ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ರಾಜಕಾರಣ ಹೊರತಾದ ಉದ್ಯಮವಿದೆ. ಬಿಜೆಪಿ ನಾಯಕರಂತೆ ಲಂಚ ಪಡೆದು, ಭ್ರಷ್ಟಾಚಾರ ನಡೆಸಿ ಬದುಕುವ ಸ್ಥಿತಿ ಅವರಿಗೆ ಇಲ್ಲ ಎಂದು ಮಾಜಿ ಮೇಯರ್ ಕೆ.ಚಮನ್ ಸಾಬ್ ತಿಳಿಸಿದರು.
‘ಶಾಮನೂರು ಕುಟುಂಬದ ಸದಸ್ಯರು ಮೂಲತಃ ಉದ್ಯಮಿಗಳು. ನಿತ್ಯ 2,000 ಚೀಲ ಸಕ್ಕರೆ ಉತ್ಪಾದನೆ ಮಾಡುವ ಕಾರ್ಖಾನೆಗಳನ್ನು ಹೊಂದಿದ್ದಾರೆ. ಎರಡು ಖಾಸಗಿ ವೈದ್ಯಕೀಯ ಕಾಲೇಜು ಸೇರಿ ಹಲವು ಬಗೆಯ ಉದ್ಯಮ ನಡೆಸುತ್ತಿದ್ದಾರೆ. ರಾಜಕಾರಣವನ್ನು ಜನಸೇವೆಗೆ ಮಾಡುತ್ತಿದ್ದಾರೆಯೇ ಹೊರತು ಜೀವನಕ್ಕಾಗಿ ಅಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಸಚಿವರು ಇಲಾಖೆಗಳ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡಿಲ್ಲ. ಪಕ್ಷದ ನಾಯಕರು, ಸಮಾಜದ ಮುಖಂಡರು ಹಾಗೂ ಕ್ಷೇತ್ರದ ಮತದಾರರಿಗೆ ಸ್ಪಂದಿಸುತ್ತಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸುತ್ತಿರುವ ಬಿಜೆಪಿ, ಸಚಿವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಸಿದೆ. ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದು ಹೇಳಿದರು.
‘ಶಾಮನೂರು ಕುಟುಂಬದ ಕುರಿತು ಮಾತನಾಡುವ ಮುನ್ನ ನಾಲಿಗೆ ಮೇಲೆ ಹಿಡಿತ ಇರಬೇಕು. ಬಿಜೆಪಿ ನಾಯಕರನ್ನು ಮೆಚ್ಚಿಸಲು ಕೀಳುಮಟ್ಟದ ಆರೋಪಗಳನ್ನು ಮಾಡಿದರೆ ಕಾಂಗ್ರೆಸ್ ಸಹಿಸುವುದಿಲ್ಲ. ಬಿಜೆಪಿಯೇ ಮೂರು ಭಾಗವಾಗಿದೆ. ಇದರಲ್ಲಿ ಲೋಕಿಕೆರೆ ನಾಗರಾಜ್ ಯಾವ ಬಣದಲ್ಲಿ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್ ಆಗ್ರಹಿಸಿದರು.
‘ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನರ ಬಗೆಗೆ ಅವರಿಗೆ ಇರುವ ಕಾಳಜಿಯನ್ನು ಪ್ರಶ್ನಿಸುವ ಅಧಿಕಾರ ಬಿಜೆಪಿಗೆ ಇಲ್ಲ. ಬಿಜೆಪಿಯ ಮಾಜಿ ಸಂಸದರು ಒಮ್ಮೆಯೂ ಸಂಸತ್ತಿನಲ್ಲಿ ಮಾತನಾಡಿಲ್ಲ. ವಿಮಾನಯಾನ ಖಾತೆಯ ರಾಜ್ಯ ಸಚಿವರಾಗಿದ್ದರೂ ದಾವಣಗೆರೆ ಜನರಿಗೆ ಪ್ರಯೋಜನವಾಗಲಿಲ್ಲ’ ಎಂದು ದೂರಿದರು.
ಪಾಲಿಕೆ ಮಾಜಿ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಪಾಮೇನಹಳ್ಳಿ ನಾಗರಾಜ್, ಕಾಂಗ್ರೆಸ್ ಮುಖಂಡ ಉಮೇಶ್, ಗೋಪಿ ನಾಯ್ಕ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.