ADVERTISEMENT

ಉದ್ದಕೊಕ್ಕಿನ ನೀರುಕಾಗೆ: ಮೀನು ಶಿಕಾರಿ ನಿಪುಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 6:47 IST
Last Updated 25 ಅಕ್ಟೋಬರ್ 2021, 6:47 IST
ಉದ್ದಕೊಕ್ಕಿನ ನೀರುಕಾಗೆ
ಉದ್ದಕೊಕ್ಕಿನ ನೀರುಕಾಗೆ   

ಜಲಪಕ್ಷಿಗಳೇ ವಿಶೇಷ. ಕೆಲವು ನೀರಿನ ಹತ್ತಿರ ಬದುಕಿದರೆ ಮತ್ತೆ ಕೆಲವದ್ದು ನೀರಿನಲ್ಲಿಯೇ ಜೀವನ. ಅವುಗಳ ಜೀವನ ಕ್ರಮ ವಿಶಿಷ್ಟ. ನೀರಿನಲ್ಲಿ ಬದುಕಲು ಬೇಕಾದ ದೈಹಿಕ ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತವೆ. ಜಲಪಕ್ಷಿಗಳ ಗುಂಪಿನಲ್ಲಿ ಸಸ್ಯಾಹಾರಿಗಳು, ಮಾಂಸಾಹಾರಿಗಳು ಮತ್ತು ಮಿಶ್ರಾಹಾರಿಗಳೂ ಇವೆ. ಜಲಪಕ್ಷಿಗಳ ಜಾತಿಗೆ ಸೇರಿದ ಒಂದು ಪ್ರಭೇದವೇ ನೀರುಕಾಗೆ. ದಕ್ಷಿಣ ಭಾರತದಲ್ಲಿ ಮೂರು ಪ್ರಭೇದಗಳಿದ್ದು, ದಾವಣಗೆರೆಯಲ್ಲಿಯೂ ಕಾಣಸಿಗುತ್ತವೆ. ಅವುಗಳಲ್ಲಿ ಪ್ರಮುಖವಾದದ್ದು ಉದ್ದಕೊಕ್ಕಿನ ನೀರುಕಾಗೆ. ಇದನ್ನು ಆಂಗ್ಲಬಾಷೆಯಲ್ಲಿ ‘ಗ್ರೇಟ್ ಕಾರ್‌ಮೋರೆಂಟ್’ ಎಂದು ಮತ್ತು ವೈಜ್ಞಾನಿಕವಾಗಿ ‘ಫಾಲೋಕ್ರೊಕೊರಾಕ್ಸ್ ಕಾರ್ಬೊ’ ಎಂದು ಕರೆಯುವರು.

ಗುಣ ಲಕ್ಷಣಗಳು: ದೊಡ್ಡ ನೀರು ಹಕ್ಕಿ. ಸಾಕು ಬಾತು ಕೋಳಿಯ ಗಾತ್ರ (80ರಿಂದ 100 ಸೆಂಮೀ.). ಕತ್ತು ಉದ್ದವಿದ್ದು, ಕೆಲವೊಮ್ಮೆ ಹಾವಿನಂತೆ ಕಾಣುತ್ತದೆ. ವಯಸ್ಕ ಹಕ್ಕಿಗಳು ಕಪ್ಪು ಬಣ್ಣದ್ದಾಗಿದ್ದು, ಮೈಮೇಲೆ ಗಾಢ ನೀಲಿ ಅಥವಾ ಹಸಿರಿನ ಹೊಳಪನ್ನು ಹೊಂದಿರುತ್ತವೆ. ಕೊಕ್ಕಿನ ಕೆಳಭಾಗದಲ್ಲಿ ತುಪ್ಪಳವಿಲ್ಲದ, ಹಳದಿ ಬಣ್ಣದ ಸಣ್ಣ ಚೀಲದಂತಿರುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ‘ಗುಲೇರ್ ಪೌಚ್’ ಎನ್ನುವರು. ಪ್ರಜನನ ಕಾಲದಲ್ಲಿ ತೊಡೆಗಳ ಹತ್ತಿರ ಬಿಳಿ ಮಚ್ಛೆ ಕಾಣುವುದು. ಅಲ್ಲದೆ ತಲೆ ಮತ್ತು ಬೆನ್ನಿನ ಮೇಲೂ ಬಿಳಿಯ ಬಣ್ಣ ಕಾಣಿಸುವುದು. ಹಾರುವಾಗ ರೆಕ್ಕೆಯ ಬದಿಯಲ್ಲಿ ಬಿಳಿ ಕಲೆ ಕಾಣುವುದು. ಈಜಲು ಸಹಾಯವಾಗುವಂತೆ ಜಲಪಾದಗಳನ್ನು ಹೊಂದಿದೆ. ಮರಿಗಳು ಗಾಢ ಬೂದು ಬಣ್ಣದ್ದಾಗಿದ್ದು, ಕೆಳಭಾಗ ಬಿಳಿಯದ್ದಾಗಿರುತ್ತದೆ. ಗುಂಪಿನಲ್ಲಿ ಬೇರೆ ಬೇರೆ ರೀತಿಯ ಸ್ವರ ಹೊರಡಿಸಬಲ್ಲವು.

ವಾಸ: ಕೆರೆ, ನದಿ ಪಾತ್ರಗಳು ಮತ್ತು ಹಿನ್ನೀರಿನಲ್ಲಿ ಒಂಟಿಯಾಗಿ ಅಥವಾ ಗುಂಪಾಗಿ ವಾಸ. ಚಳಿಗಾಲದಲ್ಲಿ ಸಂಜೆಯ ಹೊತ್ತು ನೂರಾರು ಸಂಖ್ಯೆಯಲ್ಲಿ ಮರಗಳ ಮೇಲೆ ವಿಶ್ರಮಿಸುತ್ತವೆ.

ADVERTISEMENT

ಆಹಾರ: ಮುಖ್ಯವಾಗಿ ಮೀನುಗಳೇ ಆಗಬೇಕು. ನೀರಿಗೆ ಧುಮುಕಿ ಅಟ್ಟಿಸಿಕೊಂಡು ಹೋಗಿ ಮೀನುಗಳ ಬೇಟೆಯಾಡುವ ಕಲೆ ಸಿದ್ಧಿಸಿದೆ. ನೀರಿನಲ್ಲಿ ಮುಕ್ಕಾಲು ಭಾಗ ಮುಳುಗಿ ಈಜುತ್ತಾ ಸಾಗುತ್ತವೆ. ನೀರಿನಿಂದ ಹೊರಗೆ ಮೀನನ್ನು ಹಾರಿಸಿ ಮೀನಿನ ತಲೆ ಮೊದಲು ಒಳ ಬರುವಂತೆ ನುಂಗುವುದು ಇದರ ಆಹಾರ ಭಕ್ಷಣೆಯ ವಿಶೇಷತೆ.

ಸಂತಾನೋತ್ಪತ್ತಿ: ಸಾಮಾನ್ಯವಾಗಿ ಸೆಪ್ಟಂಬರ್‌ನಿಂದ ಫೆಬ್ರುವರಿವರೆಗೆ. ಗಿಡಗಂಟಿಗಳ ಕಡ್ಡಿಗಳನ್ನು ತಂದು ಮರದ ಕೊಂಬೆಗಳ ನಡುವಿನ ಕವಲುಗಳಲ್ಲಿ ಅಟ್ಟಣಿಗೆ ರೀತಿಯ ಗೂಡು ಮಾಡುತ್ತವೆ. ಗುಂಪಿನಲ್ಲಿ ಸಂತಾನೋತ್ಪತ್ತಿ. ಗೂಡು ಕಟ್ಟುವ ಸ್ಥಳಕ್ಕಾಗಿ ಬೇರೆ ಬೇರೆ ಹಕ್ಕಿಗಳೊಡನೆ ಪೈಪೋಟಿಯಿರುತ್ತದೆ. ಪ್ರತಿ ಹೆಣ್ಣು ಮೂರರಿಂದ ಆರು ಮೊಟ್ಟೆಗಳನ್ನಿಡುತ್ತದೆ. ತಿಳಿ ನೀಲಿ ಬಣ್ಣದ ಮೊಟ್ಟೆಯ ಮೇಲೆ ಬಿಳಿ ಸುಣ್ಣ ಬಳಿದಂತೆ ಕಾಣುವುದು.

ಮರಿಗಳು ಪೋಷಕರ ಬಾಯಿಯೊಳಗೆ ತಮ್ಮ ತಲೆಯನ್ನು ತೂರಿಸಿ ಘನ ಆಹಾರವನ್ನು ಪಡೆಯತ್ತವೆ. ಸ್ವತಂತ್ರವಾಗಿ ಹಾರಲು ಮತ್ತು ಜೀವನ ನಡೆಸಲು ಸುಮಾರು ೫೦ ದಿನಗಳು ಬೇಕಾಗುತ್ತದೆ. ಆನಂತರ ಸುಮಾರು ಮೂರು ವರ್ಷಗಳಲ್ಲಿ ವಯಸ್ಕನಾಗಿ ಅದೇ ಮರಕ್ಕೆ ಸಂತಾನಭಿವೃದ್ಧಿ ಮಾಡಲು ಬರುತ್ತವೆ.

ವಿಶೇಷತೆ: ಇವು ವಿಶೇಷವಾದ ಪುಕ್ಕಗಳನ್ನು ಹೊಂದಿದ್ದು, ನೀರು ಸರಾಗವಾಗಿ ನುಗ್ಗಿ ಹೋಗುತ್ತದೆ. ಆದ್ದರಿಂದ ಇವುಗಳು ನೀರಿನಲ್ಲಿ ಸರಾಗವಾಗಿ ಮುಳುಗಿ ಈಜಬಲ್ಲವು. ರೆಕ್ಕೆಗಳಿಗೆ ಅವಶ್ಯವಾದ ಎಣ್ಣೆಯ ಅಂಶ ಕಡಿಮೆಯಿದ್ದು, ದೇಹವು ಸುಲಭವಾಗಿ ಒದ್ದೆಯಾಗುತ್ತದೆ. ನೀರಿನಿಂದ ಮೇಲೆ ಬಂದು ರೆಕ್ಕೆಗಳನ್ನು ಕೊಡವಿ ವಿಶಿಷ್ಟ ರೀತಿಯಲ್ಲಿ ರೆಕ್ಕೆಗಳನ್ನು ಬಿಸಿಲಿಗೆ ಹರಡಿ ಕೊಂಡು ಒಣಗಿಸಿಕೊಳ್ಳುತ್ತವೆ. ಇವುಗಳು ಬದುಕುವ ಪ್ರದೇಶಕ್ಕೆ ಅನುಸಾರವಾಗಿ ದೈಹಿಕ ಮತ್ತು ಮಾನಸಿಕ ಮಾರ್ಪಾಡು ಮಾಡಿಕೊಳ್ಳುವುದು ವಿಶೇಷ.

(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿವಿಜ್ಞಾನ ವಿಭಾಗದ ಪ್ರಾಧ್ಯಾಪಕರು. ಚಿತ್ರ: ಲೇಖಕರದ್ದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.