ADVERTISEMENT

ದಾವಣಗೆರೆ | ರಾಜಕೀಯದಲ್ಲಿ ಇತಿಹಾಸ ಬರೆಯಲಿರುವ ಮಹಾಸಂಗಮ: ಧರ್ಮೇಂದ್ರ ಪ್ರಧಾನ್

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 6:41 IST
Last Updated 19 ಮಾರ್ಚ್ 2023, 6:41 IST
ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ‘ಮಹಾಸಂಗಮ’ ಕಾರ್ಯಕ್ರಮದಲ್ಲಿ ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ನಾಯಕರಾದ ಅರುಣ್‌ ಸಿಂಗ್, ಧರ್ಮೇಂದ್ರ ಪ್ರಧಾನ್‌ ಸ್ಥಳ ಪರಿಶೀಲಿಸಿದರು
ದಾವಣಗೆರೆಯಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ‘ಮಹಾಸಂಗಮ’ ಕಾರ್ಯಕ್ರಮದಲ್ಲಿ ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ನಾಯಕರಾದ ಅರುಣ್‌ ಸಿಂಗ್, ಧರ್ಮೇಂದ್ರ ಪ್ರಧಾನ್‌ ಸ್ಥಳ ಪರಿಶೀಲಿಸಿದರು   

ದಾವಣಗೆರೆ: ಮಾರ್ಚ್‌ 25ರಂದು ಜರುಗಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾವೇಶವು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಲಿದೆ. ರಾಜ್ಯದ ವಿಕಾಸದ ಜಾತ್ರೆಯಾಗಲಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೇಳಿದರು.

ಜಿಎಂಐಟಿ ಕಾಲೇಜು ಪಕ್ಕದ ಸಮಾವೇಶ ಸ್ಥಳದಲ್ಲಿ ಶನಿವಾರ ಪೂರ್ವಸಿದ್ಧತೆ ಪರಿಶೀಲಿಸಿದ ನಂತರ ಮಾತನಾಡಿದರು.

ರಾಜ್ಯದಲ್ಲೂ ಹಿಂದಿಗಿಂತ ಈಗ ಬಿಜೆಪಿಗೆ ಜನಾಶೀರ್ವಾದವಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಚುನಾವಣೆಯ ಫಲಿತಾಂಶ ಈಗಾಗಲೇ ನಿಶ್ಚಯವಾಗಿದೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಜನರು ಭರವಸೆ ಹೊಂದಿದ್ದಾರೆ. ಹೀಗಾಗಿ ಅಂತ್ಯೋದಯದ ಧ್ಯೇಯದೊಂದಿಗೆ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನ ಆಶೀರ್ವದಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ದಾವಣಗೆರೆ ಸಮಾವೇಶಕ್ಕೆ ನರೇಂದ್ರ ಮೋದಿಯವರು ಬರೀ ಭಾಷಣ ಮಾಡಲು ಬರುತ್ತಿಲ್ಲ. ಧಾರವಾಡ, ಬೆಳಗಾವಿ, ಮಂಡ್ಯ ರೀತಿಯಲ್ಲಿ ಜನರ ಮಧ್ಯೆ ಹೋಗುವ ಸಂಕಲ್ಪ ಅವರದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಪ್ರತಿ ಮನೆಗೂ ತಲುಪಬೇಕು. ದಾವಣಗೆರೆ-ಹರಿಹರ ಅವಳಿ ನಗರಗಳ ಪ್ರತಿ ಮನೆಯಿಂದಲೂ ಕನಿಷ್ಠ ಒಬ್ಬರು ಸಮಾವೇಶಕ್ಕೆ ಬರುವಂತೆ ಎಲ್ಲರಿಗೂ ಆಹ್ವಾನ ಹೋಗಬೇಕು ಎಂದು ಅವರು ಸಲಹೆ ನೀಡಿದರು.

‘ಬಿಜೆಪಿ ಯಾತ್ರೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕೇ ತೋಚದಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಪ್ರೀತಿಯಿಂದ ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ರಾಜ್ಯದ ಜನರೂ ಮೋದಿ ಬಗ್ಗೆ ಅದೇ ಪ್ರೀತಿ, ಅಭಿಮಾನ ಹೊಂದಿದ್ದಾರೆ. ಬೆಳಗಾವಿ, ಮಂಡ್ಯದಲ್ಲಿ 10ಕಿಲೋ ಮೀಟರ್‌ ರಸ್ತೆಯಲ್ಲಿ ಲಕ್ಷಾಂತರ ಜನರು ಮೋದಿಯವರನ್ನು ಅಭಿನಂದಿಸಲು ಜಮಾಯಿಸಿದ್ದರು. ಮಂಡ್ಯ, ಬೆಳಗಾವಿಯ ದಾಖಲೆ ಮುರಿಯುವಂತೆ ದಾವಣಗೆರೆಯಲ್ಲಿ ರಾಜ್ಯದಲ್ಲೇ ಅತಿದೊಡ್ಡ ಸಮಾವೇಶ ಆಗಲಿದೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿಯವರ ಮಾತು ಕೇಳಲು ಜನರು ಸ್ವಯಂಪ್ರೇರಿತರಾಗಿ ಬರುತ್ತಾರೆ. ಅಂತಹವರಿಗೆ ಉಪಾಹಾರ, ಕುಡಿಯುವ ನೀರು, ಪಾರ್ಕಿಂಗ್, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು. ಜವಾಬ್ದಾರಿ ಹೊತ್ತವರು ಸಮಾವೇಶದ ಯಶಸ್ಸಿಗೆ ಹಗಲಿರುಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್. ಲಿಂಗಣ್ಣ, ಕೆ.ಎಸ್. ನವೀನ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ಮುಖಂಡರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಬಿ.ಪಿ. ಹರೀಶ, ಎಂ. ಬಸವರಾಜ ನಾಯ್ಕ, ಸುಧಾ ಜಯರುದ್ರೇಶ್, ಎ.ವೈ. ಪ್ರಕಾಶ, ಯಶವಂತರಾವ್ ಜಾಧವ್, ಯಶೋದಾ ಯಗ್ಗಪ್ಪ, ಬಿ.ಎಸ್. ಜಗದೀಶ, ಮಂಜಾನಾಯ್ಕ ಇದ್ದರು.

‘ಭಾರತದ ಮಾನ ಕಳೆಯುತ್ತಿರುವ ರಾಹುಲ್‌ಗಾಂಧಿಗೆ ಜನರಿಂದ ತಕ್ಕ ಉತ್ತರ’

‘ವಿದೇಶಕ್ಕೆ ಹೋಗಿ ಭಾರತದ ಸಂವಿಧಾನ ಅಪಾಯ ದಲ್ಲಿದ್ದು, ಪ್ರಜಾಪ್ರಭುತ್ವವನ್ನು ಉಳಿಸುವಂತೆ ಬೇಡುವ ಮೂಲಕ ದೇಶದ ಮಾನ ಹರಾಜು ಹಾಕಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಗೆ ಜನರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಅರುಣ್‌ ಸಿಂಗ್‌ ಹೇಳಿದರು.

‘ಅಮೆರಿಕ, ಯುರೋಪ್‌ ದೇಶಗಳಿಗೆ ಹೋಗಿ ಭಾರತದ ಪ್ರಜಾಪ್ರಭುತ್ವವನ್ನು ಉಳಿಸುವಂತೆ ಕೋರಿದ ರಾಹುಲ್ ಗಾಂಧಿ ಅವರನ್ನು ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ. ಭಾರತ್‌ ಜೋಡೊ ಯಾತ್ರೆ ಮಾಡಿದ್ದ ರಾಹುಲ್‌ ಗಾಂಧಿ ಇದೀಗ ವಿದೇಶಗಳಿಗೆ ಹೋಗಿ ಭಾರತದ ಮಾನ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸಗಳಿಂದಲೇ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಕುಸಿಯುತ್ತಿದೆ. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಜನ ಕಾಂಗ್ರೆಸ್‌ ಅನ್ನು ತಿರಸ್ಕರಿಸಲಿದ್ದಾರೆ’ ಎಂದು ಅವರು ವಿಶ್ವಾಸ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.