ADVERTISEMENT

ಹರಪನಹಳ್ಳಿ: ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಪುಟ್ಟ ಪೋರ

ಹರಪನಹಳ್ಳಿಯ ಬಾಲಕನ ಅದ್ಭುತ ಸ್ಮರಣಶಕ್ತಿ

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:47 IST
Last Updated 30 ಮೇ 2021, 3:47 IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪ್ರದಾನ ಮಾಡಿದ ಪ್ರಶಸ್ತಿಯೊಂದಿಗೆ ಹರಪನಹಳ್ಳಿಯ ನಿನಾದ್ ಗುಪ್ತ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪ್ರದಾನ ಮಾಡಿದ ಪ್ರಶಸ್ತಿಯೊಂದಿಗೆ ಹರಪನಹಳ್ಳಿಯ ನಿನಾದ್ ಗುಪ್ತ   

ಹರಪನಹಳ್ಳಿ:ಪಟ್ಟಣದ ವೈದ್ಯ ಡಾ. ಪಿ. ಅಮರ್ ಮತ್ತು ದಂತ ವೈದ್ಯೆ ಡಾ. ಚಂದನ ಅವರ ಪುತ್ರ ನಿನಾದ್ ಗುಪ್ತ ಅಪ್ರತಿಮ ಸ್ಮರಣಾ ಶಕ್ತಿ ಹೊಂದಿರುವ ಮೂರುವರೆ ವರ್ಷದ ಪೋರ. ಈತ ಅದ್ಭುತ ಸ್ಮರಣಾ ಶಕ್ತಿ ಹೊಂದಿದ್ದು, ಇದೀಗ ಈತನ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

‘ಬೃಹಸ್ಪತಿ ಹಿಂದೂ ಸಂವತ್ಸರ ಚಕ್ರದ’ 60 ಸಂವತ್ಸರಗಳನ್ನು ಕೇವಲ 62 ಸೆಕೆಂಡ್‌ಗಳಲ್ಲಿ ಅರಳು ಹುರಿದಂತೆ ಹೇಳಿರುವ ಸಾಧನೆ 2021ರ ಏಪ್ರಿಲ್ 24ರಂದು ಹರಿಯಾಣ ರಾಜ್ಯದ ಫರಿದಾಬಾದ್‌ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್‌ ನಡೆಸಿದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಆತನ ಸಾಧನೆ ಕಂಡು ಪ್ರಶಸ್ತಿ ನೀಡಿದೆ.

‘ಒಂದು ವರ್ಷದವನಿದ್ದಾಗಲೇ ಚಿತ್ರಪಟಗಳಲ್ಲಿರುವ ವಿವಿಧ ಬಗೆಯ ಪಕ್ಷಿಗಳು, ಪ್ರಾಣಿಗಳು, ಕೀಟಗಳು, ಜಗತ್ತಿನ ಅದ್ಭುತಗಳು, ಪ್ರಸಿದ್ಧ ವ್ಯಕ್ತಿಗಳನ್ನು ಗುರುತಿಸುತ್ತಿದ್ದ. 15 ತಿಂಗಳಿದ್ದಾಗಲೇ ವಿವಿಧ ಬಗೆಯ ಆಕಾರಗಳು ಮತ್ತು ಬಣ್ಣಗಳನ್ನು ಗುರುತಿಸತೊಡಗಿದ್ದ. ಈ ಆಕಾರ ಮತ್ತು ಬಣ್ಣ ಗುರುತಿಸುವ ಸಾಮರ್ಥ್ಯವು ಸಾಮಾನ್ಯವಾಗಿ ಮಕ್ಕಳಲ್ಲಿ ಮೂರು ವರ್ಷಕ್ಕೆ ಪಕ್ವವಾಗುತ್ತದೆ. ಕೋವಿಡ್ನಿಂದಾಗಿ ಅಜ್ಜಿ ಸುಜಾತ ಗುಪ್ತ ಅವರೇ ಬಾಲಕನಿಗೆ ಮನೆಯಲ್ಲಿ ಪಾಠ ಹೇಳಿಕೊಟ್ಟಿದ್ದರು’ ಎಂದು ತಂದೆ ಡಾ.ಪಿ. ಅಮರ್ ಮಗನ ಸಾಧನೆ ಹಂಚಿಕೊಂಡರು.

ADVERTISEMENT

‘ಪ್ರಪಂಚದ 196 ರಾಷ್ಟ್ರಗಳ ರಾಜಧಾನಿಗಳನ್ನು ಹೇಳಬಲ್ಲ. 0 ಇಂದ 20ರವರೆಗೆ ಗಣಿತ ಮಗ್ಗಿಗಳನ್ನು ನಿರರ್ಗಳವಾಗಿ ಹೇಳುತ್ತಾನೆ. ಸೌರ ಮಂಡಲದ 30ಕ್ಕೂ ಹೆಚ್ಚು ಕಾಯಗಳ ಹೆಸರುಗಳನ್ನು ಹೇಳಬಲ್ಲ.ಈತನಿಗೆ ಸಂಖ್ಯೆಗಳು ಮತ್ತು ಗಣಿತವೆಂದರೆ ತುಂಬಾ ಇಷ್ಟ. ಈಗಲೇ ಈತ ಮೂರನೇ ತರಗತಿ ಪಠ್ಯದ ಸಾಮಾನ್ಯ ಗಣಿತದ ಲೆಕ್ಕಗಳನ್ನು ಬಿಡಿಸುತ್ತಾನೆ. ಟ್ರಿಲಿಯನ್, ಬಿಲಿಯನ್‌ಗಳ ಸಂಖ್ಯೆಗಳನ್ನು ಗುರುತಿಸುತ್ತಾನೆ. 3000 ಸಾವಿರವರೆಗಿನ ಸಂಖ್ಯೆಗಳನ್ನು ರೋಮನ್ ಸಂಖ್ಯೆಗಳಾಗಿ ಪರಿವರ್ತಿಸಿ ಹೇಳುತ್ತಾನೆ. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸರಳ ಪದಗಳನ್ನು ಓದುತ್ತಾನೆ ಎಂದು ವಿವರಿಸಿದರು.

ಬಾಲಕನ ಸಾಧನೆಯ ವಿಡಿಯೊ ಯೂಟೂಬ್‌ನಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.