ADVERTISEMENT

ನಗುವವರ ಮುಂದೆ ಹೆಮ್ಮೆಪಡುವ ಸಾಧನೆ ಮಾಡಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 9:50 IST
Last Updated 12 ಫೆಬ್ರುವರಿ 2020, 9:50 IST
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು. ಕಲುಸಚಿವ ಪ್ರೊ.ಬಸವರಾಜ ಬಣಕಾರ್, ಕುಲಪತಿ ಪ್ರೊ.ಎಸ್.ವಿ. ಹಲಸೆ ಇತರರು ಇದ್ದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು. ಕಲುಸಚಿವ ಪ್ರೊ.ಬಸವರಾಜ ಬಣಕಾರ್, ಕುಲಪತಿ ಪ್ರೊ.ಎಸ್.ವಿ. ಹಲಸೆ ಇತರರು ಇದ್ದರು.   

ದಾವಣಗೆರೆ: ನಮ್ಮ ಸ್ಥಿತಿಗತಿ, ದೌರ್ಬಲ್ಯಗಳನ್ನು ನೋಡಿ ನಗುವವರ ಮುಂದೆ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡುವ ಛಾತಿ, ಇಚ್ಛಾಶಕ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಆಗಲೇ ಭವಿಷ್ಯದಲ್ಲಿ, ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ಫೆ.11ರಂದು ಏರ್ಪಡಿಸಿದ್ದ ‘ಪಠ್ಯಕ್ರಮ ವಿನ್ಯಾಸ’ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ವಾಸ್ತವದ ಅರಿವು ಮೂಡಿಸಿ ಭವಿಷ್ಯದ ಕಲ್ಪನೆಯನ್ನು ಬಿತ್ತಬೇಕು. ಬದುಕಿಗೆ ಅಗತ್ಯವಿರುವ ಭಾಷೆ, ಸಂಸ್ಕೃತಿ, ಸಂವಹನ ಕೌಶಲಗಳನ್ನು ತಿಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ನುಡಿದರು.

‘ವಿದ್ಯಾರ್ಥಿಗಳ ಶೈಕ್ಷಣಿಕ ದೌರ್ಬಲ್ಯ, ಹಿಂಜರಿಕೆಗಳನ್ನು ಗುರುತಿಸಿ ಆತ್ಮವಿಶ್ವಾಸ ಮೂಡಿಸಬೇಕು. ಸರಳ ಶೈಲಿಯಲ್ಲಿ ಸಂವಹನ ಕಲೆಯನ್ನು ರೂಢಿಸಿ, ಒಳ್ಳೆಯ ವಿಚಾರಗಳನ್ನು ಬಿತ್ತಬೇಕು. ಓದು- ಬರವಣಿಗೆಯ ಜೊತೆ ಮಾತನಾಡುವ ಕೌಶಲವನ್ನು ಕಲಿಸಿ, ಪದವಿ ಪಡೆದು ಹೊರ ಹೋಗುವ ಮುನ್ನ ಸಿದ್ಧ ಉತ್ಪಾದನೆಯಾಗಿ ಹೊರ ಹೊಮ್ಮಬೇಕು’ ಎಂದರು.

‘ಇತ್ತೀಚೆಗೆ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದರೂ ಇಂಗ್ಲಿಷ್ ಭಾಷಾಂತರದಲ್ಲಿ ಅಂಕ ಗಳಿಸಲು ವಿಫಲರಾಗುತ್ತಿದ್ದಾರೆ. ಇದಕ್ಕೆ ಭಾಷೆಯ ಬಗೆಗಿನ ಭಯ ಅಥವಾ ಕಲಿಕೆಯ ವೈಫಲ್ಯಕಾರಣ ಇರಬಹುದು. ಆದರೆ ಕನಿಷ್ಠ ಅರ್ಥ ಮಾಡಿಕೊಂಡು ವಾಕ್ಯರಚನೆ ಮಾಡುವ ಜ್ಞಾನವನ್ನು ಬೆಳೆಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯ’ ಎಂದು ಹೇಳಿದರು.

‘ವಿಶ್ವವಿದ್ಯಾಲಯದಲ್ಲಿ ಓದುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರು. ಅವರೆಲ್ಲರ ಮಾತೃ ಭಾಷೆ ಇಂಗ್ಲಿಷ್ ಆಗಿರಲು ಸಾಧ್ಯವೇ ಇಲ್ಲ. ಯಾವುದೇ ವಿಚಾರದ ಚರ್ಚೆ ಅಥವಾ ಸಂಭಾಷಣೆ ನಡೆದಾಗ ವಿಚಾರಗಳು ಪ್ರತಿಯೊಬ್ಬರಲ್ಲೂ ಮಾತೃಭಾಷೆಯಲ್ಲಿ ಯೋಚನೆ ಮಾಡಿ ವ್ಯಕ್ತವಾಗುತ್ತವೆ. ಹೀಗಾಗಿ ಮಾತೃ ಭಾಷೆಯಷ್ಟು ಸುಲಭವಾಗಿ ಸಂವಹನ ನಡೆಸಲು ಕಷ್ಟವಾಗುತ್ತದೆ. ಆದರೆ ಅಭ್ಯಾಸ ಮಾಡಿಕೊಂಡಾಗ ಸುಲಭವಾಗುತ್ತದೆ’ ಎಂದು ತಿಳಿಸಿದರು.

ವಿಮರ್ಶಕ ಪ್ರೊ.ಮನು ಚಕ್ರವರ್ತಿ ಮಾತನಾಡಿ, ‘ಪಠ್ಯಕ್ರಮ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಭವಿಷ್ಯದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲಿ ್ಲಇರಬೇಕು. ಮಕ್ಕಳ ಭವಿಷ್ಯವು ಪಠ್ಯವನ್ನೇ ಆಧರಿಸಿರುತ್ತದೆ ಎಂಬುದನ್ನುಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ‘ಪಠ್ಯಕ್ರಮವು ಮಕ್ಕಳ ಭವಿಷ್ಯದ ಬುನಾದಿಯಾಗಬೇಕು. ಇಲ್ಲಿ ಸಿದ್ಧವಾಗುವ ಶಿಕ್ಷಣ ಕ್ರಮ ಮಕ್ಕಳ ಕಲಿಕೆಯ ಜೊತೆಗೆ ಸ್ವತಂತ್ರವಾಗಿ ಆಲೋಚನೆ ಮಾಡುವ, ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಬಸವರಾಜ ಬಣಕಾರ. ಪ್ರೊ.ಎನ್.ಎಸ್. ಗುಂಡೂರ, ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ. ಅಡವಿರಾವ್, ಕಲಾ ವಿಭಾಗದ ಡೀನ್ ಪ್ರೊ.ಕೆ.ಬಿ. ರಂಗಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.