ADVERTISEMENT

ಮಳೆಗಾಗಿ ನಗರದೇವತೆಯ ಮುಂದೆ ಸಂತೆ

ಭರ್ಜರಿ ವ್ಯಾಪಾರ ನಡೆಸಿದ ಒಂದೂವರೆ ಸಾವಿರಕ್ಕೂ ಅಧಿಕ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 11:39 IST
Last Updated 8 ಜುಲೈ 2018, 11:39 IST
ದಾವಣಗೆರೆ ನಗರದೇವತೆ ದುರ್ಗಾಂಬಿಕೆ ದೇವಸ್ಥಾನದ ಆವರಣದ ಸುತ್ತಮುತ್ತ ಭಾನುವಾರ ಸಂತೆ ಭರ್ಜರಿಯಾಗಿ ನಡೆಯಿತು
ದಾವಣಗೆರೆ ನಗರದೇವತೆ ದುರ್ಗಾಂಬಿಕೆ ದೇವಸ್ಥಾನದ ಆವರಣದ ಸುತ್ತಮುತ್ತ ಭಾನುವಾರ ಸಂತೆ ಭರ್ಜರಿಯಾಗಿ ನಡೆಯಿತು   

ದಾವಣಗೆರೆ: ನಗರದೇವತೆ ದುರ್ಗಾಂಬಿಕೆಯನ್ನು ಪ್ರಾರ್ಥನೆ ಮಾಡಿ ಐದು ಸಂತೆ ನಡೆಸಿದರೆ ಜಿಲ್ಲೆಯಲ್ಲಿ ಮಳೆ ಬೆಳೆ ಚೆನ್ನಾಗಾಗುತ್ತದೆ ಎಂಬ ನಂಬಿಕೆಯಿಂದ ಈ ಬಾರಿ ಮೊದಲ ಸಂತೆ ಭಾನುವಾರ ನಡೆಯಿತು. ಭರ್ಜರಿ ವ್ಯಾಪಾರ ವಹಿವಾಟುಗಳು ನಡೆದವು. ಮುಂದಿನ ನಾಲ್ಕು ಭಾನುವಾರ ನಾಲ್ಕು ಸಂತೆ ನಡೆಯಲಿದೆ.

ಮುಂಗಾರು ಆರಂಭದಲ್ಲಿ ಮಳೆಯಾಗಿತ್ತು. ಜನ ಕೃಷಿ ಚಟುವಟಿಕೆ ಆರಂಭಿಸಿ ಉತ್ತು ಬಿತ್ತಿದ್ದರು. ಈಗ ಮೊಳಕೆ ಬಂದು ಸಸಿ ಬೆಳೆಯುವ ಸಮಯದಲ್ಲಿ ಮಳೆ ಕೈಕೊಟ್ಟಿರುವುದರಿಂದ ಒಣಗಿ ಹೋಗುವ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಈ ಬಾರಿಯೂ ಸಂತೆ ಹಮ್ಮಿಕೊಳ್ಳಲಾಗಿದೆ ಎಂದು ದುರ್ಗಾಂಬಿಕೆ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

1934ರಲ್ಲಿ ದುರ್ಗಮ್ಮನ ಮಂದಿರ ನಿರ್ಮಿಸಿದ ಬಳಿಕ ತೀವ್ರ ಬರಗಾಲ ಬಂದಿತ್ತು. ಆಗ ಹಿರಿಯರೆಲ್ಲ ಸೇರಿ ಐದು ವಾರಗಳ ಕಾಲ ‘ಭಾನುವಾರ ಸಂತೆ’ ನಡೆಸಿಕೊಡುವ ಹರಕೆ ಹೊತ್ತುಕೊಂಡರು. ಸಂತೆ ನಡೆಸಿದ ಬಳಿಕ ಮಳೆ ಉತ್ತಮವಾಗಿ ಬಂತು. ಅಂದಿನಿಂದ ಇದುವರೆಗೂ ಮಳೆಯಾಗದಿದ್ದಾಗ ‘ಭಾನುವಾರ ಸಂತೆ’ ನಡೆಸಲಾಗುತ್ತಿದೆ. ಅಂದಿನಿಂದ ಇಲ್ಲಿವರೆಗೆ ನಾಲ್ಕೈದು ವರ್ಷವಷ್ಟೇ ಸಂತೆ ನಡೆದಿಲ್ಲ. ಉಳಿದ ಎಲ್ಲ ವರ್ಷಗಳಲ್ಲಿ ಸಂತೆ ನಡೆದಿದೆ ಎಂದು ಅವರು ನೆನಪಿಸಿಕೊಂಡರು.

ADVERTISEMENT

ಮೇಯರ್‌ ಶೋಭಾ ಪಲ್ಲಾಗಟ್ಟೆ ದುರ್ಗಾಂಬಿಕೆಗೆ ಪ್ರಾರ್ಥನೆ ಸಲ್ಲಿಸಿ ಸಂತೆಗೆ ಚಾಲನೆ ನೀಡಿದರು. ಬೆಳಿಗ್ಗೆ 6 ಗಂಟೆಗೂ ಮೊದಲೇ ಹಳ್ಳಿಗಳಿಂದ ಬಂದಿದ್ದ ರೈತರು ದುಗ್ಗಮ್ಮ ದೇವಸ್ಥಾನದಿಂದ ದೊಡ್ಡಪೇಟೆ ಗಣೇಶ ದೇವಸ್ಥಾನದ ವರೆಗಿನ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ರಸ್ತೆ (ಎಸ್‌ಕೆಪಿ ರಸ್ತೆ), ಮಕಾನ್‌ ರಸ್ತೆ, ಹಳೇಪೇಟೆ ದುಗ್ಗಮ್ಮನ ದೇವಸ್ಥಾನ, ಬೀರಲಿಂಗೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ನಿಮಿಷಾಂಬಾ, ಮಾರ್ಕಾಂಡೇಶ್ವರ, ವೀರಭದ್ರೇಶ್ವರ, ಅಂಜನೇಯ ದೇವಸ್ಥಾನಗಳ ಸುತ್ತಮುತ್ತಲ ರಸ್ತೆ, ಪ್ರಸಾದ ನಿಲಯದ ಮುಂದೆ, ಶಿವಾಜಿ ವೃತ್ತ ಹೀಗೆ ವಿವಿಧ ಕಡೆಗಳಲ್ಲಿ ವ್ಯಾಪಾರ ನಡೆಸಿದರು.

ಉಪಮೇಯರ್‌ ಚಮ್ಮನ್‌ ಸಾಬ್‌, ಪಾಲಿಕೆ ಆಯುಕ್ತ ಮಂಜುನಾಥ ಭಂಡಾರಿ, ಪಾಲಿಕೆ ಸದಸ್ಯೆ ಅನಿತಾಬಾಯಿ ಮಾಲ್ತೇಶ್‌, ಧರ್ಮದರ್ಶಿ ಸಮಿತಿಯ ಗೌಡ್ರ ಚನ್ನಬಸಪ್ಪ, ಎಚ್‌.ಬಿ. ಗೋಣಿಯಪ್ಪ, ಸಾವಂತ ಹನುಮಂತಪ್ಪ, ಹನುಮಂತರಾವ್‌ ಜಾಧವ್‌, ಗುರುರಾಜ ಸೊಪ್ಪಿನವರ್‌ ಅವರೂ ಭಾಗವಹಿಸಿದ್ದರು.

ಇಲ್ಲಿ ಸಂತೆ ನಡೆದ ಎರಡು ಅಥವಾ ಮೂರನೇ ವಾರಕ್ಕೆ ಪ್ರತಿಸಾರಿ ಮಳೆಯಾಗಿದೆ ಎಂದು ಗುಡ್ಡಣ್ಣನವರ ಶಿವಶಂಕರಪ್ಪ ದೇವಿಯ ಮಹಿಮೆ ವಿವರಿಸಿದರು. ‘ಅಮ್ಮ’ನಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮಾಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂತೆಗೆ ಚಾಲನೆ ನೀಡಲಾಯಿತು ಎಂದು ದೇವಸ್ಥಾನದ ಕಾರ್ಯರ್ತ ಬಾಬು ಮಾಹಿತಿ ನೀಡಿದರು.

‘ನಾನು 30 ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಆಷಾಢದಲ್ಲಿ ಈ ರೀತಿ ಪ್ರಾರ್ಥನೆಯ ಸಂತೆ ಹಾಕಲಾಗುತ್ತದೆ. ನಮ್ಮಲ್ಲಿ ಸತ್ಯ ಇದ್ದರೆ ಒಳ್ಳೆಯದಾಗುತ್ತದೆ. ಕೆಟ್ಟಬುದ್ಧಿ ಇದ್ದರೆ ಕೆಟ್ಟದಾಗುತ್ತದೆ. ಇಷ್ಟು ವರ್ಷ ಈ ರೀತಿ ಸಂತೆ ಮಾಡಿದಾಗ ಮಳೆಯಾಗಿದೆ’ ಎಂದು ಲಾಲ್‌ಬಂದ್‌ ಬೀದಿಯ ಭಾಗ್ಯಮ್ಮ ಅನುಭವ ಬಿಚ್ಚಿಟ್ಟರು.

‘ಮಳೆ ಮಾತ್ರ ಅಲ್ಲ, ಇಲ್ಲಿ ವ್ಯಾಪಾರ ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ. ದುರ್ಗಾಂಬಿಕೆ ಎಂದೂ ಕೈಬಿಡುವುದಿಲ್ಲ’ ಎಂದು ತನ್ನ ವ್ಯಾಪಾರದ ನಡುವೆಯೇ ಪಾರ್ವತಮ್ಮ ತಿಳಿಸಿದರು. ಅವರು 18 ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ‘ನಾನೇ ಬೆಳೆದ ತರ್ಕಾರಿಗಳನ್ನು ಇಲ್ಲಿ ತಂದು ಮಾರುತ್ತೇನೆ. ಐದು ಭಾನುವಾರ ನಡೆಯುವ ಈ ಸಂತೆಯನ್ನು ಕಳೆದ 40 ವರ್ಷಗಳಲ್ಲಿ ಸಂತೆ ನಡೆದಾಗಲೆಲ್ಲ ತಪ್ಪಿಸಿಕೊಂಡಿಲ್ಲ’ ಎಂದು ಮಾಯಕೊಂಡದ ರೈತ ಕೃಷ್ಣಪ್ಪ ಹೆಮ್ಮೆಪಟ್ಟುಕೊಂಡರು. ಇಲ್ಲಿ ಸಂತೆ ನಡೆಸಿದರೆ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂದು ಆಂಜನೇಯ ಬಡಾವಣೆಯ ನೂರ್‌ಜಹನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.