ADVERTISEMENT

ಪ್ರತಿ ಮನೆಯಲ್ಲಿ ನಾಯಕರು ಹುಟ್ಟಲಿ

ವಾಲ್ಮೀಕಿ ಜಾತ್ರೆಯಲ್ಲಿ ಪರಿಶಿಷ್ಟ ಪಂಗಡಗಳ ನೌಕರರ ಸಮಾವೇಶದಲ್ಲಿ ರವಿ ಡಿ. ಚನ್ನಣ್ಣನವರ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:03 IST
Last Updated 8 ಫೆಬ್ರುವರಿ 2021, 17:03 IST
ಹರಿಹರದ ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ನಡೆದ ಪರಿಶಿಷ್ಟ ಪಂಗಡಗಳ ನೌಕರರ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮಾತನಾಡಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಹರಿಹರದ ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ನಡೆದ ಪರಿಶಿಷ್ಟ ಪಂಗಡಗಳ ನೌಕರರ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮಾತನಾಡಿದರು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಪ್ರತಿ ಮನೆಯಲ್ಲಿ ನಾಯಕ ಹುಟ್ಟಬೇಕು. ಶಿಕ್ಷಣ, ಸ್ವಾಭಿಮಾನ ಮತ್ತು ಪರಿಶ್ರಮದಿಂದ ನಾಯಕನಾಗಬೇಕು. ಅದಕ್ಕಾಗಿ ಪ್ರತಿ ಮನೆಯಲ್ಲಿ ಗ್ರಂಥಾಲಯಗಳಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌ ತಿಳಿಸಿದರು.

ರಾಜನಹಳ್ಳಿಯಲ್ಲಿ ಸೋಮವಾರ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಅಕ್ಷರ ಕಲಿತವರು ಕಡಿಮೆ ಇದ್ದಾರೆ. ಅಕ್ಷರ ಕ್ರಾಂತಿಯಾಗಬೇಕು.ಹಿಂದೆ ತೋಲ್ಬಲ, ಖಡ್ಗ, ಬುದ್ಧಿಯಿಂದ ಸಮಾಜ ಕಟ್ಟಿದರು. ಇದು ಪ್ರಜಾಪ್ರಭುತ್ವ, ಖಡ್ಗ ಬೇಡ, ಶಿಕ್ಷಣ ಕೊಡಿ. ಸತ್ಯದ ದಾರಿಯಲ್ಲಿ ಧರ್ಮವನ್ನೇ ಉಸಿರಾಡುವವರು ಆದರ್ಶವನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದರು.

ADVERTISEMENT

ಸ್ವಾತಂತ್ರ್ಯ ಅಂದರೆ ಏನು ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಸ್ವಾತಂತ್ರ್ಯ ಅಂದರೆ ರಾಜಕೀಯ ಸ್ವಾತಂತ್ರ್ಯ ಎಂದಷ್ಟೇ ಅಲ್ಲ. ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ, ಪ್ರತಿ ಮನುಷ್ಯ ಗೌರವ, ಘನತೆಯಿಂದ ಬದುಕುವ ಸ್ವಾತಂತ್ರ್ಯ ಬರಬೇಕು. ನಾನು ಏನು ಮಾತನಾಡಬಾರದು, ಏನು ತಿನ್ನಬಾರದು, ಏನು ಯೋಚಿಸಬಾರದು, ಯಾವ ಬಟ್ಟೆ ಹಾಕಬಾರದು ಎಂದು ನಿರ್ಬಂಧಿಸುವವರು ನಮ್ಮ ಸುತ್ತಮುತ್ತ ಇರುತ್ತಾರೆ. ಅವೆಲ್ಲವನ್ನು ಮೀರಿ ನಾನು ಏನು ಎಂಬುದನ್ನು ನಾವೇ ಸ್ವತಃ ಯೋಚಿಸಬೇಕು. ಆಗ ಮಾತ್ರ ನಿಜ ನಾಯಕನಾಗಲು ಸಾಧ್ಯ ಎಂದರು.

ಸಂವಿಧಾನ ಎಷ್ಟೇ ಶ್ರೇಷ್ಠವಾಗಿರಲಿ ಜಾರಿ ಮಾಡುವವ ಕೆಟ್ಟವನಾದರೆ ಸಂವಿಧಾನ ಕೆಟ್ಟದಾಗುತ್ತದೆ. ಕೆಟ್ಟ ಸಂವಿಧಾನವಾಗಿದ್ದರೂ ಜಾರಿ ಮಾಡುವವ ಒಳ್ಳೆಯವನಾಗಿದ್ದರೆ, ಜನರ ಸಂಕಷ್ಟಗಳಿಗೆ ಸ್ಪಂದಿಸುವವನಾದರೆ ಸಂವಿಧಾನ ಶ್ರೇಷ್ಠವಾಗುತ್ತದೆ ಎಂಬ ಅಂಬೇಡ್ಕರ್‌ ಮಾತು ನಿಜವಾದುದು. ಯಾವುದೇ ಕಾಯ್ದೆಗಳು ಜನಸಾಮಾನ್ಯರಿಗೆ, ಕಷ್ಟದಲ್ಲಿರುವವರಿಗೆ, ಶೋಷಿತರಿಗೆ ಸಹಾಯ ಮಾಡಲು ಇರಬೇಕೇ ಹೊರತು, ಅವರಿಗೆ ನೀಡುವ ಸೌಲಭ್ಯಗಳಿಗೆ ಕೊಕ್ಕೆ ಹಾಕಲು ಅಲ್ಲ ಎಂಬುದನ್ನು ಸರ್ಕಾರಿ ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೇವಲ ಕೆಲವೇ ಕೆಲವು ವರ್ಗದವರು ಸಂಸ್ಕೃತ, ಸಂಸ್ಕೃತಿಯ ಪಾರುಪತ್ಯ ವಹಿಸಿಕೊಂಡಿದ್ದ ಸಮಯದಲ್ಲಿ ನಮಗೂ ಸಂಸ್ಕೃತಿ, ಚರಿತ್ರೆ ಇದೆ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠ ತೋರಿಸಿಕೊಟ್ಟಿದೆ ಎಂದು ಶ್ಲಾಘಿಸಿದರು.

ಮಹರ್ಷಿ ವಾಲ್ಮೀಕಿ, ಏಕಲವ್ಯ, ಬೇಡರ ಕಣ್ಣಪ್ಪ, 12 ಮಂದಿ ಪಾಳೆಗಾರರು ಹೀಗೆ ಅನೇಕರ ವಂಶಸ್ಥರು ಎಂದು ಹೆಮ್ಮೆಪಟ್ಟುಕೊಳ್ಳುವ ನಾವು ಹೇಗಿದ್ದೇವೆ ಎಂದು ಯೋಚಿಸಬೇಕು. ಹೊತ್ತಿನ ಊಟಕ್ಕೆ ನಮ್ಮಲ್ಲಿ ಏನಿದೆ ನೋಡಬೇಕು. ಮನೆಯಲ್ಲಿ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ಚಿಂತನೆ ಮಾಡಿ, ಗ್ರಾಮದಲ್ಲಿ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಚಿಂತನೆ ಮಾಡಿ, ತಾಲ್ಲೂಕು ಮಟ್ಟಕ್ಕೆ ಬಂದಾಗ ಎಷ್ಟು ವಸತಿರಹಿತರು, ಭೂಹೀನರು, ಶೋಷಿತರು ಇದ್ದಾರೆ ಎಂದು ಯೋಚಿಸಿ, ರಾಜ್ಯಮಟ್ಟಕ್ಕೆ ಬಂದಾಗ ಸರಿಯಾದ ಯೋಜನೆಗಳನ್ನು ತಯಾರಿಸುವ ನಾಯಕರಾಗಬೇಕು. ಆಗ ನಾವು ಇಂಥವ ವಂಶಸ್ಥರು ಎಂದು ಹೇಳಿಕೊಳ್ಳುವುದು ಸಾರ್ಥಕವಾಗುತ್ತದೆ ಎಂದರು.

ಕೆಪಿಎಸ್‌ಸಿ ಸದಸ್ಯ ಡಾ. ರಂಗರಾಜ ವನದುರ್ಗ ಅಧ್ಯಕ್ಷತೆ ವಹಿಸಿದ್ದರು. ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರೂ ಇದ್ದರು. ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.

ಏಕಲವ್ಯನ ಬಗ್ಗೆ ಸಿಟ್ಟು
‘ಏಕಲವ್ಯ ಗುರುಕಾಣಿಕೆಯಾಗಿ ಹೆಬ್ಬೆರಳು ನೀಡಿದ್ದಕ್ಕಾಗಿ ಸಿಟ್ಟಿದೆ. ಈಗಲೂ ನಮ್ಮ ಜನರು ಜಾಗೃತರಾಗಿರಬೇಕು. ಯಾಕೆಂದರೆ ಬೆರಳು ಕೇಳುವವರು ನಮ್ಮ ಸುತ್ತಮುತ್ತ ಇದ್ದಾರೆ. ಬೆರಳು ಕೇಳಿದರೆ ಕೊರಳು ಕೇಳುವಷ್ಟು ನಾವು ಬೆಳೆಯಬೇಕು’ ಎಂದು ರವಿ ಡಿ. ಚನ್ನಣ್ಣನವರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.