ADVERTISEMENT

ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನಾಲಿಗೆ ಮೇಲೆ ಹಿಡಿತವಿರಲಿ: ಎಚ್‌.ಡಿ.ಕುಮಾರಸ್ವಾಮಿ

ಸಾವಿರಾರು ಕೋಟಿ ರೂಪಾಯಿ ಆಸ್ತಿ‌ ಮಾಡಿರುವ ಆರೋಪಕ್ಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 1:52 IST
Last Updated 1 ಮಾರ್ಚ್ 2020, 1:52 IST
ಹರಿಹರದ ಗಾಂಧಿ ಮೈದಾನದಲ್ಲಿ ಎಚ್‍. ಶಿವಪ್ಪ ಅಭಿಮಾನಿಗಳ ಬಳಗ ಹಾಗೂ ಸಾಂಸ್ಕೃತಿಕ ಬಳಗದಿಂದ ಶನಿವಾರ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‍.ಡಿ. ಕುಮಾರಸ್ವಾಮಿ ಮಾತನಾಡಿದರು
ಹರಿಹರದ ಗಾಂಧಿ ಮೈದಾನದಲ್ಲಿ ಎಚ್‍. ಶಿವಪ್ಪ ಅಭಿಮಾನಿಗಳ ಬಳಗ ಹಾಗೂ ಸಾಂಸ್ಕೃತಿಕ ಬಳಗದಿಂದ ಶನಿವಾರ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‍.ಡಿ. ಕುಮಾರಸ್ವಾಮಿ ಮಾತನಾಡಿದರು   

ಹರಿಹರ: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ.ನಾನು ಸಾವಿರಾರು ಕೋಟಿ ರೂಪಾಯಿ ಆಸ್ತಿ‌ ಮಾಡಿದ್ದೇನೆ ಎನ್ನುತ್ತಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಎಚ್‍. ಶಿವಪ್ಪ ಅಭಿಮಾನಿಗಳ ಬಳಗ ಹಾಗೂ ಸಾಂಸ್ಕೃತಿಕ ಬಳಗದಿಂದ ಶನಿವಾರ ನಡೆದ ಸ್ಮರಣೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ತಿಲಕವಿಟ್ಟುಕೊಂಡು ಓಡಾಡುವ ಹಿಂದೂಗಳು ಸರಿಯಾದ ರೀತಿಯಲ್ಲಿ ಮಾತನಾಡಬೇಕು. ಕೆಟ್ಟ ಸಂಸ್ಕೃತಿಯ ನಾಲಿಗೆ ಹೊಂದಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಂತಹವರ ನಡವಳಿಕೆ ಬಗ್ಗೆ ಚರ್ಚೆ ಮಾಡಬೇಕಾದ ಅಗತ್ಯ ಇಲ್ಲ. ಅವರ ಹೇಳಿಕೆಗಳ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡೋಣ. ನಾವು ಹಿಂದೂ ಸಂಸ್ಕೃತಿಯವರು ಎನ್ನುವ ಅವರು ಹಿಂದೂ ಸಂಸ್ಕೃತಿ ಬಗ್ಗೆ ಬೇರೆಯವರಿಂದ ಪಾಠ ಹೇಳಿಸಿಕೊಳ್ಳಲಿ’ ಎಂದು ಯತ್ನಾಳ ಹಾಗೂ ಸಚಿವ ಸಿ.ಟಿ. ರವಿ ಹೇಳಿಕೆಗೆ ತಿರುಗೇಟು ನೀಡಿದರು.

ADVERTISEMENT

‘ಮುಂಬರುವ ಬಜೆಟ್‌ ಬಗ್ಗೆ ಯಾವುದೇ ನಿರೀಕ್ಷೆಗಳನ್ನು ಹೊಂದಿಲ್ಲ. ಈ ಆಡಳಿತದಲ್ಲಿ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರೈತರ ಸಾಲಮನ್ನಾ ಬಗ್ಗೆ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಗೊಂದಲವಿಲ್ಲದೇ ರೈತರ ಸಾಲಮನ್ನಾ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅನುದಾನ ತಲುಪಿಸುವ ವ್ಯವಸ್ಥೆ ಮಾಡಿದ್ದೆ. ರೈತರ ಪರ ಎಂದು ಮಾತನಾಡುವರ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಮಾತನಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.