
ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಜಿಲ್ಲೆಯಲ್ಲಿ ಇನ್ನೂ ಕೇಂದ್ರವನ್ನು ತೆರೆದಿಲ್ಲ. ಎಥೆನಾಲ್ ಉತ್ಪಾದಿಸುವ ಘಟಕಗಳ ಮಾಲೀಕರ ಮನವೊಲಿಸಿ ಅಗತ್ಯ ಠೇವಣಿ ಪಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.
‘ಎಥೆನಾಲ್ ಉತ್ಪಾದಿಸುವ ಡಿಸ್ಟಲಿರಿಗಳು ಮೆಕ್ಕೆಜೋಳದ ಶೇ 50ರಷ್ಟನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ಸರ್ಕಾರ ಸೂಚಿಸಿದೆ. ಕುಕ್ಕವಾಡದ ‘ದಾವಣಗೆರೆ ಶುಗರ್ ಕಂಪನಿ ಲಿಮಿಟೆಡ್’ 729 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕಿದೆ. ಈ ಮೊತ್ತದ ಅರ್ಧದಷ್ಟನ್ನು ಠೇವಣಿ ಇಟ್ಟಿಲ್ಲ. ಇದೇ ನೆಪವನ್ನು ಮುಂದಿಟ್ಟುಕೊಂಡು ಖರೀದಿ ಕೇಂದ್ರ ಕಾರ್ಯಾರಂಭವಾಗಿಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಹಾವೇರಿ ಜಿಲ್ಲೆಯಲ್ಲಿ 3 ಡಿಸ್ಟಿಲರಿ ಘಟಕಗಳಿದ್ದು, ಎಲ್ಲೆಡೆ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದೆ. ಫೌಲ್ಟ್ರಿಫಾರಂ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಕೂಡ ಮೆಕ್ಕೆಜೋಳ ಖರೀದಿಸುತ್ತಿದೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಇದು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದು ದೂರಿದರು.
‘ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ರಾಜ್ಯ ಸರ್ಕಾರ ₹ 250 ಸಹಾಯಧನ ಘೋಷಿಸಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಮೆಕ್ಕೆಜೋಳ ಮಾರಾಟ ಮಾಡಿದ ಎಲ್ಲ ರೈತರಿಗೂ ಈ ಸೌಲಭ್ಯ ಸಿಗಬೇಕು. ಮಾರಾಟ ಮಾಡಿದ ರಸೀದಿ ಆಧಾರದಲ್ಲಿ ರೈತರಿಗೆ ಸಹಾಯಧನ ವಿತರಿಸಬೇಕು. ಸಹಾಯಧನದಲ್ಲಿ ಮೆಕ್ಕೆಜೋಳ ಮಾರಾಟ ಮಾಡುವ ರೈತರಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಹೂವಿನಮಡು ನಾಗರಾಜ್, ಹೊಸಹಳ್ಳಿ ಮೋಹನ್, ಚಿನ್ನಸಮುದ್ರ ಸುರೇಶ್, ದಾವಲ್ ನಾಯ್ಕ ಹಾಜರಿದ್ದರು.
ಎಥೆನಾಲ್ ಉತ್ಪಾದಕರು ಅಧಿಕೃತ ಏಜೆನ್ಸಿಗಳಿಂದ ಮೆಕ್ಕೆಜೋಳ ಖರೀದಿಸಬೇಕು. ಆದರೆ ರೈತರು ವ್ಯಾಪಾರಸ್ಥರಿಂದ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಬೇಕುಹುಚ್ಚವ್ವನಹಳ್ಳಿ ಮಂಜುನಾಥ್ ಅಧ್ಯಕ್ಷ ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.