ADVERTISEMENT

ದಾವಣಗೆರೆ | ಗುಂಡಿಮಯ ರಸ್ತೆ: ವಾಹನ ಸವಾರರ ಪರದಾಟ

ಬಾವಿಹಾಳು ಗ್ರಾಮದಿಂದ ಹೆಬ್ಬಾಳವರೆಗಿನ ರಸ್ತೆ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮೇ 2025, 5:18 IST
Last Updated 28 ಮೇ 2025, 5:18 IST
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲೇ ಸಂಚರಿಸುತ್ತಿರುವ ವಾಹನಗಳು
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲೇ ಸಂಚರಿಸುತ್ತಿರುವ ವಾಹನಗಳು   

ಮಾಯಕೊಂಡ: ಗ್ರಾಮಗಳ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ರಸ್ತೆಗಳು ಗುಂಡಿಮಯವಾಗಿದ್ದು, ಜೀವ ತೆಗೆಯಲು ಕಾಯುತ್ತಿವೆ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಆನಗೋಡು ಹೋಬಳಿಯ ಬಾವಿಹಾಳು ಗ್ರಾಮದಿಂದ ಹೆಬ್ಬಾಳು ರಾಷ್ಟೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದೆ. ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳಲ್ಲಿಯೇ ರಸ್ತೆ ನಿರ್ಮಾಣ ಆಗಿದೆಯೋ ಎಂಬುದು ತೋಚದಂತಾಗಿದೆ.

ಬಾವಿಹಾಳು ಗ್ರಾಮದಿಂದ ಹೊನ್ನ ನಾಯ್ಕನಹಳ್ಳಿ, ನರಗನಹಳ್ಳಿ, ಚಿನ್ನಸಮುದ್ರ ಗ್ರಾಮಗಳ ಮೂಲಕ ಹೆಬ್ಬಾಳು ಹೆದ್ದಾರಿಯನ್ನು ಸಂಪರ್ಕಿಸಲಾಗುತ್ತದೆ. ಈ ಗ್ರಾಮಗಳ ಜನತೆಗೆ ಸಂಚರಿಸಲು ಈ ಮಾರ್ಗ ಹೊರತುಪಡಿಸಿ ಅನ್ಯ ದಾರಿಯಿಲ್ಲ. ಗುಂಡಿಗಳಿದ್ದರೂ ಇದೇ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಇದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

10 ಕಿಲೋಮೀಟರ್ ಅಂತರದ ದಾರಿಯನ್ನು ಕ್ರಮಿಸಲು ಕನಿಷ್ಠ  ಒಂದರಿಂದ ಒಂದೂವರೆ ತಾಸು ಬೇಕಾಗುತ್ತದೆ. ಒಂದೊಂದು ಗುಂಡಿಯೂ ಎರಡು, ಮೂರು ಅಡಿಗಳಷ್ಟು ಆಳವಾಗಿದ್ದು, ಕೆಲವು ಕಡೆ ರಸ್ತೆಯ ಎರಡೂ ಅಂಚುಗಳಿಗೆ ವ್ಯಾಪಿಸಿವೆ. ಇಂತಹ ಗುಂಡಿಗಳನ್ನು ವಾಹನ ಸವಾರರು ಯಾವುದೇ ಕಾರಣಕ್ಕೂ  ತಪ್ಪಿಸಿಕೊಂಡು ಮುಂದೆ ಹೋಗಲಾಗದು. ಇತ್ತೀಚೆಗೆ ಸುರಿದ ಮಳೆಗೆ ಈ ದೊಡ್ಡ ದೊಡ್ಡ ಗುಂಡಿಗಳು ತುಂಬಿ ಕೆರೆಗಳಂತಾಗಿವೆ. ವಾಹನ ಸವಾರರು ಜೀವ ಕೈನಲ್ಲಿ ಹಿಡಿದು ಸಂಚರಿಸುವ ಸ್ಥಿತಿ ಇದೆ.

ಈ ಮಾರ್ಗದಗಂಟ ಸಂಚರಿಸುವ ಗ್ರಾಮಸ್ಥರ ಗೋಳು‌ ಕೇಳುವವರೇ ಇಲ್ಲದಂತಾಗಿದೆ. ದಿನಕ್ಕೆ ಒಮ್ಮೆ ಬಂದು ಹೋಗುವ ಬಸ್‌ ಮಾತ್ರ ಇವರಿಗೆ ಆಸರೆ. ಬೈಕ್‌ನಲ್ಲೇ ಬಹುತೇಕರು ಸಂಚರಿಸುತ್ತಿದ್ದು, ಯಾವ ಗುಂಡಿಯಲ್ಲಿ ಬಿದ್ದು ಕೈ–ಕಾಲು ಮುರಿದುಕೊಳ್ಳುತ್ತಾರೋ ಎಂಬ ಆತಂಕ ಸದಾ ಕಾಡುತ್ತಿರುತ್ತದೆ. 

ಮೂರು ತಿಂಗಳಲ್ಲಿ ರಸ್ತೆ ನಿರ್ಮಿಸುವುದಾಗಿ ಈ ಭಾಗದ ಶಾಸಕ ಕಾರ್ಯಕ್ರಮವೊಂದರಲ್ಲಿ ಭರವಸೆ ನೀಡಿದ್ದರು. ಆದರೆ ವರ್ಷ ಕಳೆಯುತ್ತಾ ಬಂದರೂ ಈಡೇರಿಲ್ಲ. ಜನರ ಸಂಕಷ್ಟ ಅರಿತು ಶೀಘ್ರ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಬಾವಿಹಾಳು ಗ್ರಾಮಸ್ಥರಾದ ಸಂದೀಪ್, ಹರೀಶ್ ಒತ್ತಾಯಿಸಿದರು.

ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೊನ್ನನಾಯ್ಕನ‌ಹಳ್ಳಿಗೆ ತೆರಳುವಾಗ ಸಿಗುವ ಹಳ್ಳಕ್ಕೆ ನಿರ್ಮಿಸಿದ್ದ ಹಳೆಯ ಸೇತುವೆ ಶಿಥಿಲಗೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲೇ ಸಂಚರಿಸುತ್ತಿರುವ ವಾಹನಗಳು
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗೆ ಈ ರಸ್ತೆಯೇ ಕೈಗನ್ನಡಿ. ಈ ಭಾಗದ ಜನರು‌ ನಿತ್ಯವೂ ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿ ಇದೆ. ಶಾಸಕರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ
ಶೃತಿ ಮಲ್ಲೇಶ್ ನರಗನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ
ಬಾವಿಹಾಳು ಗ್ರಾಮದಿಂದ ಹೆಬ್ಬಾಳದವರೆಗೆ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಸಚಿವರ ಸಮಯ‌ ಪಡೆದು ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು
ಕೆ.ಎಸ್. ಬಸವಂತಪ್ಪ ಶಾಸಕ ಮಾಯಕೊಂಡ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.