ADVERTISEMENT

ದಾವಣಗೆರೆ | ಮಾಚಿದೇವರ ವಿಚಾರ ಅಳವಡಿಸಿಕೊಳ್ಳಿ: ಬಸವ ಮಾಚಿದೇವ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:50 IST
Last Updated 18 ಆಗಸ್ಟ್ 2025, 5:50 IST
<div class="paragraphs"><p>ದಾವಣಗೆರೆಯ ಮಾಚಿದೇವ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಸವ ಮಾಚಿದೇವ ಸ್ವಾಮೀಜಿ ಸನ್ಮಾನಿಸಿದರು </p></div>

ದಾವಣಗೆರೆಯ ಮಾಚಿದೇವ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಸವ ಮಾಚಿದೇವ ಸ್ವಾಮೀಜಿ ಸನ್ಮಾನಿಸಿದರು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ಕತ್ತಲೆ, ಕಂದಾಚಾರದಲ್ಲಿದ್ದ ಸಮಾಜಕ್ಕೆ ಅರಿವಿನ ಬೆಳಕು ನೀಡುವ ಮೂಲಕ ಶ್ರೇಷ್ಠತೆ ತಂದುಕೊಟ್ಟವರು ಮಡಿವಾಳ ಮಾಚಿದೇವರು. ಅವರ ಆಚಾರ, ವಿಚಾರ, ಸಂಸ್ಕೃತಿಯನ್ನು ಸಮುದಾಯ ಮೈಗೂಡಿಸಿಕೊಂಡರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.

ADVERTISEMENT

ಇಲ್ಲಿನ ವಿನೋಬ ನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಮತ್ತು ಮಡಿಕಟ್ಟೆ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶ್ರಾವಣ ಮಾಸದ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಪ್ರಾಮಾಣಿಕ ಪರಿಶ್ರಮದಿಂದ ಸಮುದಾಯ ಅಭಿವೃದ್ಧಿ ಕಾಣಬೇಕಿದೆ. ಇದಕ್ಕೆ ಸಮುದಾಯ ಸಂಘಟಿತವಾಗಬೇಕಿದೆ. ಶಿಕ್ಷಣದ ಮೂಲಕ ಸಮುದಾಯದಲ್ಲಿ ಸುಧಾರಣೆ, ಬದಲಾವಣೆ ತರಲು ಸಾಧ್ಯವಿದೆ. ಪಾಲಕರು ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಮಡಿವಾಳ ಸಮುದಾಯದ ಜನರು ಕಾಯಕ ಜೀವಿಗಳು. ಆದರೆ, ದುಡಿಮೆಯ ಬಹುಪಾಲನ್ನು ಅನ್ಯ ಉದ್ದೇಶಕ್ಕೆ ಹಾಳು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮಠವು ಪ್ರಯತ್ನಿಸುತ್ತಿದೆ. ಮತಾಂತರ ಹಾಗೂ ವ್ಯಸನ ಮುಕ್ತ ಸಮಾಜಕ್ಕಾಗಿ ‘ಮಾಚಿದೇವ ಜೋಳಿಗೆ’ ರೂಪಿಸಲಾಗಿದೆ’ ಎಂದರು.

‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿದರು. ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹರಿಹರ ನಗರಸಭೆಯ ಪೌರಾಯುಕ್ತ ನಾಗಣ್ಣ ಮನೋಹರ್ ಪರಿಟ್, ಆಹಾರ ನಿರೀಕ್ಷಕ ಟಿ.ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್, ಪ್ರಾಧ್ಯಾಪಕ ಗಣೇಶ್ ಎನ್.ವೈ.ಪೂಜಾರಯ್ಯ, ಜಿಲ್ಲಾ ವರದಿಗಾರರು ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ್, ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ. ಉಮೇಶ್, ಆರ್.ಎನ್. ಧನಂಜಯ, ಎನ್.ಓಂಕಾರಪ್ಪ ಹಾಜರಿದ್ದರು.

ಶ್ರೇಷ್ಠವಾದ ಸಂಪತ್ತನ್ನು ಶಿಕ್ಷಣದಿಂದ ಪಡೆಯಲು ಸಾಧ್ಯವಿದೆ. ಮಡಿವಾಳ ಸಮುದಾಯದ ಜನರು ಕಾಯಕದ ಜೊತೆಗೆ ಶಿಕ್ಷಣವನ್ನೂ ಪಡೆಯಬೇಕು
ಶಿವಾನಂದ ಸ್ವಾಮೀಜಿ ಜಡೆಸಿದ್ದ ಶಿವಯೋಗಿಶ್ವರ ಮಠ

‘ಸಮುದಾಯಕ್ಕೆ ಮೀಸಲು ಬೇಕು’

ಸಾಮಾಜಿಕ ಶೈಕ್ಷಣಿಕ ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಸರ್ಕಾರದ ಗಮನ ಸೆಳೆಯುವೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು. ‘ಸಾಮಾಜಿಕವಾಗಿ ತೀರಾ ಹಿಂದುಳಿದ ಸಮುದಾಯಕ್ಕೆ ಸಮಾನತೆ ದೊರೆಯಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಮಾಜಮುಖಿ ಯೋಜನೆಗಳನ್ನು ರೂಪಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.