
ಮಲೇಬೆನ್ನೂರು: ಹೊರವಲಯದಲ್ಲಿ ಹರಿಯುತ್ತಿರುವ ಭದ್ರಾ 9ನೇ ‘ಬಿ’ ಉಪನಾಲೆ ಅಚ್ಚುಕಟ್ಟು ವ್ಯಾಪ್ತಿಯ ರೈತರೇ ವಂತಿಗೆ ಸಂಗ್ರಹಿಸಿ ಬುಧವಾರ ಡ್ರಾಪ್ ನಿರ್ಮಾಣ ಕಾರ್ಯವನ್ನು ಆರಂಭಿಸಿದರು.
ಭತ್ತ ಹಾಗೂ ತೋಟದ ಬೆಳೆಗಾರರ ಜಮೀನಿಗೆ ಹರಿದು ಹೋಗುವ ಹೊಲಗಾಲುವೆ ಪೈಪ್‌ಗಳಿಗೆ ನೀರು ಹತ್ತುತ್ತಿಲ್ಲ. ಪ್ರಸಕ್ತ ಬೇಸಿಗೆ ಹಂಗಾಮಿಗೆ ಭದ್ರಾ ಅಣೆಕಟ್ಟೆಯಿಂದ ಬಲದಂಡೆ ನಾಲೆಗೆ ನೀರು ಬಿಡುಗಡೆ ಆಗಲಿದೆ. ಜಲಾಶಯ ಭರ್ತಿಯಾಗಿದ್ದರೂ ಕೊನೆ ಭಾಗಕ್ಕೆ ನೀರು ಹರಿದು ಬರುವುದು ಅನುಮಾನ. ಎಂಜಿನಿಯರುಗಳಿಗೆ ಮನವಿ ಮಾಡಿ ಸಾಕಾಗಿದೆ ಎಂದು ರೈತರು ಆಕ್ರೋಶ ಹೊರ ಹಾಕಿದರು.
ಜನಪ್ರತಿನಿಧಿಗಳು, ಕಾಡಾ ಅಧ್ಯಕ್ಷರು, ಎಸ್‌ಇ, ಸಿಇ, ಡಿಸಿ ಅವರಿಗೆ ನಾಲೆ ನೋಡಲು, ಅಕ್ರಮ ಪಂಪ್ ತೆರವು ಮಾಡಲು, ಕನಿಷ್ಟ ಹೂಳೆತ್ತಲು ಸಮಯ ಇಲ್ಲ ಎಂದು ಆರೋಪಿಸಿದರು.
ಇಲ್ಲಿ ಬಿಜೆಪಿ ಶಾಸಕ ಇರುವ ಕಾರಣ ಸರ್ಕಾರ ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ರೈತ ಕೆ.ಜಿ. ಮಂಜುನಾಥ್ ಹರಿಹಾಯ್ದರು.
ಸರ್ಕಾರದಲ್ಲಿ ನಾಲೆ ಕೆಲಸಕ್ಕೆ ಹಣ ಇಲ್ಲದ ಕಾರಣ ರೈತರು ₹ 2 ಲಕ್ಷ ವಂತಿಗೆ ಎತ್ತಿ, ದುರಸ್ತಿ ಕಾರ್ಯ ಮಾಡುತ್ತಿದ್ದೇವೆ. ನೀರಿನ ಟ್ಯಾಂಕರ್, ಟ್ರಾಕ್ಟರ್ ಊಟೋಪಚಾರದ ವ್ಯವಸ್ಥೆಯನ್ನು ರೈತರೇ ಒಗ್ಗೂಡಿ ಮಾಡಿಕೊಂಡಿದ್ದೇವೆ ಎಂದರು.
2 ಲೋಡ್ 20 ಎಂಎಂ ಜೆಲ್ಲಿ, 40 ಮೂಟೆ ಸಿಮೆಂಟ್, 2 ಲೋಡ್ ಎಂ. ಸ್ಯಾಂಡ್ ಬಳಸಿ ಕಲ್ಲಟ್ಟಣೆ, ಕಾಂಕ್ರೀಟ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ರೈತರಾದ ವಿನಯ್, ಹಾಲೇಶ್, ವೇದಮೂರ್ತಿ, ಶರಣ ಮುದ್ದಣ ಸಾವಯವ ಕೃಷಿಕರ ಬಳಗದ ಸಂಚಾಲಕ ಆಂಜನೇಯ, ಗೌಡ್ರ ಧನಂಜಯ, ಮಂಜುನಾಥ್, ನಾಗರಾಜ್, ಸೀತಾರಾಮಪ್ಪ ಮುದೇಗೌಡ್ರ ತಿಪ್ಪೇಶ್ ಇದ್ದರು.
ಅನುದಾನವಿಲ್ಲ ಭದ್ರಾನಾಲೆ
ಮಲೇಬೆನ್ನೂರು ಉಪವಿಭಾಗಕ್ಕೆ ಯಾವುದೇ ಅನುದಾನ ಮಂಜೂರಾಗಿಲ್ಲ ಎಂದು ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಹಾಗೂ ಬಸವಾಪಟ್ಟಣ ಉಪವಿಭಾಗದ ಎಇಇ ಸಂತೋಷ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.