ADVERTISEMENT

ಆರೋಗ್ಯಕ್ಕಾಗಿ ಶಿಸ್ತುಬದ್ಧ ಜೀವನ ನಡೆಸಿ

ಪೊಲೀಸ್‌ ಕ್ರೀಡಾಕೂಟ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 11:13 IST
Last Updated 27 ಡಿಸೆಂಬರ್ 2018, 11:13 IST
ದಾವಣಗೆರೆಯ ಜಿಲ್ಲಾ ಕವಾಯತು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಎ.ಎಸ್‌.ಪಿ ಟಿ.ಜೆ. ಉದೇಶ್‌ ಚಿತ್ರದಲ್ಲಿದ್ದಾರೆ.
ದಾವಣಗೆರೆಯ ಜಿಲ್ಲಾ ಕವಾಯತು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಎ.ಎಸ್‌.ಪಿ ಟಿ.ಜೆ. ಉದೇಶ್‌ ಚಿತ್ರದಲ್ಲಿದ್ದಾರೆ.   

ದಾವಣಗೆರೆ: ಪೊಲೀಸರು ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಸಲಹೆ ನೀಡಿದರು.

ದಾವಣಗೆರೆ ಜಿಲ್ಲಾ ಪೊಲೀಸ್‌ ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಜೀವನದಲ್ಲಿ ಶಿಸ್ತು ಇದ್ದಾಗ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ADVERTISEMENT

‘ನಮ್ಮ ಮನೆಯ ಬಳಿ ಎರಡು ಪೊಲೀಸ್‌ ಕುಟುಂಬಗಳು ನೆಲೆಸಿದ್ದವು. ನಿವೃತ್ತ ಪೊಲೀಸ್‌ ಅಧಿಕಾರಿ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು. ಆಹಾರ ಸೇವನೆ, ವ್ಯಾಯಾಮ ಪ್ರತಿಯೊಂದರಲ್ಲೂ ಶಿಸ್ತು ಇತ್ತು. ಸೇವೆ ಸಲ್ಲಿಸುತ್ತಿದ್ದ ಇನ್ನೊಬ್ಬ ಪೊಲೀಸ್‌ ಅಧಿಕಾರಿಗೆ ದೊಡ್ಡ ಹೊಟ್ಟೆ ಬಂದಿತ್ತು. ಹಿರಿಯ ಪೊಲೀಸ್‌ ಅಧಿಕಾರಿ ಬಂದಾಗ ಹೊಟ್ಟೆ ಕರಗಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಅದರಂತೆ ಸೇವೆಯಲ್ಲಿದ್ದ ಅಧಿಕಾರಿ ಬಳಿಕ ವ್ಯಾಯಾಮ, ಆಹಾರ ಸೇವನೆಯಲ್ಲಿ ಶಿಸ್ತನ್ನು ಕಾಪಾಡುವ ಮೂಲಕ ಹೊಟ್ಟೆಯನ್ನು ಕರಸಿಕೊಂಡರು. ಹೀಗಾಗಿ ತೆಳ್ಳಗೆ ಇರಬೇಕೋ ಅಥವಾ ದೊಡ್ಡ ಹೊಟ್ಟೆ ಬೆಳೆಸಿಕೊಳ್ಳಬೇಕೋ ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಪದ್ಮ ಬಸವಂತಪ್ಪ ಹೇಳಿದರು.

‘ಕ್ರೀಡೆ ನಿಮ್ಮಲ್ಲಿ ಹೊಸ ವ್ಯಕ್ತಿತ್ವ ರೂಪಿಸುತ್ತದೆ. ಮೂರು ದಿನಗಳ ಈ ಕ್ರೀಡಾಕೂಟ ಖುಷಿ ಹಾಗೂ ಹುಮ್ಮಸ್ಸು ತಂದುಕೊಡುತ್ತದೆ. ಆಟದ ವೇಳೆ ಪರಸ್ಪರ ಸ್ಪರ್ಧೆ ಒಡ್ಡಿದರೂ ನಿಮ್ಮ ನಡುವಿನ ಸ್ನೇಹವನ್ನು ಮರೆಯಬೇಡಿ’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕೆಲವೇ ಜನ ಪಾಲ್ಗೊಳ್ಳುತ್ತಿದ್ದರು. ಆಸಕ್ತ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ಅವಕಾಶ ಸಿಗಲಿ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೆಚ್ಚು ಜನ ಭಾಗವಹಿಸಲಿ ಎಂಬ ಕಾರಣಕ್ಕೆ ಇದೇ ಮೊದಲ ಬಾರಿಗೆ ಉಪ ವಿಭಾಗ ಮಟ್ಟದಲ್ಲೂ ಕ್ರೀಡಾಕೂಟ ನಡೆಸಿದ್ದೇವೆ. ಕ್ರೀಡೆಯಲ್ಲಿ ಸೋಲು–ಗೆಲುವು ಎರಡೂ ಇರುತ್ತದೆ. ನಿಮ್ಮಲ್ಲಿ ಕ್ರೀಡಾಮನೋಭಾವ ಇರಲಿ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡು ಬನ್ನಿ’ ಎಂದು ತಿಳಿಸಿದರು.

‘ಜೀವನದಲ್ಲಿ ಯಶಸ್ಸು ಲಭಿಸಿಲ್ಲ ಎಂದು ಕುಗ್ಗಬೇಕಾಗಿಲ್ಲ. ಆತ್ಮಸ್ಥೈರ್ಯ ಬೆಳೆಸಿಕೊಂಡು ಕಾರ್ಯನಿರ್ವಹಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌ ವಂದಿಸಿದರು.

ನಗರ ಉಪವಿಭಾಗದ ಡಿಎಸ್‌ಪಿ ನಾಗರಾಜ್‌, ಗ್ರಾಮಾಂತರ ಉಪವಿಭಾಗದ ಡಿಎಸ್‌ಪಿ ಮಂಜುನಾಥ ಗಂಗಲ್‌, ಹರಪನಹಳ್ಳಿ ಉಪ ವಿಭಾಗದ ಡಿಎಸ್‌ಪಿ ನಾಗೇಶ್‌ ಐತಾಳ, ಹಲವು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ 150ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ವಯೋಮಾನ ಹಾಗೂ ಸಿಬ್ಬಂದಿ, ಅಧಿಕಾರಿಗಳ ವಿಭಾಗಳಲ್ಲಿ ಅಥ್ಲೆಟಿಕ್ಸ್‌ ಮತ್ತು ಗುಂಪು ಆಟಗಳಾದ ವಾಲಿಬಾಲ್‌, ಕಬಡ್ಡಿ, ಹಗ್ಗ ಜಗ್ಗಾಟ, ಕ್ರಿಕೆಟ್‌ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.