
ದಾವಣಗೆರೆ: ‘ತಂದೆ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದ ಸ್ಥಳ ಸಮತಟ್ಟು ಮಾಡಲು ಗುತ್ತಿಗೆ ನೀಡಲಾಗಿತ್ತು. ಮಣ್ಣು ಅಕ್ರಮವಾಗಿ ಸಾಗಣೆ ಮಾಡಿದ್ದರೆ ತನಿಖೆ ಎದುರಿಸಲು ಸಿದ್ಧನಿದ್ದೇನೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಸಚಿವರು ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಿ ಸಾಗಣೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸೋಮವಾರ ನಡೆಸಿದ ಪ್ರತಿಭಟನೆಗೆ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
‘ಕಾರ್ಯಕ್ರಮ ಸ್ಥಳ ನಮಗಷ್ಟೇ ಸೇರಿದ್ದಲ್ಲ. ಜಮೀನು ಮಾಲೀಕರಾದ ಅನೇಕ ರೈತರು ಕೂಡ ಮಣ್ಣು ತಂದಿದ್ದಾರೆ. ಗುತ್ತಿಗೆ ಪಡೆದವರನ್ನು ಹಿಡಿದು ಕೇಳಿದರೆ ಸತ್ಯ ಗೊತ್ತಾಗುತ್ತದೆ. ತಪ್ಪು ಮಾಡಿದ್ದರೆ ಕಾನೂನು ಕ್ರಮ ಎದುರಿಸಲು ನಾನು ಸಿದ್ಧನಿದ್ದೇನೆ. ಆದರೆ, ದಾದಾಗಿರಿಗೆ ಬಗ್ಗುವುದಿಲ್ಲ’ ಎಂದು ತಿರುಗೇಟು ನೀಡಿದರು.
‘ಶಾಸಕ ಬಿ.ಪಿ. ಹರೀಶ್ ಬಹಿರಂಗವಾಗಿ ವ್ಯಕ್ತಿಯೊಬ್ಬರನ್ನು ನಿಂದನೆ ಮಾಡಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಸಂತ್ರಸ್ತರು ದೂರು ಕೊಟ್ಟಿದ್ದಾರೆ. ಹರೀಶ್ ವಿರುದ್ಧ ದಾಖಲಾಗಿರುವ ಜಾತಿ ನಿಂದನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಬಂಧಿಸುವಂತೆ ಯಾರಿಗೂ ಸೂಚನೆ ಕೊಟ್ಟಿಲ್ಲ. ಮೂರು ಬಾರಿ ಸಚಿವರಾದರೂ ಕಪ್ಪುಚುಕ್ಕೆ ಅಂಟಿಸಿಕೊಂಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಅಧಿಕಾರಿಗಳು ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ಏಕವಚನದಲ್ಲಿ ನಿಂದಿಸುವುದು ಸರಿಯಲ್ಲ. ಉತ್ತಮ ರಾಜಕಾರಣಿಯ ಲಕ್ಷಣವೂ ಅಲ್ಲ. ಬಿ.ಪಿ. ಹರೀಶ್ ಸಂಸ್ಕಾರ ಕಲಿಯಬೇಕು. ಚಿಕ್ಕಂದಿನಲ್ಲಿ ನಮ್ಮೊಂದಿಗೆ ಕ್ರಿಕೆಟ್ ಆಡುವಾಗಲೂ ಹರೀಶ್ ಹೀಗೆಯೇ ನಡೆದುಕೊಳ್ಳುತ್ತಿದ್ದರು’ ಎಂದು ಕುಟುಕಿದರು.
‘ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ’
‘ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಚಿಕ್ಕಬಿದರೆ ಪ್ರಕರಣದ ತನಿಖೆ ಶೀಘ್ರದಲ್ಲಿ ಹೊರಬರಲಿದ್ದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ಹುನ್ನಾರವೂ ಬಯಲಾಗಲಿದೆ’ ಎಂದು ಸಚಿವ ಮಲ್ಲಿಕಾರ್ಜುನ್ ಹೇಳಿದರು.
‘ಕೇಂದ್ರದ ಮಾಜಿ ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಊರಿಗೆ (ಭೀಮಸಮುದ್ರ) ಕಳುಹಿಸಲಾಗಿತ್ತು. ಅವರು ಈವರೆಗೆ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ವಿಧಾನಸಭಾ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಗರಿಗರಿ ಬಟ್ಟೆ ಹಾಕಿಕೊಂಡು ಹೊರಬರುತ್ತಿದ್ದಾರೆ’ ಎಂದು ಜಿ.ಎಂ. ಸಿದ್ದೇಶ್ವರ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.