ಮಾಯಕೊಂಡ: ‘ಇಲ್ಲಿನ ಪಿಡಿಒ ತಿಂಗಳಲ್ಲಿ 8–10 ದಿನವೂ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿಲ್ಲ. ಗ್ರಾಮದ ಯಾವ ಕೆಲಸಗಳೂ ಆಗುತ್ತಿಲ್ಲ. ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಕಾಯಂ ಪಿಡಿಒ ನೇಮಿಸಬೇಕು’ ಎಂಬ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
‘ಪಿಡಿಒ ಶ್ರೀನಿವಾಸ್ ಮಾಯಕೊಂಡ ಮತ್ತು ಅಣಜಿ ಗ್ರಾಮ ಪಂಚಾಯಿತಿ – ಎರಡೂ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವಾಗ ಕೇಳಿದರೂ ಅಣಜಿಯಲ್ಲಿದ್ದೇನೆ. ಸಭೆ ಇದೆ ಎಂದು ಸಬೂಬು ಹೇಳುತ್ತಾ, ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಎಂಟು ತಿಂಗಳಲ್ಲಿ ಎರಡೇ ಬಾರಿ ಸಭೆ ನಡೆಸಲಾಗಿದೆ. ಒಂದೂ ಗ್ರಾಮ ಸಭೆ, ವಾರ್ಡ್ ಸಭೆ ಮಾಡಿಲ್ಲ. ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸಿಲ್ಲ. ಉದ್ಯೋಗ ಖಾತ್ರಿಯಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ಇದರಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಸದಸ್ಯ ಉಳ್ಳಾಗಡ್ಡೆ ಲಕ್ಷ್ಮಣ್ಣ ಆರೋಪಿಸಿದರು.
‘ಗ್ರಾಮದ ರುದ್ರಭೂಮಿ ಅಭಿವೃದ್ಧಿಗೆ ₹12.5 ಲಕ್ಷ ಅನುದಾನ ಬಿಡುಗಡೆ ಆಗಿತ್ತು. ಈ ಪೈಕಿ ₹2 ಲಕ್ಷದಷ್ಟು ಕಾಮಗಾರಿಯೂ ಆಗಿಲ್ಲ. ಆದರೂ ಆಗಿನ ಪಿಡಿಒ ನಾಗರಾಜ್ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಎನ್‌ಒಸಿ ನೀಡಿದ್ದಾರೆ. 22 ಎಕರೆ ಭೂ ಪರಿವರ್ತನೆಗೆ ಎರಡೇ ದಿನದಲ್ಲಿ 150 ಇ–ಸ್ವತ್ತು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.
‘ಸಭೆಗೆ ಗೈರಾದ ಸದಸ್ಯರಿಗೆ ಪಿಡಿಒ ನೋಟಿಸ್ ನೀಡಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೂ ಮಾಹಿತಿ ನೀಡಿಲ್ಲ. ಚೆಕ್ ಹಾಗೂ ಕಡತಗಳನ್ನು ಅಧ್ಯಕ್ಷರ ಮನೆಗಳಿಗೆ ಕಳುಹಿಸಲಾಗುತ್ತದೆ. ಒಂದು ವರ್ಷವಾದರೂ ಗ್ರಾಮದಲ್ಲಿನ ನೀರಿನ ಟ್ಯಾಂಕ್ ಸ್ವಚ್ಚಗೊಳಿಸಿಲ್ಲ’ ಎಂದು ಸದಸ್ಯೆ ಪುಷ್ಪ ಉಮಾಶಂಕರ್ ದೂರಿದರು.
ಉಪಾಧ್ಯಕ್ಷೆ ಶಿವಮ್ಮ ಮಲ್ಲಿಕಪ್ಪ, ಸದಸ್ಯರಾದ ಪಟ್ಟಣಶೆಟ್ಟಿ ಮಲ್ಲಿಕಾರ್ಜುನ್, ಗಚ್ಚಪ್ಪರ ನಾಗಪ್ಪ, ನಾಗಮ್ಮ ಬೀರಪ್ಪ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.