ADVERTISEMENT

ಮದ್ದಲ್ಲದ ಹಿತ್ತಲ ಗಿಡವೇ ಇಲ್ಲ

ದೇಶದಲ್ಲಿವೆ 21 ಲಕ್ಷ ವನಸ್ಪತಿಗಳು * ಮಾರಕ ಕಾಯಿಲೆಗಳಿಗೂ ಮನೆಮದ್ದು ಸಾಕು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:39 IST
Last Updated 8 ಡಿಸೆಂಬರ್ 2018, 15:39 IST
ದಾವಣಗೆರೆಯಲ್ಲಿ ಶನಿವಾರ ಭಾರತ ವಿಕಾಸ ಪರಿಷತ್‌ ಹಮ್ಮಿಕೊಂಡಿದ್ದ ಮನೆಮದ್ದು ಉಪನ್ಯಾಸ–ಸಂವಾದ ಕಾರ್ಯಕ್ರಮದಲ್ಲಿ ಪಾರಂಪಾರಿಕ ವೈದ್ಯ ಹನುಮಂತ ಮಳಲಿ ಮಾತನಾಡಿದರು
ದಾವಣಗೆರೆಯಲ್ಲಿ ಶನಿವಾರ ಭಾರತ ವಿಕಾಸ ಪರಿಷತ್‌ ಹಮ್ಮಿಕೊಂಡಿದ್ದ ಮನೆಮದ್ದು ಉಪನ್ಯಾಸ–ಸಂವಾದ ಕಾರ್ಯಕ್ರಮದಲ್ಲಿ ಪಾರಂಪಾರಿಕ ವೈದ್ಯ ಹನುಮಂತ ಮಳಲಿ ಮಾತನಾಡಿದರು   

ದಾವಣಗೆರೆ: ಮದ್ದಲ್ಲದ ಹಿತ್ತಲ ಗಿಡವೇ ಇಲ್ಲ. ಮನೆ ಔಷಧಿಗೂ ಮಾರಕ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯಿದೆ. ದೇಶದಲ್ಲಿ 21 ಲಕ್ಷ ವನಸ್ಪತಿಗಳಿದ್ದು, ಅವನ್ನು ವೈದ್ಯಕ್ಕೆ ಬಳಸಬೇಕಿದೆ ಎಂದು ಪಾರಂಪಾರಿಕ ವೈದ್ಯ ಹನುಮಂತ ಮಳಲಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಭಾರತ ವಿಕಾಸ ಪರಿಷತ್‌ ಹಮ್ಮಿಕೊಂಡಿದ್ದ ಮನೆಮದ್ದು ಉಪನ್ಯಾಸ–ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾರಂಪಾರಿಕ ಜ್ಞಾನದಿಂದ ಬಂದ ಮನೆಮದ್ದು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿತ್ತು. ಆದರೆ, ಜೀವನ ಶೈಲಿ ಬದಲಾದಂತೆ ಜನರು ವೈದ್ಯಕೀಯ ಪದ್ಧತಿಯನ್ನೂ ಬದಲಾಯಿಸಿಕೊಂಡರು. ಇದರಿಂದಾಗಿ ಹಲವು ಸಮಸ್ಯೆಗಳು ತಲೆದೋರಿವೆ. ಮತ್ತೆ ಮಣ್ಣಿಗೆ ಎಂಬಂತೆ ಮತ್ತೆ ಮನೆಮದ್ದಿಗೆ ಮರಳಬೇಕಾದ ಕಾಲ ಬಂದಿದೆ ಎಂದು ಹೇಳಿದರು.

ADVERTISEMENT

‘ಮನೆಮದ್ದು ಖರ್ಚು ಕಡಿಮೆ ಆದರೆ, ಕಟ್ಟುನಿಟ್ಟಾಗಿ ಪಥ್ಯ ಮಾಡಬೇಕು. ಪಥ್ಯ ಮಾಡಿದರೆ ರೋಗ ನಾಪತ್ತೆಯಾಗುತ್ತದೆ. ಪಥ್ಯ ಮಾಡದಿದ್ದರೆ ರೋಗಿಯೇ ನಾಪತ್ತೆಯಾಗುತ್ತಾನೆ. ನಂಬಿಕೆ ಮತ್ತು ಪಥ್ಯಪಾಲನೆ ಇರದಿದ್ದರೆ ಮನೆಮದ್ದು ಅಪಥ್ಯವಾಗುತ್ತದೆ’ ಎಂದು ತಿಳಿಸಿದರು.

ದೇಶದಲ್ಲಿ ಎಂಬಿಬಿಎಸ್‌ ವೈದ್ಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಮದ್ದು ಪಂಡಿತರಿದ್ದಾರೆ. ಆದರೆ, ಜನರ ಮನೋಧೋರಣೆ ಬದಲಾಗಿರುವುದರಿಂದ ಮನೆಮದ್ದಿನ ಬಗ್ಗೆ ಅಲಕ್ಷ್ಯ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಸಾಲುಗಟ್ಟಿ ನಿಂತಿದ್ದರೆ, ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಆ ವೈದ್ಯ ಶ್ರೇಷ್ಠ ಎಂಬ ಮನಸ್ಥಿತಿ ಹೆಚ್ಚಾಗಿದೆ. ಇದು ಬದಲಾಗಬೇಕು ಎಂದರು.

ಆರೋಗ್ಯ ವಿಕಾಸ್‌ ಪರಿಷತ್‌ ಅಧ್ಯಕ್ಷ ಡಾ. ಶ್ರೀಶೈಲ ಎಂ. ಬ್ಯಾಡಗಿ, ‘ಸತತವಾಗಿ ರೋಗನಿರೋಧಕ ಚುಚ್ಚುಮದ್ದುಗಳನ್ನು ಬಳಸುತ್ತಿರುವುದರಿಂದ ಮನುಷ್ಯರಲ್ಲಿ ಪ್ರತಿರೋಧ ಶಕ್ತಿಯೇ ಕುಗ್ಗಿದೆ. ಅತಿಯಾದ ಔಷಧಗಳ ಬಳಕೆಯಿಂದ ರೋಗಾಣುಗಳ ತಾಳುವಿಕೆ ಸಾಮರ್ಥ್ಯ ಹೆಚ್ಚಾಗಿದೆ. ಐಸಿಯುಗಳಲ್ಲೂ ಸೋಂಕು ತಗುಲವ ಅಪಾಯ ಹೆಚ್ಚಾಗಿದೆ. ಆರೋಗ್ಯಕರ ಆರೋಗ್ಯಪದ್ಧತಿ ಅನುಸರಿಸುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ಭಾರತ ವಿಕಾಸ ಪರಿಷತ್‌ ಅಧ್ಯಕ್ಷ ಮಹಾಂತೇಶ್‌ ಯು. ಅಗಡಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪ್ರಾಂತ ಅಧ್ಯಕ್ಷ ಬಿ.ಕೆ. ತಿಪ್ಪೇಸ್ವಾಮಿ ಇದ್ದರು.

ಭವಾನಿ ಪ್ರಾರ್ಥಿಸಿದರು. ಸಂಘಟನೆಯ ಕಾರ್ಯದರ್ಶಿ ಟಿ.ಎಸ್‌. ಜಯಪ್ರಕಾಶ್‌ ಸ್ವಾಗತಿಸಿದರು. ವಿಕಾಸ ಸಮಿತಿ ಅಧ್ಯಕ್ಷೆ ಡಾ. ಆರತಿ ಸುಂದರೇಶ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.