ADVERTISEMENT

‘ಪ್ರಜಾವಾಣಿ’ ಫೋನ್‌–ಇನ್ ಕಾರ್ಯಕ್ರಮ: ತೋಟಗಾರಿಕೆ ಬೆಳೆಗಳಿಗೆ ಹಲವು ಸಹಾಯಧನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:32 IST
Last Updated 27 ಜುಲೈ 2021, 4:32 IST
ಲಕ್ಷ್ಮಿಕಾಂತ ಬೊಮ್ಮಣ್ಣರ
ಲಕ್ಷ್ಮಿಕಾಂತ ಬೊಮ್ಮಣ್ಣರ   

ದಾವಣಗೆರೆ: ತೋಟಗಾರಿಕೆ ಬೆಳೆಗಳನ್ನು ವಿಸ್ತರಿಸಿಕೊಳ್ಳಲು ರೈತರಿಗೆ ಹಲವು ಸಹಾಯಧನ ನೀಡಲಾಗುತ್ತಿದೆ. ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮಿಕಾಂತ ಬೊಮ್ಮಣ್ಣರ ತಿಳಿಸಿದ್ದಾರೆ.

‘ಪ್ರಜಾವಾಣಿ’ ಫೋನ್‌–ಇನ್ ಕಾರ್ಯಕ್ರಮದಲ್ಲಿ ಇಲಾಖೆಯ ಯೋಜನೆಗಳನ್ನು ವಿವರಿಸಿದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಅಡಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳು ಮಾತ್ರ ಈ ವ್ಯಾಪ್ತಿಯಲ್ಲಿವೆ. ಈ ಎರಡೂ ತಾಲ್ಲೂಕುಗಳ ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿಯುವ ಯಂತ್ರ, ಸಿಂಪಡಣೆ ಯಂತ್ರ, ಡ್ರಿಗ್ಗರ್‌ಗಳನ್ನು ಸಹಾಯಧನದಲ್ಲಿ ಒದಗಿಸಲಾಗುತ್ತದೆ. ಎಕರೆಗೆ ₹ 1 ಲಕ್ಷವರೆಗೆ ಸಹಾಯಧನ ದೊರೆಯಲಿದೆ ಎಂದು ಹೇಳಿದರು.

ADVERTISEMENT

ಈ ಬಾರಿಯ ಮಳೆಯಿಂದ ನಷ್ಟ ಅಷ್ಟಾಗಿ ಉಂಟಾಗಿಲ್ಲ. ಈಗ ಬಿಸಿಲು ಬಂದಿದೆ. ಎರಡು ದಿನಗಳಲ್ಲಿ ನೀರು ಒಣಗಲಿದೆ. ಹಾಗಾಗಿ ದೊಡ್ಡಮಟ್ಟದ ತೊಂದರೆ ಉಂಟಾಗಿಲ್ಲ. ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾತ್ರ ಹಾಳಾಗಿದೆ. ಜಗಳೂರು ತಾಲ್ಲೂಕಿನಲ್ಲಿ 850 ಹೆಕ್ಟೇರ್‌ ಈರುಳ್ಳಿ ಹಾಗೂ ಹರಿಹರ ತಾಲ್ಲೂಕಿನಲ್ಲಿ 30 ಹೆಕ್ಟೇರ್ ಈರುಳ್ಳಿ, 30 ಹೆಕ್ಟೇರ್‌ ಬೆಳ್ಳುಳ್ಳಿ ಹಾಳಾಗಿದೆ. ಹೊನ್ನಾಳಿಯಲ್ಲಿ ತರಕಾರಿ ಹಾಳಾಗಿದೆ. ಉಳಿದಂತೆ ಸಮಸ್ಯೆಯಾಗಿಲ್ಲ ಎಂದು ವಿವರಿಸಿದರು.

ನಷ್ಟ ಪರಿಹಾರ ನೀಡಬೇಕಿದ್ದರೆ ಕನಿಷ್ಠ ಶೇ 30ರಷ್ಟು ಹಾನಿ ಆಗಿರಬೇಕು. ಅವರಿಗೆ ಹೆಕ್ಟೇರ್‌ಗೆ ₹ 18 ಸಾವಿರ ಪರಿಹಾರ ಸಿಗುತ್ತದೆ. ಬಾಳೆ, ಪಪ್ಪಾಯ, ಹೂವು ಮುಂತಾದ ಬಹುವಾರ್ಷಿಕ ಬೆಳೆಗಳಿಗೆ ₹ 13,500 ಪರಿಹಾರ ನೀಡಲಾಗುತ್ತದೆ. ತರಕಾರಿ ನಷ್ಟಕ್ಕೆ ಹೆಕ್ಟೇರ್‌ಗೆ ₹ 6,800 ಪರಿಹಾರ ಸಿಗಲಿದೆ ಎಂದು ಮಾಹಿತಿ ನೀಡಿದರು.

ವಾತಾವರಣ ಬದಲಾದಾಗ ಅಡಿಕೆ ಬೀಳುವುದು ಸಹಿತ ಕೆಲವು ಸಮಸ್ಯೆಗಳು ಉಂಟಾಗುತ್ತವೆ. ಅವರು ಬೆಳೆ ವಿಮೆಯಲ್ಲಿ ಪರಿಹಾರ ಪಡೆಯಲು ಅವಕಾಶ ಇದೆ ಎಂದು ಹೇಳಿದರು.

ಚನ್ನಗಿರಿ, ಹೊನ್ನಾಳಿ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಅಡಿಕೆಗೆ ಪ್ರೋತ್ಸಾಹ ನೀಡುತ್ತಿಲ್ಲ. ಆದರೂ ದಾವಣಗೆರೆ ಸಹಿತ ಎಲ್ಲ ತಾಲ್ಲೂಕುಗಳಲ್ಲಿ ಅಡಿಕೆ ಬೆಳೆ ಕಡೆ ರೈತರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದರು.

ಕಾಳುಮೆಣಸು, ತೆಂಗು, ಮಾವು, ನಿಂಬೆ ಜಾತಿಯ ಹಣ್ಣುಗಳು, ಸೀಬೆ, ಹಲಸು, ನೇರಳೆ, ಸೀತಾಫಲ, ಅಂಜೂರ, ಡ್ರ್ಯಾಗನ್‌ ಫ್ರೂಟ್‌ ಸಹಿತ ವಿವಿಧ ಹಣ್ಣುಗಳು, ಮಲ್ಲಿಗೆ, ಗುಲಾಬಿ ಮುಂತಾದ ಹೂವು, ನುಗ್ಗೆ, ಕರಿಬೇವು, ಹುಣಸೆ ಸಹಿತ ವಿವಿಧ ಬೆಳೆಗಳನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಯೋಜನೆಗಳು
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ಜಿಲ್ಲೆಗೆ ₹ 28 ಕೋಟಿ ನಿಗದಿ ಮಾಡಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳು ಬರಲಿವೆ. ಎನ್‌ಎಚ್‌ಎಂ ಯೋಜನೆಯಡಿ ಜಿಲ್ಲೆಗೆ ₹ 20 ಕೋಟಿ ಅನುದಾನ ಕೇಳಲಾಗಿತ್ತು. ₹ 5.25 ಕೋಟಿ ಅನುದಾನ ಬಂದಿದೆ. ಸಂಸ್ಕರಣ ಘಟಕ, ಪ್ಯಾಕ್‌ಹೌಸ್‌, ಈರುಳ್ಳಿ ಶೀತಲೀಕರಣ ಘಟಕ ಸಹಿತ ಅನೇಕ ಯೋಜನೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಎಸ್‌ಸಿ–ಎಸ್‌ಟಿ ಸಮುದಾಯಕ್ಕೆ ಘಟಕ ನಿರ್ಮಾಣಕ್ಕೆ ₹ 1 ಲಕ್ಷ ಹಾಗೂ ಸಾಮಾನ್ಯ ವರ್ಗದವರಿಗೆ ₹ 75 ಸಾವಿರ ಸಹಾಯಧನ ನೀಡಲಾಗುವುದು. ಇದಲ್ಲದೇ ಮ್ಯಾಚಿಂಗ್ ಗ್ರಾಂಟ್‌ ಬಂದರೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ₹ 1.57 ಲಕ್ಷ ಸಹಾಯಧನ ಹೆಚ್ಚುವರಿಯಾಗಿ ಸಿಗಲಿದೆ ಎಂದು ಲಕ್ಷ್ಮಿಕಾಂತ ಬೊಮ್ಮಣ್ಣರ ತಿಳಿಸಿದರು.

ಬಹುವಾರ್ಷಿಕ ಬೆಳೆಗೆ ಸಿಗಲಿದೆ ನರೇಗಾ ಸಹಾಯಧನ

ಉದ್ಯೋಗ ಖಾತ್ರಿ ಯೋಜನೆಯನ್ನು ತೋಟಗಾರಿಕೆ ಬೆಳೆಗೆ ಯಾವ ರೀತಿ ಬಳಸಿಕೊಳ್ಳಬಹುದು?
– ಮರುಳಸಿದ್ದಪ್ಪ, ಕುರ್ಕಿ

‌ಲಕ್ಷ್ಮಿಕಾಂತ ಬೊಮ್ಮಣ್ಣರ: ಬಹುವಾರ್ಷಿಕ ಬೆಳೆಗಳಾದ ಹಣ್ಣು, ತರಕಾರಿ ಬೆಳೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಳ್ಳಬಹುದು. ಜಾಬ್‌ ಕಾರ್ಡ್‌ ಹೋಲ್ಡರ್ ಆಗಿರಬೇಕು. ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕಿಗಳಲ್ಲಿ ಮಾತ್ರ ಅಡಿಕೆ ಬೆಳೆ ವಿಸ್ತರಣೆಗೆ ಉದ್ಯೋಗ ಖಾತ್ರಿಯಡಿ ನೆರವು ಪಡೆಯಲು ಅವಕಾಶವಿದೆ.

* ತೋಟದ ಮನೆ ನಿರ್ಮಿಸಿಕೊಳ್ಳಲು ಅನುದಾನ ಸಿಗುತ್ತದೆಯೇ?
– ಶಿವಕುಮಾರ್, ಕೊಡಗನೂರು, ದಾವಣಗೆರೆ ತಾಲ್ಲೂಕು

ಲಕ್ಷ್ಮಿಕಾಂತ ಬೊಮ್ಮಣ್ಣರ: ಅಡಿಕೆ ಸಂಸ್ಕರಣಾ ಘಟಕ ನಿರ್ಮಿಸಲು ₹ 20 ಲಕ್ಷದಷ್ಟು ಅನುದಾನ ಸಿಗಲಿದ್ದು, ಶೇ 40ರಷ್ಟು ಸಬ್ಸಿಡಿ ಸಿಗುತ್ತದೆ. ಪರಿಕರಗಳ ಖರೀದಿಗೆ ಶೇ 40 ಹಾಗೂ ಕಟ್ಟಡ ನಿರ್ಮಾಣಕ್ಕೆ ಶೇ 40ರಷ್ಟು ಖರ್ಚಾಗಬೇಕು. ಪ್ಯಾಕ್ ಹೌಸ್ ನಿರ್ಮಿಸಲು ಬಯಸಿದ್ದರೆ ಅರ್ಜಿ ಕೊಡಿ.

* ಅಡಿಕೆ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ಯಾವ ಸೌಲಭ್ಯ ದೊರೆಯುತ್ತದೆ?
– ರೇಣುಕಪ್ಪ ಹಲಗಿನವಾಡ, ಹರಪನಹಳ್ಳಿ

ಲಕ್ಷ್ಮಿಕಾಂತ ಬೊಮ್ಮಣ್ಣರ: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯೊಳಗೆ ನಿಮ್ಮ ತಾಲ್ಲೂಕು ಸೇರಿದ್ದರೆ ಅಡಿಕೆ ಬೆಳೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ನೆರವು ಪಡೆಯಲು ಅವಕಾಶವಿದೆ.

* ಪೇರಲ ಹಣ್ಣಿಗೆ ಮೋಹಕ ಬಲೆ ನಿರ್ವಹಣೆ ಹೇಗೆ?
ಮುರುಗೇಶಪ್ಪ, ಹೆದ್ನೆ

ಲಕ್ಷ್ಮಿಕಾಂತ ಬೊಮ್ಮಣ್ಣರ: ಮೋಹಕ ಬಲೆಯು ಬಳಸಿದ ನಂತರ ಒಂದು ವಾರದ ಬಳಿಕ ಮತ್ತೆ ಬದಲಾಯಿಸಬೇಕು. ನೂಲನ್ನು ನೀವೆ ಬದಲಾಯಿಸಿ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.