ADVERTISEMENT

ಬಡವರಿಗೆ ಮಿಡಿಯುವ ಹಲವು ಹೃದಯಗಳು

ಆಹಾರ, ಇತರ ಸಾಮಾಗ್ರಿ ಒದಗಿಸಲು ಮುಂದಾಗುತ್ತಿರುವ ಜನ

ಬಾಲಕೃಷ್ಣ ಪಿ.ಎಚ್‌
Published 31 ಮಾರ್ಚ್ 2020, 20:00 IST
Last Updated 31 ಮಾರ್ಚ್ 2020, 20:00 IST
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಮತ್ತು ಅವರ ಸಂಬಂಧಿಕರು ಮದ್ಯಾಹ್ನದ ಊಟ ಹಾಗೂ ನೀರಿಗಾಗಿ ದಾನಿಗಳು ನೀಡುತ್ತಿರುವ ಆಹಾರಕ್ಕಾಗಿ ಕೈಚಾಚಿರುವುದು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಮತ್ತು ಅವರ ಸಂಬಂಧಿಕರು ಮದ್ಯಾಹ್ನದ ಊಟ ಹಾಗೂ ನೀರಿಗಾಗಿ ದಾನಿಗಳು ನೀಡುತ್ತಿರುವ ಆಹಾರಕ್ಕಾಗಿ ಕೈಚಾಚಿರುವುದು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ದಿಂದ ದಿಕ್ಕಾಪಾಲಾದ ಬಡವರ ನೆರವಿಗೆ ಸಹೃದಯರು ಕೈಚಾಚಿದ್ದಾರೆ. ಊಟ, ಉಪಾಹಾರ, ಪಡಿತರಗಳನ್ನು ಒದಗಿಸುತ್ತಿದ್ದಾರೆ.

ಶಾಮನೂರಿನ ನಂದಕುಮಾರ್‌ ಮತ್ತು ಗೆಳೆಯರ ತಂಡ ನಿರ್ಗತಿಕರನ್ನು ಹುಡುಕಿಕೊಂಡು ಹೋಗಿ ಆಹಾರ ವಿತರಿಸುತ್ತಿದ್ದಾರೆ. ನಗರದ ಹಳೇ ಕುಂದವಾಡ ಯುವಕರು ಮಧು ನೇತೃತ್ವದಲ್ಲಿ ಜಿಲ್ಲಾಸ್ಪತ್ರೆ ರೋಗಿಗಳಿಗೆ, ಆಸ್ಪತ್ರೆ ಸಿಬ್ಬಂದಿಗೆ ಆಸ್ಪತ್ರೆಯ ಆವರಣದ ಬೇಲಿಯ ನಡುವೆಯೇ ಆಹಾರ ವಿತರಿಸುತ್ತಿರುವುದು ಮಾನವೀಯತೆಗೆ ಸಾಕ್ಷಿಯಾಗಿದ್ದವು.

ನಾವು ಭಾರತೀಯರು ತಂಡವು ಜಬೀನಾಖಾನಂ ನೇತೃತ್ವದಲ್ಲಿ ಒಂಟಿ ಮಹಿಳೆಯರು ಇರುವ ಮನೆಗಳನ್ನು ಹುಡುಕಿಕೊಂಡು ಹೋಗಿ ಆಹಾರದ ಜತೆಗೆ ಆಹಾರ ಸಾಮಗ್ರಿಗಳನ್ನೂ ನೀಡಿದ್ದಾರೆ. ಜತೆಗೆ ನಿರ್ಗತಿಕರಿಗೂ ವಿತರಿಸಿದ್ದಾರೆ.

ADVERTISEMENT

ಜೈನ್‌ ಸಮಾಜ, ಜೈನ್‌ ಫ್ರೆಂಡ್ಸ್‌ ಗ್ರೂಪ್‌ ಮುಂತಾದವರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಆಹಾರ 1000 ಆಹಾರದ ಕಿಟ್‌ಗಳನ್ನು ನೀಡಿದ್ದಾರೆ. ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್‌, ಸದಸ್ಯ ಎಸ್‌.ಟಿ. ವೀರೇಶ್‌ ಸಹಿತ ಹಲವು ರಾಜಕಾರಣಿಗಳು, ಸಂಘ ಸಂಸ್ಥೆಗಳ ಸದಸ್ಯರು, ಸಮಾಜ ಸೇವಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಪೊಲೀಸರಿಗೇ ನೆರವು: ಬಹುತೇಕ ಕಡೆಗಳಲ್ಲಿ ಆಹಾರದ ಪೊಟ್ಟಣ, ಸ್ಯಾನಿಟೈಜರ್‌ಗಳನ್ನು ಬಂದೋಬಸ್ತಿನಲ್ಲಿ ನಿರತರಾಗಿರುವ ಪೊಲೀಸರಿಗೆ, ಗೃಹರಕ್ಷಕ ದಳದ ಸಿಬ್ಬಂದಿಗೆ ನೀಡುತ್ತಿದ್ದಾರೆ. ಲಾಠಿ ಹಿಡಿದು ಯುವಕರನ್ನು ಬೆನ್ನು ಹತ್ತುವ, ಅವರನ್ನು ಮನೆಯೊಳಗೆ ಇರುವಂತೆ ಬಿಸಿ ಮುಟ್ಟಿಸುವ ಪೊಲೀಸರೇ ರಸ್ತೆ ಬದಿಯಲ್ಲಿ ಊಟವಿಲ್ಲದೇ ಕುಳಿತಿರುವ ಹಿರಿಯರಿಗೆ ಊಟ ನೀಡುವ ಮೂಲಕ ಖಾಕಿಯೊಳಗೆ ಮನುಷ್ಯತ್ವ ಇದೆ ಎಂದು ತೋರಿಸಿದ್ದಾರೆ.

‘ಸ್ಫೂರ್ತಿ ಸೇವಾ ಟ್ರಸ್ಟ್‌ನಿಂದ ಪ್ರತಿದಿನ ಸಾವಿರ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದೇವೆ. ಪಾಲಿಕೆ ವ್ಯಾಪ್ತಿಯ 22 ವಾರ್ಡ್‌ಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ ಈ ಆಹಾರ ತಲುಪುತ್ತಿದೆ. ಪೌರ ಕಾರ್ಮಿಕರ ಸಹಾಯ ಪಡೆದು ತಲುಪಿಸುತ್ತಿದ್ದೇವೆ. ಅಷ್ಟೇ ಅಲ್ಲದೇ ಸಿ.ಜಿ. ಆಸ್ಪತ್ರೆಯಲ್ಲಿ ರೋಗಿಗಳ ಜತೆಗೆ ಇರುವ ಸಂಬಂಧಿಕರಿಗೆ ಆಹಾರ ಒದಗಿಸುವ ಕಾರ್ಯ ಕೂಡ ಮಾಡುತ್ತಿದ್ದೇವೆ’ ಎಂದು ಎಂಸಿಸಿ ಎ ಬ್ಲಾಕ್‌ನಲ್ಲಿರುವ ಸ್ಫೂರ್ತಿ ಸೇವಾ ಟ್ರಸ್ಟ್‌ನ ಸತ್ಯನಾರಾಯಣ ಮೂರ್ತಿ ‘ಪ್ರಜಾವಾಣಿ’ಗೆ ಅನ್ನದ ಸೇವೆಯನ್ನು ವಿವರಿಸಿದರು.

ಹಲವು ರೈತರು ತಾವು ಬೆಳೆದ ಅಕ್ಕಿ, ದವಸ, ಧಾನ್ಯಗಳನ್ನು ನೇರವಾಗಿ ಜಿಲ್ಲಾಡಳಿತಕ್ಕೆ ನೀಡಿ ಬಡವರಿಗೆ ತಲುಪಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ಭೀತಿಯಲ್ಲಿ ಹಸಿವಿನಿಂದ ಕಂಗೆಡದಿರಲಿ ಎಂದು ಜಿಲ್ಲೆಯಲ್ಲಿ ಹಲವರು ನೆರವಿನ ಹಸ್ತ ಚಾಚಿ ಮಾದರಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.