ADVERTISEMENT

ಕ್ರಾಂತಿಯ ಬೀಜ ಬಿತ್ತಲು ಮತ್ತೆ ಕಲ್ಯಾಣ

ಪೂರ್ವಭಾವಿ ಸಭೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 18:33 IST
Last Updated 26 ಜೂನ್ 2019, 18:33 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಸಹಮತ ವೇದಿಕೆ ಆಯೋಜಿಸಿದ್ದ ಮತ್ತೆ ಕಲ್ಯಾಣ ಜಿಲ್ಲಾ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಸಹಮತ ವೇದಿಕೆ ಆಯೋಜಿಸಿದ್ದ ಮತ್ತೆ ಕಲ್ಯಾಣ ಜಿಲ್ಲಾ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ದಾವಣಗೆರೆ: ಧರ್ಮ, ನೀತಿ, ಸತ್ಯ, ಅಹಿಂಸೆಗಳಿಂದ ಯುವಜನಾಂಗ ಹಿಂದೆ ಸರಿಯುತ್ತಿದೆ. ಅವರಿಗೆ ಮಾರ್ಗದರ್ಶನ ಮಾಡುವ ಹೆತ್ತವರು, ಸಮಾಜ, ಗುರುಗಳ ತಪ್ಪಿನಿಂದ ಹೀಗಾಗಿದೆ. ಅವರನ್ನು ಸರಿದಾರಿಗೆ ತಂದು ಸಮಾನತೆಯ ಕ್ರಾಂತಿ ಬೀಜ ಬಿತ್ತಲು ‘ಮತ್ತೆ ಕಲ್ಯಾಣ’ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕುವೆಂಪು ಕನ್ನಡ ಭವನದಲ್ಲಿ ಬುಧವಾರ ನಡೆದ ‘ಮತ್ತೆ ಕಲ್ಯಾಣ’ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ವ್ಯಕ್ತಿ, ಸಮಾಜ ಮತ್ತು ದೇಶದ ಕಲ್ಯಾಣವೇ ಗುರಿಯಾಗಬೇಕು. ಆದರೆ, ಜಾತೀಯತೆ ತಾಂಡವವಾಡುತ್ತಿದೆ. ಲಿಂಗ ಸಮಾನತೆ ಇಲ್ಲ. ಮೌಢ್ಯವನ್ನು ಮಿತಿ ಮೀರಿ ಮಾಧ್ಯಮಗಳು ಕಲಿಸುತ್ತಿದ್ದಾವೆ. ರಾಜಕಾರಣಿಗಳು ಸರ್ಕಾರದ ಹಣದಲ್ಲಿ ಮೌಢ್ಯ ಬಿತ್ತುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

12ನೇ ಶತಮಾನದಲ್ಲಿ ಧರ್ಮ ಕರ್ಮವಾಗಿತ್ತು. ರೋಗಪೀಡಿತವಾದ ಸಮಾಜಕ್ಕೆ ಮದ್ದು ನೀಡಲು ಅನುಭವ ಮಂಟಪ ತಯಾರಾಗಿತ್ತು. ವಚನಗಳೇ ದಿವ್ಯೌಷಧವಾಗಿತ್ತು. ಅದನ್ನು ಇಂದಿನ ಪೀಳಿಗೆಗೆ ಮುಟ್ಟಿಸುವ ಪ್ರಯತ್ನವೇ ಮತ್ತೆ ಕಲ್ಯಾಣ ಆಂದೋಲನ ಎಂದು ವಿವರಿಸಿದರು.

ಸಮಾಜ ನಿಂತ ನೀರಾಗಿದೆ. ಸ್ಥಾವರಗೊಂಡಿದೆ. ಬದಲಾವಣೆಯ ಗಾಳಿ ಬೀಸುವುದು ಅನಿವಾರ್ಯವಾಗಿದೆ. ಪರಿಣಾಮಕಾರಿಯಾಗಿ ಬದಲಾವಣೆ ತರಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಆಗಸ್ಟ್‌ 1ರಂದು ತರಿಕೆರೆಯಲ್ಲಿ ‘ಮತ್ತೆ ಕಲ್ಯಾಣ’ ಆರಂಭಗೊಳ್ಳಲಿದೆ. ಆ.30ರಂದು ಬೀದರ್‌ನ ಬಸವಕಲ್ಯಾಣದಲ್ಲಿ ಮುಕ್ತಾಯಗೊಳ್ಳಲಿದೆ. 12ನೇ ಶತಮಾನದಲ್ಲಿ ಕಲ್ಯಾಣಕ್ರಾಂತಿಯಾದಾಗ ಶರಣರನ್ನು ಕೊಲ್ಲಲು, ಅದಕ್ಕಿಂತ ಮುಖ್ಯವಾಗಿ ಅವರ ವಚನಗಳನ್ನು ನಾಶಮಾಡಲು ಆಗಿನ ವೈದಿಕ ಮನಸ್ಸುಗಳು ಪ್ರಯತ್ನಿಸಿದ್ದವು. ಆಗ ಅಕ್ಕ ನಾಗಲಾಂಬಿಕೆ, ಚಂದಯ್ಯ, ಮಾಚಯ್ಯ ಮುಂತಾದ ಶರಣರು ಬೆನ್ನಿಗೆ ವಚನಗಳನ್ನು ಕಟ್ಟಿಕೊಂಡು ಕೈಯಲ್ಲಿ ಕತ್ತಿ ಹಿಡಿದುಕೊಂಡು ಕಲ್ಯಾಣ ಬಿಟ್ಟರು. ಒಂದು ಗುಂಪು ತರಿಕೆರೆಗೆ ಬಂದಿತ್ತು. ಅಲ್ಲಿ ವಚನಗಳನ್ನು ರಕ್ಷಿಸಿತ್ತು. ನಾಗಲಾಂಬಿಕೆ ಅಲ್ಲಿ ಐಕ್ಯ ಆಗಿದ್ದಳು. ಅದಕ್ಕಾಗಿ ಅಲ್ಲಿಂದ ಈ ಆಂದೋಲನ ಆರಂಭಿಸಲಾಗುತ್ತಿದೆ ಎಂದು ವಿವರಣೆ ನೀಡಿದರು.

ಬೀದರ್‌ ಜಿಲ್ಲೆಯ ಬಸವಕಲ್ಯಾಣವು ಬಸವಾದಿ ಶರಣರಿಗೆ ನೆಲೆ ಒದಗಿಸಿದ ಭೂಮಿ. ಅದಕ್ಕೆ ಅಲ್ಲಿ ಸಮಾರೋಪ ನಡೆಯಲಿದೆ. ಅದನ್ನು ಹೊರತುಪಡಿಸಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಜತೆಗೆ ತರಿಕೆರೆ, ಬಸವಕಲ್ಯಾಣದಲ್ಲಿ ನಡೆಯುವ ಉದ್ಘಾಟನೆ, ಸಮಾರೋಪದಲ್ಲೂ ಭಾಗವಹಿಸಬೇಕು. ಇದು ಒಂದು ಲಿಂಗ, ಜಾತಿ, ಮತ, ಪಂಥಕ್ಕೆ ಸೀಮಿತವಲ್ಲ ಎಂದು ತಿಳಿಸಿದರು.

‘ಆಯಾ ಜಿಲ್ಲೆಯವರೇ ಸಮಿತಿ ಮಾಡಬೇಕು. ಇಬ್ಬರು ಪ್ರಗತಿಪರರನ್ನು ಸಂಚಾಲಕರನ್ನಾಗಿ ಮಾಡಬೇಕು. ಅದರಲ್ಲಿ ಎಲ್ಲರನ್ನೂ ಒಳಗೊಂಡಿರಬೇಕು. ಬಸವತತ್ವವನ್ನು ವಿರೋಧಿಸುವವರೂ ಅದರಲ್ಲಿ ಇರಬೇಕು. ಅವರು ಬೇಡ, ಇವರು ಬೇಡ ಎಂದು ನಮಗೆ ನಾವೇ ಕಟ್ಟುಪಾಡು ಹಾಕಿಕೊಂಡರೆ ಕಟ್ಟುವ ಕ್ರಿಯೆಯೇ ಸೋಲುತ್ತದೆ. ನಾವು ಮತಾಂಧರಾಗುತ್ತೇವೆ. ಭಯೋತ್ಪಾದಕರಾಗುತ್ತೇವೆ. ಎಲ್ಲರನ್ನು ಒಳಗೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಶಿಕಾರಿಪುರದ ಮಾತೆ ಶಾರದಾಂಬಿಕೆ, ‘ಯಾವ ಧರ್ಮವೇ ಇರಲಿ ಮನುಷ್ಯನ ಬದುಕು ನಿಂತಿರುವುದು ಪ್ರೀತಿ ಮತ್ತು ನಂಬಿಕೆಯಲ್ಲಿ. ಅದನ್ನು ಕಟ್ಟುವ ಕೆಲಸ ‘ಮತ್ತೆ ಕಲ್ಯಾಣ’ ಆಂದೋಲನ ಮಾಡಲಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ‘ರಾಜ್ಯದ ಜನರ ಕಣ್ಣು, ಕಿವಿ ತೆರೆಸುವ ಕಾರ್ಯಕ್ರಮ ಇದು. ಈ ಆಂದೋಲನದಿಂದಾಗಿ ಜನರ ಬದುಕು, ಚಿಂತನೆ ಬದಲಾಗಲಿ. ಧ್ವೇಷ, ಅಸೂಯೆ, ಸಂಘರ್ಷಗಳು ಇಲ್ಲವಾಗಲಿ. ಜಾತ್ಯತೀತ ಮನೋಭಾವ ಬೆಳೆಯಲಿ’ ಎಂದು ಹಾರೈಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಕೆ.ಆರ್‌. ಜಯದೇಪ್ಪ, ಡಿ. ಬಸವರಾಜ್‌, ದೇವಿಗೆರೆ ವೀರಭದ್ರಪ್ಪ, ಚಿಕ್ಕೋಳ್‌ ಈಶ್ವರಪ್ಪ, ಕೆ.ಎಸ್‌. ಬಸವಂತಪ್ಪ, ಜಿ.ಸಿ.ನಿಂಗಪ್ಪ, ದೀಪಾ ಜಗದೀಶ್‌, ಶೈಲಜಾ ಬಸವರಾಜ್‌, ಮಮತಾ, ಶಿವಗಂಗಾ ಬಸವರಾಜ್‌, ಎನ್‌.ಜಿ. ಪುಟ್ಟಸ್ವಾಮಿ, ಡಾ. ಜಿ. ಮಂಜುನಾಥ ಗೌಡ, ಶಶಿಧರ ಹೆಮ್ಮನಬೇತೂರು, ಆಲೂರು ಲಿಂಗರಾಜ್‌, ಸಂಗಮೇಶ್ವರ ಗೌಡ, ಎಂ. ಶಿವಕುಮಾರ್‌, ಧನಂಜಯ ಕಡ್ಲೇಬಾಳು, ಜಯಲಕ್ಷ್ಮೀ ಮಹೇಶ್‌ ಅವರೂ ಇದ್ದರು.

ಕಾರ್ಯಕ್ರಮದ ವಿವರ

ಪ್ರತಿ ಜಿಲ್ಲೆಯಲ್ಲಿ ‘ಮತ್ತೆ ಕಲ್ಯಾಣ’ ಆಂದೋಲಮ ನಡೆಯಲಿದ್ದು, ದಾವಣಗೆರೆಯ ಪಾರ್ವತಮ್ಮ ಶಿವಶಂಕರಪ್ಪ ಸಭಾಂಗಣದಲ್ಲಿ ಆ.22ರಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11ಕ್ಕೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಾಣೇಹಳ್ಳಿ ಶ್ರೀಗಳ ಮುಕ್ತ ಸಂವಾದ, ಸಂಜೆ 5ಕ್ಕೆ ಸಾಮರಸ್ಯದ ನಡಿಗೆ, ಸಂಜೆ 6ಕ್ಕೆ ಸಾರ್ವಜನಿಕ ಸಮಾವೇಶ. ಅದರಲ್ಲಿ ಇಬ್ಬರು ಚಿಂತಕರು ಮಾತನಾಡುವರು. ರಾತ್ರಿ 8.30ಕ್ಕೆ ಶಿವಸಂಚಾರ ಸಾಣೇಹಳ್ಳಿ ತಂಡದಿಂದ ನಾಟಕ, ರಾತ್ರಿ 10ಕ್ಕೆ ಸಾಮೂಹಿಕ ಪ್ರಸಾದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.