ದಾವಣಗೆರೆ: ಇಲ್ಲಿನ ಮಾಗನೂರು ಬಸಪ್ಪ ಪ್ರತಿಷ್ಠಾನ ಸ್ಥಾಪಿಸಿರುವ ‘ಆರೂಢ ದಾಸೋಹಿ ಮಾಗನೂರು ಬಸಪ್ಪ ಪ್ರಶಸ್ತಿ’ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
‘ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಬೆಂಗಳೂರಿನ ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಆ.23ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರತಿ ವರ್ಷ ಒಬ್ಬರಂತೆ ಈವರೆಗೆ 11 ಜನರಿಗೆ ಪ್ರದಾನ ಮಾಡಲಾಗಿದೆ. ಪ್ರಸಕ್ತ ವರ್ಷದ ಪ್ರಶಸ್ತಿಯನ್ನು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರದಾನ ಮಾಡಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ ಮಾಗನೂರು ಸಂಗಮೇಶಗೌಡ, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ವಿವರಿಸಿದರು.
ಮಾಗನೂರು ಬಸಪ್ಪ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಆರ್.ಶಿರಗುಂಬಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ, ರಾಘವೇಂದ್ರ ನಾಯರಿ, ಎ.ಎಸ್.ಕುಸುಮಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.