ಹರಿಹರ: ಮಾದಿಗ ಸಮುದಾಯದ ಯುವಜನರಲ್ಲಿ ಜ್ಞಾನದ ಗ್ರಹಿಕೆಯ ಶಕ್ತಿಯನ್ನು ಬೆಳೆಸಿದರೆ ಮಾತ್ರ ಒಳ ಮೀಸಲಾತಿಯ ಪರಿಪೂರ್ಣ ಉಪಯೋಗ ಪಡೆದುಕೊಳ್ಳಲು ಸಾಧ್ಯ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಪ್ರತಿಪಾದಿಸಿದರು.
ಮಾನವ ಬಂಧುತ್ವ ವೇದಿಕೆ, ಡಾ.ಬಾಬು ಜಗಜೀವನ್ ರಾಂ ಆದಿ ಜಾಂಬವ ಯುವ ಬ್ರಿಗೇಡ್, ಕರ್ನಾಟಕ ರಾಜ್ಯ ಮಾದಿಗ ಪ್ರೊಫೆಸರ್ಸ್ ಫೋರಂ, ಕರ್ನಾಟಕ ರಾಜ್ಯ ಮಾದಿಗ ವಿದ್ಯಾರ್ಥಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಗರದ ಮೈತ್ರಿವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಾದಿಗ ಪ್ರಾಧ್ಯಾಪಕರ ರಾಜ್ಯಮಟ್ಟದ 2ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
‘ದಶಕಗಳ ಹೋರಾಟದ ಫಲವಾಗಿ ಒಳ ಮೀಸಲಾತಿ ದೊರೆಯುತ್ತಿದೆ. ಆದರೆ ಈ ಮೀಸಲಾತಿಯನ್ನು ಉಪಯೋಗಿಸಿಕೊಳ್ಳುವ ಹಾಗೂ ಸಮುದಾಯವನ್ನು ಮುಖ್ಯವಾಹಿನಿಗೆ ತಲುಪಿಸುವ ಶಕ್ತಿ ಇರುವ ಮಾದಿಗ ಸಮುದಾಯದ ಯುವಜನರಲ್ಲಿ ಜ್ಞಾನದ ಗ್ರಹಿಕೆಯ ಶಕ್ತಿ ಇದೆಯೇ ಎಂಬುದನ್ನು ವಿಶ್ಲೇಷಣೆ ಮಾಡಿದರೆ ನಮಗೆ ನಿರಾಶೆ ಎದುರಾಗುತ್ತದೆ’ ಎಂದರು.
ಮಾದಿಗ ಸಮುದಾಯದ ಕೆಲವರು ವಿಶ್ವವಿದ್ಯಾಲಯದ ಕುಲಪತಿ, ಡೀನ್, ಪ್ರೊಫೆಸರ್ ಆದಾಕ್ಷಣ ಕ್ರಾಂತಿ ಆಗುವುದಿಲ್ಲ. ಸಮುದಾಯದ ಯುವಜನರು ಈಗಿನ ಕಾಲಮಾನದ ತಂತ್ರಜ್ಞಾನ, ಶಿಕ್ಷಣ ಕ್ರಮವನ್ನು ಅರಿತು, ಅಳವಡಿಸಿಕೊಳ್ಳುವುದು ಮುಖ್ಯ. ಈ ಜವಾಬ್ದಾರಿ ಸಮುದಾಯದ ಜ್ಞಾನವಂತರ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.
ಬಿಎಸ್‌ಸಿ ನರ್ಸಿಂಗ್ ಪ್ರವೇಶಕ್ಕೆ ₹50,000 ಶುಲ್ಕ ಪಾವತಿ ಮಾಡಲಾಗದೇ ಓದುವುದನ್ನು ಕೈಬಿಟ್ಟವರು ಸಮುದಾಯದಲ್ಲಿ ಇದ್ದಾರೆ. ಬೇಗನೇ ಉದ್ಯೋಗ ದೊರಕಿಸುವ ನರ್ಸಿಂಗ್ ಶಿಕ್ಷಣ ಪಡೆಯುತ್ತಿರುವ ಮಾದಿಗ ಸಮುದಾಯದವರ ಸಂಖ್ಯೆ ಕೇವಲ ಶೇ 1ರಷ್ಟಿಗೆ ಎಂಬುದೇ ಈ ಸಮುದಾಯದ ದುಃಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಡಾ.ಬಾಬು ಜಗಜೀವನ್‌ರಾಮ್ ಕರ್ನಾಟಕ ಆದಿ ಜಾಂಬವ ಯುವ ಬ್ರಿಗೇಡ್ ಸಂಸ್ಥಾಪಕ ಏಳುಕೋಟೆಪ್ಪ ಎಸ್. ಪಾಟೀಲ್, ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಎನ್.ಡಿ.ಕಟ್ಟಿಮನಿ, ಕರ್ನಾಟಕ ರಾಜ್ಯ ಮಾದಿಗ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಅಜಿತ ಮ್ಯಾಗಡಿ ಮಾತನಾಡಿದರು.
ಅರುಣ್ ಕುಮಾರ್ ಕ್ರಾಂತಿಗೀತೆ ಹಾಡಿದರು. ಶಿವಶರಣ ಸಿ.ಟಿ. ಸ್ವಾಗತಿಸಿದರು. ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಕ್ಕೀರೇಶ್ ಹಳ್ಳಳ್ಳಿ ನಿರೂಪಿಸಿದರು.
ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ಸಂವಿಧಾನಕ್ಕಾಗಲೀ ನ್ಯಾಯಾಲಯಕ್ಕಾಗಲೀ ಅಥವಾ ಕೇಂದ್ರ ಸರ್ಕಾರಕ್ಕಾಗಲೀ ಇಲ್ಲವೆ ಇಲ್ಲ ಎಂಬ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಕೆಲವರು ಬಿತ್ತಿದ್ದರು.– ಎ.ನಾರಾಯಣಸ್ವಾಮಿ, ಕೇಂದ್ರದ ಮಾಜಿ ಸಚಿವ
ಯಾರೂ ಕೇಳದಿದ್ದರೂ ಕೇಂದ್ರ ಸರ್ಕಾರವು ಆರ್ಥಿಕ ದುರ್ಬಲರಿಗೆಂದು (ಇಡಬ್ಲುಎಸ್) ಶೇ 10ರಷ್ಟು ಮೀಸಲಾತಿಯ ಉಡುಗೊರೆ ನೀಡಿದೆ. ಮೀಸಲಾತಿಯನ್ನು ಸಾಮಾಜಿಕ ಹಿಂದುಳಿಯುವಿಕೆ ಆಧರಿಸಿ ನೀಡಬೇಕೆ ಹೊರತು ಆರ್ಥಿಕ ಹಿಂದುಳಿಯುವಿಕೆ ಆಧರಿಸಿ ಅಲ್ಲ.– ಎ.ಬಿ.ರಾಮಚಂದ್ರಪ್ಪ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ
‘ಭ್ರಮಾಲೋಕದಲ್ಲಿ ತೇಲುವಂತಿಲ್ಲ’
‘ಶೋಷಿತರ ಹಿಂದುಳಿಯುವಿಕೆಗೆ 2000 ವರ್ಷಗಳ ಇತಿಹಾಸವಿದೆ. ಬ್ರಾಹ್ಮಣ್ಯದ ಮನಃಸ್ಥಿತಿಯವರು ನಮ್ಮನ್ನು ಆದಾಯಹೀನ ವೃತ್ತಿಗೆ ಸೀಮಿತಗೊಳಿಸಿದರು. ಊರಾಚೆ ವಾಸಕ್ಕೆ ತಳ್ಳಿ ದಾಸ್ಯದ ಬದುಕಿಗೆ ಕಾರಣರಾದರು. ಹೀಗಿರುವಾಗ ಭಾರತದ್ದು ಶ್ರೀಮಂತ ವಿಶಿಷ್ಟ ಸಂಸ್ಕೃತಿ ಎಂದು ಬೆನ್ನು ತಟ್ಟಿಕೊಳ್ಳುವುದು ಸರಿಯೇ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಪ್ರಶ್ನಿಸಿದರು. ‘ಒಳ ಮೀಸಲಾತಿ ಸಿಕ್ಕಿದೆ ಎಂದು ನಾವು ಸಂಭ್ರಮದ ಭ್ರಮಾಲೋಕದಲ್ಲಿ ತೇಲುವಂತಿಲ್ಲ. ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವ ಮೀಸಲಾತಿಯನ್ನು ರದ್ದು ಪಡಿಸುತ್ತೇವೆ ಎನ್ನುವ ಬ್ರಾಹ್ಮಣ್ಯ ಮಾನಸಿಕತೆಯ ಅಪಾಯಗಳನ್ನು ನಾವು ಎದುರಿಸಬೇಕಾಗಿದೆ ಎಂಬುದನ್ನು ಸ್ಮರಣೆಯಲ್ಲಿಟ್ಟುಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.