ADVERTISEMENT

ಎಂ.ಪಿ.ರೇಣುಕಾಚಾರ್ಯರ ಸಹೋದರನ ಮಗನ ಸಾವು: ಸಿಐಡಿ ತನಿಖೆಗೆ 

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 18:56 IST
Last Updated 16 ಡಿಸೆಂಬರ್ 2022, 18:56 IST
ಚಂದ್ರಶೇಖರ್
ಚಂದ್ರಶೇಖರ್   

ಹೊನ್ನಾಳಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಚಂದ್ರಶೇಖರ್ ಅವರ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.

ಚಂದ್ರಶೇಖರ್ ಸಾವು ಕೊಲೆಯೋ ಅಥವಾ ಅಪಘಾತವೋ ಎಂಬ ಗೊಂದಲ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಕುಟುಂಬದಲ್ಲಿ ಇತ್ತು. ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.

ಮೂರು ದಿನಗಳ ಹಿಂದೆ ಹೊನ್ನಾಳಿಗೆ ಭೇಟಿ ನೀಡಿದ್ದ ಸಿಐಡಿ ಡಿವೈಎಸ್ಪಿ ನಂದಕುಮಾರ್, ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿತ್ತು. ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಕೆಲವರನ್ನು ವಿಚಾರಣೆ ಮಾಡಿದ್ದಾರೆ. ಚಂದ್ರಶೇಖರ್ ಅವರ ಕಾರು ತುಂಗಾ ನಾಲೆಗೆ ಬಿದ್ದ ಸ್ಥಳ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಾರು ಹಾಗೂ ಕಾರಿನಲ್ಲಿದ್ದವರ ಮಾಹಿತಿಯನ್ನು ಕಲೆ ಹಾಕುತ್ತಿದೆ.

ADVERTISEMENT

ಡಿಸೆಂಬರ್ 13, 14ರಂದು ಸಿಐಡಿ ಅಧಿಕಾರಿಗಳು ಹೊನ್ನಾಳಿಗೆ ಬಂದು ಚಂದ್ರಶೇಖರ್ ಸಾವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಹೊನ್ನಾಳಿ ಪೊಲೀಸರಿಂದ ಪಡೆದಿದ್ದಾರೆ. ಅಕ್ಟೋಬರ್‌ 30ರಂದು ರಾತ್ರಿ ಚಂದ್ರು ಅವರ ಕಾರು ಹೊನ್ನಾಳಿಗೆ ಬರುವವರೆಗೂ ಕಾರು ಎಲ್ಲೆಲ್ಲಿ ಹೋಗಿತ್ತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ಚಂದ್ರು ಕಾರಿನಲ್ಲಿ ಎಲ್ಲಿಗೆ ಹೋಗಿದ್ದರು. ಆತನ ಜೊತೆ ಯಾರಿದ್ದರು ಎಂಬ ಬಗ್ಗೆ ಕಲೆ ಹಾಕಲಾಗುತ್ತಿದೆ. ಆತನ ಮೊಬೈಲ್ ಕೂಡ ಕಾರಿನಲ್ಲಿಯೇ ಸಿಕ್ಕಿರುವುದರಿಂದ ಮೊಬೈಲ್‍ಗೆ ಕರೆ ಮಾಡಿದವರ ಕಾಲ್ ಲಿಸ್ಟ್ ಅನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ನಾವು ನಮ್ಮ ಬಳಿ ಇದ್ದ ಎಲ್ಲಾ ಮಾಹಿತಿಯನ್ನು ಅವರಿಗೆಕೊಟ್ಟಿದ್ದೇವೆ. ಮುಂದಿನ ವಿಚಾರಣೆ ಸಿಐಡಿ ತಂಡಕ್ಕೆ ಬಿಟ್ಟಿದ್ದು’ ಎಂದು ಹೊನ್ನಾಳಿ ಸಿಪಿಐ ಸಿದ್ದೇಗೌಡ ಹೇಳಿದರು.

‘ಸಿಐಡಿ ಅಧಿಕಾರಿಗಳು ತನಿಖೆ ಆರಂಭಿರುವುದು ನಿಜ. ಆದರೆ ಮಾಹಿತಿಯನ್ನು ಹಂಚಿಕೊಳ್ಳುವ ಹಾಗಿಲ್ಲ’ ಎಂದು ಎಸ್‌ಪಿ ಸಿ.ಬಿ. ರಿಷ್ಯಂತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.