
ಮಲೇಬೆನ್ನೂರು: ಮೂರು ವರ್ಷಗಳಿಂದ ಜಿಗಳಿ ರಸ್ತೆ ಡಾಂಬರೀಕರಣ ನಿಧಾನಗತಿಯಲ್ಲಿ ಸಾಗಿದ್ದು, ತುರ್ತಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ರಸ್ತೆಯುದ್ದಕ್ಕೂ ಶಾಲೆ– ಕಾಲೇಜು, ಕೈಗಾರಿಕೆ, ಅಂಗಡಿ, ಆಸ್ಪತ್ರೆಗಳಿದ್ದು, ರಸ್ತೆ ದೂಳುಮುಕ್ತ ಮಾಡಬೇಕು ಎಂದು ಘೋಷಣೆ ಕೂಗಿದರು.
‘ಮಳೆಗಾಲದಲ್ಲಿ ಕೆಸರಿನ ಸಮಸ್ಯೆ, ಬೇಸಿಗೆಕಾಲದಲ್ಲಿ ದೂಳು ಏಳುತ್ತದೆ. ಇದರಿಂದ ತರಗತಿ ನಡೆಸುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬರುತ್ತಿದ್ದಾರೆ’ ಎಂದು ಯೆಸ್ ಇಂಡಿಯಾ ಶಾಲೆ ಶಿಕ್ಷಕ ನೌಫಲ್ ಬೇಸರ ವ್ಯಕ್ತಪಡಿಸಿದರು.
ಲಯನ್ಸ್ ವಲಯಾಧ್ಯಕ್ಷ ಚಿಟ್ಟಕ್ಕಿ ನಾಗರಾಜ್ ಮಾತನಾಡಿ, ‘ದೂಳು ರಸ್ತೆ ಕಾರಣ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸುತ್ತಿಲ್ಲ. ಕಚೇರಿ ಪೀಠೋಪಕರಣ, ಗಣಕಯಂತ್ರ ಹಾಳಾಗಿವೆ ಎಂದರು.
ಪುರಸಭಾ ಸದಸ್ಯ ನಯಾಜ್ ಮಾತನಾಡಿ, ಸಮಸ್ಯೆ ಪರಿಹರಿಸಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳನ್ನು ಸಾಮಾನ್ಯ ಸಭೆಗೆ ಬರುವಂತೆ ಆಹ್ವಾನಿಸಿದರೂ ಪಾಲ್ಗೊಳ್ಳುತ್ತಿಲ್ಲ. ಗುತ್ತಿಗೆದಾರ ಕೂಡ ನಾಪತ್ತೆಯಾಗಿದ್ದಾನೆ. ಸ್ಥಳಿಯ ಜನಪ್ರತಿನಿಧಿ ಆಸಕ್ತ ವಹಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.
ನಾಮನಿರ್ದೇಶಿತ ಸದಸ್ಯ ಬುಡ್ಡವ್ವಾರ್ ಅಬ್ದುಲ್ ರಫಿಕ್, ನ್ಯಾಮತಿ ಚಂದ್ರಣ್ಣ, ಕೊಪ್ಪದ ಗಿರೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸೈಯದ್ ಸೈಫುಲ್ಲಾ, ಮಕ್ಕಳ ತಜ್ಞ ವೈದ್ಯ ಶ್ರೀನಿವಾಸ್, ಪುರಸಭೆ ವ್ಯವಸ್ಥಾಪಕಿ ಜಯಲಕ್ಷ್ಮೀ, ಜೆ.ಇ. ರಾಘವೇಂದ್ರ, ಲಿಂಗರಾಜ್, ಪೂಜಾರ್ ನಾಗಪ್ಪ, ಶೇರ್ ಅಲಿ, ಆಚಾರಪ್ಪ, ಮೆಹಬೂಬ್, ಅಬ್ದುಲ್ ರಜಾಕ್, ರೆಹಮಾನ್ ಪಾಲ್ಗೊಂಡಿದ್ದರು.
ಎಎಸ್‌ಐ ಶ್ರೀನಿವಾಸ್, ಲೋಕೋಪಯೋಗಿ ಇಲಾಖೆ ಎಇಇ ಮರಿಸ್ವಾಮಿ ನಾಗರಿಕರ ಸಮಸ್ಯೆ ಆಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.