ ಮಂಜುಳಾ ಪ್ರಸಾದ್ ಅವರ ಅಭಿಪ್ರಾಯವಾಗಿದೆ.

ಈಗಲೇ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳಲ್ಲದವರು ಇದ್ದಾರೆ. ಮುಂದೆ ಪೂರ್ತಿ ಅವರೇ ತುಂಬಿಕೊಂಡರೆ ಕಷ್ಟ. ಅದಕ್ಕಾಗಿ ಶುಲ್ಕ ಇಳಿಸಬೇಕು. ಕನ್ನಡ ಸಾಹಿತಿಗಳು ಪರಿಷತ್ತಿನ ಸದಸ್ಯರಾಗುವಂತೆ ಮಾಡಬೇಕು ಎಂಬುದು ಮಂಜುಳಾ ಅವರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.