
ಮಲೇಬೆನ್ನೂರು: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಗುರುವಾರ ವೈಭವದಿಂದ ನಡೆಯಿತು.
ಜಲಸಂಪನ್ಮೂಲ ಇಲಾಖೆ ಮೈದಾನದಿಂದ ಆರಂಭಗೊಂಡು ಮುಖ್ಯವೃತ್ತ, ಸಂತೆ ರಸ್ತೆ, ಆಜಾದ್ ನಗರ ವೃತ್ತ, ರಾಜಬೀದಿಯಲ್ಲಿ ಮೆರವಣಿಗೆ ಸಾಗಿತು. ಪಟ್ಟಣದ ಮುಖ್ಯಬೀದಿ ಕೇಸರಿ ಬಾವುಟ ತಳಿರು ತೋರಣ, ಬ್ಯಾನರ್ ಬಂಟಿಂಗ್ಸ್, ತಮಟೆ ಮೇಳ, ವಾದ್ಯವೃಂದ, ನಾಸಿಕ್ ಡೋಲು, ಮಹಿಳಾ ಡೊಳ್ಳು ಮೇಳ, ಕೀಲು ಕುದುರೆ ಕುಣಿತಗಳು ಉತ್ಸವಕ್ಕೆ ಕಳೆ ತಂದಿದ್ದವು.
ಯುವಕ ಯುವತಿಯರ ಗುಂಪು ನರ್ತಿಸಿ ಸಂಭ್ರಮಿಸಿತು. ಕುಡಿಯುವ ನೀರು, ಮಜ್ಜಿಗೆ, ಲಡ್ಡು ವಿತರಣೆ ಮಾಡಲಾಯಿತು. ದಾನಿಗಳು ಊಟ, ಲಘು ಉಪಾಹಾರ, ತಂಪು ಪಾನೀಯ ವಿತರಣೆಗೆ ವ್ಯವಸ್ಥೆ ಮಾಡಿದ್ದರು.
ಪೊಲೀಸ್ ಇಲಾಖೆಯಿಂದ ಗಣೇಶೋತ್ಸವಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸ್ವಯಂಸೇವಕರು ಮೆರವಣಿಗೆಯುದ್ಧಕ್ಕೂ ಜನರನ್ನು ನಿಯಂತ್ರಿಸಿದರು. 10,000ಕ್ಕೂ ಹೆಚ್ಚು ಜನ ಪಾಲ್ಗೊಂಡು ಉತ್ಸವದ ಕಳೆ ಹೆಚ್ಚಿಸಿದ್ದರು. ಧ್ವಜ ಹಾಗೂ ಬಾವುಟ ₹ 62,000ಕ್ಕೆ ಹರಾಜಾಯಿತು.
ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಯರೇಚಿಕ್ಕನಹಳ್ಳಿ ಅಶೋಕ್ ಹಾಗೂ ಪದಾಧಿಕಾರಿಗಳು, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಅಕ್ಕಿ ಉದ್ಯಮಿ ಬಿ.ಎಂ. ವಾಗೀಶ್ ಸ್ವಾಮಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಹನಗವಾಡಿ ವೀರೇಶ್, ಐರಣಿ ಅಣ್ಣೇಶ್, ಪಟೇಲ್ ಮಂಜುನಾಥ್, ಪಿ.ಆರ್. ರಾಜು, ಎ.ಕೆ. ಲೋಕೇಶ್, ಜಿ.ಪಿ. ಹನುಮಗೌಡ, ಚಿಟ್ಟಕ್ಕಿ ರಮೇಶ್, ನಾಗರಾಜ್, ರವಿ ಮೇದಾ ಇದ್ದರು.
ಅಗ್ನಿಶಾಮಕ ದಳ, ಬೆಸ್ಕಾಂ ಸಿಬ್ಬಂದಿ, ಸಿಪಿಐ ಸುರೇಶ್ ಸಗರಿ, ಪಿಎಸ್ಐ ಹಾರೂನ್ ಅಖ್ತರ್, ಕೆಎಸ್‌ಆರ್‌ಪಿ, ಡಿಎಆರ್, ಗೃಹರಕ್ಷಕದಳ, ಪೊಲೀಸರೊಂದಿಗೆ ಭದ್ರತೆ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.