ADVERTISEMENT

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಹೆಸರು ಬದಲಿಸಲು ಮನವಿ: ರೇಣುಕಾಚಾರ್ಯ

ಅರಕೆರೆಯಲ್ಲಿ ಗ್ರಾಮ ವಾಸ್ತವ್ಯ ಉದ್ಘಾಟಿಸಿದ ಶಾಸಕ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 7:29 IST
Last Updated 4 ಡಿಸೆಂಬರ್ 2022, 7:29 IST
ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.
ಹೊನ್ನಾಳಿ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.   

ಹೊನ್ನಾಳಿ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಹೆಸರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಶನಿವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಆರಂಭದಲ್ಲಿ ಗ್ರಾಮಗಳಿಗೆ ಒಮ್ಮೆ ಭೇಟಿ ನೀಡುವ ಜಿಲ್ಲಾಧಿಕಾರಿ ನಂತರ ಎಲ್ಲಾ ಕಡೆಗಳಲ್ಲೂ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಈ ಕಾರ್ಯಕ್ರಮ ಶಾಸಕರ ನೇತೃತ್ವದಲ್ಲಿ ನಡೆಯಬೇಕಾಗಿರುವುದರಿಂದ ಆ
ಹೆಸರು ಸೂಕ್ತವಲ್ಲ. ಗ್ರಾಮಗಳಲ್ಲಿ ಕೆಲವರು ಇದನ್ನು ಅರ್ಥ ಮಾಡಿಕೊಳ್ಳದೇ ಪ್ರತಿ ಕಾರ್ಯಕ್ರಮ
ದಲ್ಲೂ ಜಿಲ್ಲಾಧಿಕಾರಿ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಹೆಸರನ್ನು ಬದಲಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ’ ಎಂದರು.

ADVERTISEMENT

50 ಮನೆಗಳು ಮಂಜೂರು: ಅರಕೆರೆ ಗ್ರಾಮ ಪಂಚಾಯಿತಿಗೆ ಡಿಸೆಂಬರ್ 5ರಂದು 50 ಮನೆಗಳನ್ನು ಮಂಜೂರು ಮಾಡಿಸಲಾಗುವುದು. ಗ್ರಾಮದಲ್ಲಿ ತಕ್ಷಣವೇ ಇ–ಸ್ವತ್ತು ಮಾಡಿಕೊಡುವಂತೆ ಹಾಗೂ ಬಗರ್‌ಹುಕುಂ ಸಾಗುವಳಿ
ದಾರರಿಗೆ ಹಕ್ಕುಪತ್ರ ಕೊಡುವಂತೆ ಸೂಚಿಸುವುದಾಗಿ ಹೇಳಿದರು.

‘ಅರಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಧ್ಯಾ ಸುರಕ್ಷಾ 7, ವೃದ್ಧಾಪ್ಯ ಯೋಜನೆಯ 3, ಅಂಗವಿಕಲ ವೇತನದ 8, ವಿಧವಾ ವೇತನದ 5, ಮನಸ್ವಿನಿ ವೇತನದ 3, ಪೌತಿ ಖಾತೆ 1, ಸ್ವಚ್ಛ ಭಾರತ್ ಮಿಷನ್‍ನಡಿ ವೈಯಕ್ತಿಕ ಶೌಚಾಲಯ ನಿರ್ಮಾಣದ 65 ಫಲಾನುಭವಿಗಳಿಗೆ ಹಾಗೂ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಪಡೆದ 39 ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ನೀಡಲಾಯಿತು’ ಎಂದುತಹಶೀಲ್ದಾರ್ ಎಚ್.ಜೆ. ರಶ್ಮಿ ತಿಳಿಸಿದರು.

40 ಮನೆಗಳ ಹಾನಿ ಸಂಬಂಧ 36 ಮನೆಗಳಿಗೆ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಉಳಿದ 4 ಮನೆಗಳಿಗೆ ತಲಾ ₹ 50,000ದಂತೆ ಪರಿಹಾರ ನೀಡಲಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಇಒ ರಾಮಾಭೋವಿ ಮಾತನಾಡಿದರು.ಮೆರವಣಿಗೆಯಲ್ಲಿ ಶಾಸಕರು ,ಅಧಿಕಾರಿಗಳನ್ನು ಸ್ವಾಗತಿಸಲಾಯಿತು.

ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್. ಮಂಜುನಾಥ್, ಉಪಾಧ್ಯಕ್ಷೆ ಪ್ರಮಿಳಾ ಶಂಕರಾಚಾರಿ, ಮಾಜಿ ಅಧ್ಯಕ್ಷರಾದ ಎ.ಬಿ. ರಂಗಪ್ಪ, ಸದಸ್ಯರಾದ ಎ.ಎಸ್. ಮಹೇಂದ್ರಪ್ಪ, ಸವಿತಾ ನಾಗರಾಜ್, ಉಮಾದೇವಿ ತಿಪ್ಪೇಶ್, ಎಚ್. ವೆಂಕಟೇಶ್, ಆಶಾ ರಮೇಶ್, ಮುಖಂಡರಾದ ಎ.ಬಿ. ಹನುಮಂತಪ್ಪ, ನಾಗರಾಜ್, ಪಿಡಿಒ ಹನುಮಂತಮ್ಮ, ಕಾರ್ಯದರ್ಶಿ ಚೌಡಪ್ಪ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.