ADVERTISEMENT

ದಾವಣಗೆರೆ| ಸಿಗದ ಪುನರ್ವಸತಿ: ಮತ್ತೆ ಮಲ ಹೊರುವ ಕಾಯಕ

ನಿಷೇಧ ನೆಪ ಮಾತ್ರ, ನಡೆಯದ ಸಮೀಕ್ಷೆ, ಕಾಯ್ದೆ ಬಗ್ಗೆ ಅರಿವಿರದ ಅಧಿಕಾರಿಗಳು

ಚಂದ್ರಶೇಖರ ಆರ್‌.
Published 8 ಫೆಬ್ರುವರಿ 2020, 10:00 IST
Last Updated 8 ಫೆಬ್ರುವರಿ 2020, 10:00 IST
ಸುರೇಶ್‌, ನಿಟುವಳ್ಳಿ
ಸುರೇಶ್‌, ನಿಟುವಳ್ಳಿ   

ದಾವಣಗೆರೆ: ಮ್ಯಾನುಯಲ್‌ ಸ್ಕ್ಯಾವೆಂಜರ್ಸ್‌ ಬಳಕೆಗೆ ನಿಷೇಧ ಇದ್ದರೂ ಹಲವೆಡೆ ಈಗಲೂ ಕೈಯಿಂದ ಮಲ ಬಾಚುವ ಕಾಯಕದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ. ಈ ಕೆಲಸ ಮಾಡುವವರಿಗೆ ಪುನರ್ವಸತಿ ಒದಗಿಸಿ, ಪರ್ಯಾಯ ಉದ್ಯೋಗ ಕಲ್ಪಿಸಬೇಕೆಂಬ ಬೇಡಿಕೆ ಮರೀಚಿಕೆಯಾಗಿದೆ.

ರಾಜ್ಯದಲ್ಲಿ 2008ರಿಂದ 2019ರವರೆಗೆ 81 ಮಂದಿ ಜನರ ಮಲ ಹೊರುವ ಕೆಲಸ ಮಾಡುತ್ತಿದ್ದವರು ಮೃತಪಟ್ಟಿದ್ದಾರೆ.

ಸರ್ಕಾರಿ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 2,521 ಮ್ಯಾನುಯಲ್‌ ಸ್ಕ್ಯಾವೆಂಜರ್ಸ್‌ ಇದ್ದಾರೆ. ಆದರೆ ಕೆಲ ಜಿಲ್ಲೆಗಳಲ್ಲಿ ಸಮರ್ಪಕ ಸಮೀಕ್ಷೆ ನಡೆದಿಲ್ಲ. 25 ಸಾವಿರಕ್ಕೂ ಜಾಸ್ತಿ ಇದ್ದಾರೆ ಎನ್ನುತ್ತದೆ ಸಫಾಯಿ ಕರ್ಮಚಾರಿ ಕಾವಲು ಸಮಿತಿ.ದಾವಣಗೆರೆ ಜಿಲ್ಲೆಯೊಂದರಲ್ಲೇ 454 (ಇತ್ತೀಚಿನ ಸಮೀಕ್ಷೆ ಪ್ರಕಾರ) ಜನರು ಇದ್ದಾರೆ. ಆದರೆ ಇವರ ಪಟ್ಟಿ ಸರ್ಕಾರದ ಅಂಕಿ ಅಂಶದಲ್ಲಿಲ್ಲ.

ADVERTISEMENT

ಸಫಾಯಿ ಕರ್ಮಚಾರಿಗಳ ಕುರಿತ ಕಾಯ್ದೆಯ ಬಗ್ಗೆ ಅಧಿಕಾರಿಗಳಿಗೇ ಅರಿವು ಇಲ್ಲ. 1993ರ ಕಾಯ್ದೆ ಬಗ್ಗೆ ಮಾತನಾಡುವ ಅಧಿಕಾರಿಗಳಿಗೆ 2013ರ ಹೊಸ ಕಾಯ್ದೆಯ ಅರಿವಿಲ್ಲ. (ಈ ಕೆಲಸ ಮಾಡುವವರಿಗೆ ಪುನರ್ವಸತಿ ಕಲ್ಪಿಸಿ, ಪರ್ಯಾಯ ಉದ್ಯೋಗ ಕಲ್ಪಿಸಬೇಕು ಎಂದು ಹೊಸ ಕಾಯ್ದೆ ಹೇಳುತ್ತದೆ.)

‘ಏನು ಮಾಡುವುದು ಸ್ವಾಮಿ ಬೇರೆ ಉದ್ಯೋಗ ಸಿಗುತ್ತಿಲ್ಲ. ಸಿಕ್ಕರೂ ಒಳಚರಂಡಿ ಕೆಲಸ ಮಾತ್ರ. 25 ವರ್ಷಗಳಿಂದ ಇದೇ ಕಾಯಕ’ ಎನ್ನುತ್ತಾರೆ ನಿಟುವಳ್ಳಿಯ ಹನುಮಂತಪ್ಪ, ನಾಗಪ್ಪ, ಮಂಜುನಾಥ್, ಶಿವು, ಪರಶುರಾಂ.

‘ಮ್ಯಾನುಯಲ್‌ ಸ್ಕ್ಯಾವೆಂಜರ್ಸ್‌ ಪತ್ನಿಯರು ಅವರನ್ನು ಹತ್ತಿರ ಸೇರಿಸುತ್ತಿಲ್ಲ. ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ಕೆಲವರು ಚರ್ಮರೋಗ ಸೇರಿ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ’ ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಜಿಲ್ಲಾ ಸಂಚಾಲಕ ಡಿ.ಎಸ್‌. ಬಾಬಣ್ಣ ವಾಸ್ತವ ತೆರೆದಿಟ್ಟರು.

ಕೆಲ ಜಿಲ್ಲೆಗಳಲ್ಲಿ ಇಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಪ್ರತಿ ಜಿಲ್ಲೆಯಲ್ಲೂ ಮಲ ಹೊರುವವರು ಸಿಕ್ಕಿದ್ದಾರೆ ಎನ್ನುತ್ತಾರೆ ಸಫಾಯಿ ಕರ್ಮಚಾರಿಗಳ ಹಕ್ಕಿಗಾಗಿ ಹೋರಾಡುತ್ತಿರುವ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ್.

ರಾಜ್ಯದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ₹120 ಕೋಟಿ ಅನುದಾನ ಬಂದಿದ್ದು, ಅದರ ಬಳಕೆ ಆಗಿಲ್ಲ. ನಿಗಮ ಹಾಗೂ ಆಯೋಗಕ್ಕೆ ಅಧ್ಯಕ್ಷರೇ ಇಲ್ಲ ಎಂದು ದೂರುತ್ತಾರೆ ಅವರು.

ಒಳಚರಂಡಿ ಇಲ್ಲದ ನಗರಗಳು, ಗ್ರಾಮೀಣ ಪ್ರದೇಶದಲ್ಲಿ ಪಿಟ್‌ಗುಂಡಿ ಇದೆ ಎಂದರೆ ಅಲ್ಲಿ ಮ್ಯಾನುಯಲ್‌ ಸ್ಕ್ಯಾವೆಂಜರ್ಸ್‌ ಇದ್ದಾರೆ ಎಂದರ್ಥ. ಆದರೆ ಅಧಿಕಾರಿಗಳು ಹೇಳುವುದೇ ಬೇರೆ ಎನ್ನುತ್ತಾರೆ ಸಫಾಯಿ ಕರ್ಮಚಾರಿ ಕಾವಲು ಸಮಿತಿಯರಾಜ್ಯ ಸಂಚಾಲಕ ಕೆ.ಬಿ. ಓಬಳೇಶ್.

ರಾಜ್ಯದಲ್ಲಿರುವ ಮ್ಯಾನುಯಲ್‌ಸ್ಕ್ಯಾವೆಂಜರ್ಸ್‌ (ಗುರುತಿಸಲಾಗಿರುವುದು. ಉಳಿದ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿಲ್ಲ)

ಜಿಲ್ಲೆ ಎಷ್ಟು ಜನ

ಬೀದರ್‌ 2

ಕಲಬುರ್ಗಿ 52

ಯಾದಗಿರಿ 19

ರಾಯಚೂರು 44

ಕೊಪ್ಪಳ 2

ಧಾರವಾಡ 59

ಹಾವೇರಿ 8

ಬಳ್ಳಾರಿ 10

ಶಿವಮೊಗ್ಗ 24

ಉಡುಪಿ 3

ಮೈಸೂರು 1226

ಮಂಡ್ಯ 42

ಬೆಂಗಳೂರು ನಗರ 344

ಬೆಂಗಳೂರು ಗ್ರಾಮಾಂತರ 110

ಕೋಲಾರ 531

ಚಿಕ್ಕಬಳ್ಳಾಪುರ 15

ಒಟ್ಟು 2,521

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.