ADVERTISEMENT

ಹೊನ್ನಾಳಿಗೆ ಡಿಡಿಪಿಐ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:36 IST
Last Updated 10 ಮೇ 2019, 19:36 IST
ಚಿತ್ರ : 10 ಎಚ್‍ಎನ್‍ಎಲ್-1ಇಪಿ :  ಹೊನ್ನಾಳಿ ಸಮೀಪದ ಟಿ.ಬಿ.ವೃತ್ತದ ಸರ್ಕಾರಿ ಪ್ರೌಢಶಾಲೆಯಲ್ಲಿನ ಗೋದಾಮಿನಲ್ಲಿ ಸಂಗ್ರಹಿಸಲಾದ ಪಠ್ಯಪುಸ್ತಕಗಳನ್ನು ಡಿಡಿಪಿಐ ಪರಮೇಶ್ವರಪ್ಪ ಪರಿಶೀಲಿಸಿದರು. 
ಚಿತ್ರ : 10 ಎಚ್‍ಎನ್‍ಎಲ್-1ಇಪಿ :  ಹೊನ್ನಾಳಿ ಸಮೀಪದ ಟಿ.ಬಿ.ವೃತ್ತದ ಸರ್ಕಾರಿ ಪ್ರೌಢಶಾಲೆಯಲ್ಲಿನ ಗೋದಾಮಿನಲ್ಲಿ ಸಂಗ್ರಹಿಸಲಾದ ಪಠ್ಯಪುಸ್ತಕಗಳನ್ನು ಡಿಡಿಪಿಐ ಪರಮೇಶ್ವರಪ್ಪ ಪರಿಶೀಲಿಸಿದರು.    

ಹೊನ್ನಾಳಿ: ವಿದ್ಯಾರ್ಥಿಗಳಿಗೆ ವಿತರಿಸಬೇಕಾದ ಪಠ್ಯಪುಸ್ತಕಗಳು ಶೇ 56.24ರಷ್ಟು ಬಂದಿದ್ದು, ಅವುಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ವಿಲೇವಾರಿ ಮಾಡಲಾಗಿದೆ. ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಡಿಡಿಪಿಐ ಪರಮೇಶ್ವರಪ್ಪ ಹೇಳಿದರು.

ಟಿ.ಬಿ.ವೃತ್ತದ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಉಚಿತ ಪುಸ್ತಕ ಮಳಿಗೆಗೆ ಶುಕ್ರವಾರ ಭೇಟಿ ನೀಡಿ, ಪುಸ್ತಕಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಹಾಗೂ ಅನುದಾನರಹಿತ ಶಾಲೆಗಳು ಸೇರಿ 3,09,571 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1,97,410 ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿದ್ದಾರೆ. 1,12,161 ವಿದ್ಯಾರ್ಥಿಗಳು ಅನುದಾನ ರಹಿತ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ಈಗ ಲಭ್ಯವಿರುವ ಪುಸ್ತಕಗಳನ್ನು ಶೈಕ್ಷಣಿಕ ವರ್ಷದ ಆರಂಭಣದಲ್ಲಿಯೇ ವಿತರಿಸುವಂತೆ ಬಿಇಒ ಅವರಿಗೆ ಸೂಚಿಸಲಾಗಿದೆ. ಬಾಕಿ ಪುಸ್ತಕಗಳು ಶೀಘ್ರದಲ್ಲಿಯೇ ಬರಲಿದ್ದು, ಅವುಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಸಮವಸ್ತ್ರ ಬಂದಿಲ್ಲ: 2019-20 ನೇ ಸಾಲಿಗೆ ಅಗತ್ಯವಿರುವ ಸಮವಸ್ತ್ರಗಳು ಶೀಘ್ರದಲ್ಲಿಯೇ ಬರಲಿದ್ದು, ಬಂದ ಕೂಡಲೇ ಅವುಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪುಸ್ತಕಗಳನ್ನು ದಾಸ್ತಾನು ಮಾಡಿರುವ ಕೊಠಡಿಗೆ ಬಂದೋಬಸ್ತ್ ಮಾಡಬೇಕು. ಮಳೆ ನೀರು ಅಥವಾ ಬೆಂಕಿ ತಗುಲದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಈ ಬಾರಿ ಆನ್‍ಲೈನ್ ಮುಖಾಂತರ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ತರಿಸಿಕೊಳ್ಳಲಾಗುವುದು ಎಂದರು.

ಬೇಸಿಗೆ ಸಂಭ್ರಮಕ್ಕೆ ಮೆಚ್ಚುಗೆ: ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ವಿಶೇಷ ಜ್ಞಾನ ಸಂಪತ್ತನ್ನು ಕಲಿಸುವ ಬಗ್ಗೆ ಶಿಕ್ಷಕರು ವಿಶೇಷವಾಗಿ ಆಸಕ್ತಿಯನ್ನು ವಹಿಸಿದ್ದಾರೆ. ಮುಂದಿನ ವರ್ಷ ಮತ್ತಷ್ಟು ಶಾಲೆಗಳಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಬಿಇಒ ಜಿ.ಇ. ರಾಜೀವ್, ಇಸಿಒಗಳಾದ ನಾಗರಾಜಪ್ಪ ಹಾಗೂ ಸಿದ್ದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.