ADVERTISEMENT

ವೈದ್ಯಕೀಯ ವಿದ್ಯಾರ್ಥಿಗಳಿಂದ ದಮ್ಮಾರೊ ದಮ್‌...!

ಸರ್ಕಾರಿ ಕೋಟಾದಡಿ ಸೀಟು ಪಡೆದರು; ಅನುತ್ತೀರ್ಣರಾಗಿ ‘ನಶೆ’ಯಲ್ಲಿ ತೇಲಿದರು

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 14:39 IST
Last Updated 8 ಜನವರಿ 2019, 14:39 IST

ದಾವಣಗೆರೆ: ನಗರದ ಸಿದ್ದವೀರಪ್ಪ ಬಡಾವಣೆಯ ಮನೆಯೊಂದರಲ್ಲಿ ಈಚೆಗೆ ‘ಗಾಂಜಾ’ ನಶೆಯಲ್ಲಿ ತೇಲುತ್ತಿದ್ದಾಗ ಬಂಧನಕ್ಕೊಳಗಾದ 12 ವೈದ್ಯಕೀಯ ವಿದ್ಯಾರ್ಥಿಗಳದ್ದು ‘ದಾರಿ ತಪ್ಪಿದ ಬುದ್ಧಿಮಂತ ಮಕ್ಕಳ’ ಕತೆಯಾಗಿದೆ. ವೈದ್ಯರಾಗಿ ಜನರ ಜೀವ ಉಳಿಸಬೇಕಾಗಿದ್ದ ಇವರಿಗೆ ಈಗ ‘ನಶೆ’ಯಿಂದ ಹೊರ ಬಂದು, ಕಾನೂನಿನ ತೂಗುಗತ್ತಿಯಿಂದ ತಪ್ಪಿಸಿಕೊಂಡು ತಮ್ಮ ‘ಭವಿಷ್ಯ’ವನ್ನು ಕಟ್ಟಿಕೊಳ್ಳುವ ಸವಾಲು ಎದುರಾಗಿದೆ.

ಬಂಧಿತ ವಿದ್ಯಾರ್ಥಿಗಳ ಪೈಕಿ ನಾಲ್ವರು ಸಿಇಟಿಯಲ್ಲಿ ಉತ್ತಮ ಅಂಕ ಗಳಿಸಿ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿದ್ದರು. ಅದರಲ್ಲೂ ಒಬ್ಬ ವಿದ್ಯಾರ್ಥಿ 1,000 ರ‍್ಯಾಂಕಿಂಗ್‌ ಒಳಗೆ ಬಂದಿದ್ದ. ಮೂವರು ‘ಕಾಮೆಡ್‌–ಕೆ’ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿದ್ದರೆ ಉಳಿದವರು ಪೇಮೆಂಟ್‌ ಸೀಟಿನ ಮೂಲಕ ನಗರದ ಪ್ರತಿಷ್ಠಿತ ಕಾಲೇಜಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಬಂದವರು. ಇವರಲ್ಲಿ ಕೆಲವರು ಐ.ಎ.ಎಸ್‌ ಹಾಗೂ ಐ.ಪಿ.ಎಸ್‌. ಅಧಿಕಾರಿಗಳ ಸಂಬಂಧಿಕರೂ ಆಗಿದ್ದಾರೆ. ನಿಗಾ ವಹಿಸದೇ ಇರುವುದರಿಂದ ಮಕ್ಕಳ ‘ದಾರಿ ತಪ್ಪಿದರು’ ಎಂದು ಪೋಷಕರು ಮರಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ನಡೆದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅವರನ್ನು ‘ಗಾಂಜಾ ದಂಧೆ’ ಬಗ್ಗೆ ಮಾತಿಗೆ ಎಳೆದಾಗ, ಈ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದರು.

ADVERTISEMENT

‘ಕಳೆದ ವಾರ ಬಂಧನಕ್ಕೆ ಒಳಗಾದ ವಿದ್ಯಾರ್ಥಿಗಳಲ್ಲಿ ಕೆಲವರು ಸರ್ಕಾರಿ ಕೋಟಾದಡಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದರು. ಮೂವರು ಮಾತ್ರ ನಿತ್ಯ ಮಾದಕವಸ್ತು ಸೇವನೆಯ ಚಟವನ್ನು ಅಂಟಿಸಿಕೊಂಡಿದ್ದರು. ಉಳಿದವರು ಗಾಂಜಾ ಸಿಕ್ಕಾಗ ನಶೆ ಏರಿಸಿಕೊಳ್ಳುತ್ತಿದ್ದರು. ಬಂಧಿತರಲ್ಲಿ ಕೆಲವು ವಿದ್ಯಾರ್ಥಿಗಳು ಕೆಲ ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದರು’ ಎಂದು ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳು ಧೂಮಪಾನ ಮಾಡುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳುತ್ತಾರೆ. ಗಾಂಜಾ ಸೇವನೆ ಮಾಡುತ್ತಿರುವ ಸ್ನೇಹಿತರ ಬಲವಂತಕ್ಕೆ ಮಣಿದು ತಾವೂ ಗಾಂಜಾ ಸೇದಲು ಆರಂಭಿಸುತ್ತಾರೆ. ಕ್ರಮೇಣ ಅದರ ದಾಸರಾಗುತ್ತಾರೆ. ಹೊರ ಜಿಲ್ಲೆಗಳಿಂದ ₹ 4 ಸಾವಿರಕ್ಕೆ ಗಾಂಜಾ ಸೊಪ್ಪು ತಂದು ವಿದ್ಯಾರ್ಥಿಗಳಿಗೆ ₹ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಒಂದು ವಾರದಲ್ಲಿ ಮೂರು ಗಾಂಜಾ ಪ್ರಕರಣಗಳು ದಾಖಲಾಗಿವೆ’ ಎಂದರು.

ಗಾಂಜಾ ಮೂಲ

ಗಾಂಜಾ ಸೇದುವ ಅಭ್ಯಾಸವುಳ್ಳ ಕೆಲವರು ಮನೆಯ ಬಳಿ 8–10 ಗಿಡಗಳನ್ನು ಬೆಳೆಸುತ್ತಿದ್ದಾರೆ. ಕೆಲ ದೇವಸ್ಥಾನಗಳ ಸ್ವಾಮೀಜಿ ಗಾಂಜಾ ಸೇದುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಓಡಿಸುವ ಹೋರಿಗಳಿಗೂ ಗಾಂಜಾ ಎಲೆ ತಿನ್ನಿಸಲು ಗಿಡ ಬೆಳೆಸುತ್ತಿದ್ದಾರೆ. ಕಬ್ಬಿನ ಗದ್ದೆ, ಜೋಳದ ಬೆಳೆ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿ, ರೈತರಿಂದ ಮರಳಿ ಖರೀದಿಸುವ ವ್ಯವಸ್ಥೆಯನ್ನು ಈ ದಂಧೆಯಲ್ಲಿ ತೊಡಗಿಕೊಂಡವರು ಮಾಡಿಕೊಂಡಿದ್ದಾರೆ ಎಂದು ವಿವರ ನೀಡಿದರು.

ಆಂಧ್ರಪ್ರದೇಶದ ಅನಂತಪುರ, ಕರ್ನೂಲ್‌ನಿಂದ ಭಾರಿ ಪ್ರಮಾಣದಲ್ಲಿ ಗಾಂಜಾವನ್ನು ರಾಜ್ಯಕ್ಕೆ ತರಲಾಗುತ್ತಿದೆ. ಆಂಧ್ರಪ್ರದೇಶದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಬೆಳೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.