ದಾವಣಗೆರೆ: ₹ 15 ಕೋಟಿ ಅನುದಾನದಲ್ಲಿ ಕುಂದವಾಡ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು. ಯಾವೆಲ್ಲ
ಕಾಮಗಾರಿಯನ್ನು ಎಷ್ಟು ವೆಚ್ಚದಲ್ಲಿ ನಿರ್ವಹಿಸಲಾಗುವುದು ಎಂಬ ವಿವರಗಳು ಇವೆ. ಕಾಮಗಾರಿ ಆರಂಭಗೊಳ್ಳುವ ಮೊದಲೇ ಭ್ರಷ್ಟಾಚಾರ ಎಂದು ಆರೋಪಿಸುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.
ನಗರದಲ್ಲಿ ಸೋಮವಾರ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಅಭಿವೃದ್ಧಿ ಯೋಜನೆಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿರುವುದು. ಹಾಗಾದರೆ ಅವರು ಭ್ರಷ್ಟಾಚಾರ ನಡೆಸಲು ಅನುಮೋದನೆ ನೀಡಿದ್ರಾ ಎಂದು ಪ್ರಶ್ನಿಸಿದರು.
ಅಕ್ರಮ ಸಕ್ರಮ: ‘ಕಂದಾಯ ಭೂಮಿಯಲ್ಲಿ ನಿವೇಶನ ಮಾಡಿಕೊಂಡಿರುವ, ಮನೆ ನಿರ್ಮಿಸಿಕೊಂಡಿರುವುದನ್ನು ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸಲು ಸರ್ಕಾರ ನಿರ್ಧರಿಸಲಿದೆ. ಈ ಬಗ್ಗೆ ಈಗಾಗಲೇ ಎರಡು ಸಭೆಗಳನ್ನು ನಡೆಸಿದ್ದೇನೆ. ದಾವಣಗೆರೆಯಲ್ಲಿ ಸುಮಾರು 65 ಸಾವಿರ ನಿವೇಶನ ಮತ್ತು ಮನೆಗಳು ಕಂದಾಯ ಜಮೀನಿನಲ್ಲಿವೆ’ ಎಂದು ತಿಳಿಸಿದರು.
18 ಮನೆಗೆ ಹಾನಿ: ‘ಅಕಾಲಿಕ ಮಳೆಯಿಂದ 18 ಮನೆಗಳು ಕುಸಿದಿವೆ. ಅವುಗಳಿಗೆ ಪರಿಹಾರ ನೀಡಲು ಸೂಚಿಸಿದ್ದೇನೆ. ಇಟ್ಟಿಗೆ ಭಟ್ಟಿ ಹಾಳಾಗಿದೆ. ಸುಮಾರು 50 ಎಕರೆ ಬೆಳೆಹಾನಿಯಾಗಿದೆ. ಎಲ್ಲವನ್ನು ಸಮೀಕ್ಷೆ ನಡೆಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ನಗರೋತ್ಥಾನದಲ್ಲಿ ₹ 125 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ನೀಲನಕ್ಷೆ ತಯಾರಿಸಿದ್ದು, ಅದಕ್ಕೆ ಅನುಮೋದನೆ ನೀಡಿದ್ದೇನೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿವೆ. ₹ 120 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಬಸ್‌ನಿಲ್ದಾಣ ನಿರ್ಮಾಣಗೊಳ್ಳಲಿದೆ. ಅದಕ್ಕೆ ಜ.18 ರಂದು ಭೂಮಿಪೂಜೆ ನೆರವೇರಿಸಲಾಗುವುದು. ಚಿಗಟೇರಿ ಆಸ್ಪತ್ರೆ ಹಳೆಯದು. ಹಾಗಾಗಿ ಹೊಸ ಕಟ್ಟಡ ನಿರ್ಮಾಣ ಅಗತ್ಯವಿದೆ. ಈ ಬಾರಿಯ ಬಜೆಟ್‌ನಲ್ಲಿ ಅದನ್ನು ಸೇರಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.