ADVERTISEMENT

ದಾವಣಗೆರೆ | ಪತ್ತೆಯಾಗದ ಮಹಿಳೆ, ಬಾಲಕಿಯರು ಎಲ್ಲಿ?

ಹೆಚ್ಚುತ್ತಿದೆ ಕಾಣೆ ಪ್ರಕರಣಗಳ ಸಂಖ್ಯೆ, ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿದ ಅನುಮಾನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:25 IST
Last Updated 6 ಡಿಸೆಂಬರ್ 2025, 8:25 IST
Womens-Hand-CutOut
Womens-Hand-CutOut   

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 1,586 ಮಹಿಳೆಯರು ಹಾಗೂ 191 ಬಾಲಕಿಯರು ನಾಪತ್ತೆಯಾಗಿದ್ದಾರೆ. ಇವರಲ್ಲಿ 1,525 ಮಹಿಳೆಯರು ಮತ್ತು 179 ಬಾಲಕಿಯರು ಪತ್ತೆಯಾಗಿದ್ದು, ಉಳಿದವರ ಸುಳಿವು ಸಿಗದೇ ಇರುವುದು ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಅನುಮಾನ ಮೂಡಿಸಿದೆ.

ಕೆಲ ವರ್ಷಗಳಿಂದ ಈಚೆಗೆ ಮಹಿಳೆಯರು ಮತ್ತು ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್‌ ತನಿಖೆ ಸಾಕಷ್ಟು ಸುಧಾರಣೆ ಕಂಡಿದ್ದರೂ ಈ ಪ್ರಕರಣಗಳ ಪೂರ್ಣ ಪ್ರಮಾಣದ ಪತ್ತೆ ಸಾಧ್ಯವಾಗುತ್ತಿಲ್ಲ. 2023ರಲ್ಲಿ 13, 2024ರಲ್ಲಿ 14 ಹಾಗೂ 2025 (ಜುಲೈವರೆಗೆ) 34 ಮಹಿಳೆಯರು ಪತ್ತೆಯಾಗಿಲ್ಲ. 2023ರಲ್ಲಿ 1, 2024ರಲ್ಲಿ 3 ಹಾಗೂ 2025 (ಜುಲೈ) 8 ಬಾಲಕಿಯರ ಸುಳಿವು ಸಿಕ್ಕಿಲ್ಲ.

‘ಪ್ರೇಮ, ಹದಗೆಟ್ಟ ಆರ್ಥಿಕ ಸ್ಥಿತಿ, ಕೌಟುಂಬಿಕ ಕಲಹ, ಮಾನಸಿಕ ತೊಳಲಾಟ, ಅಪಹರಣ, ಮಾನವ ಕಳ್ಳಸಾಗಣೆ ಸೇರಿ ಹಲವು ಕಾರಣಗಳಿಗೆ ಮಹಿಳೆಯರು ಮತ್ತು ಬಾಲಕಿಯರು ಕಾಣೆಯಾಗುತ್ತಿದ್ದಾರೆ. ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾದ ಬಹುತೇಕರು ಸಿಗುತ್ತಾರೆ. ಆರ್ಥಿಕ ಸ್ಥಿತಿ, ಕೌಟುಂಬಿಕ ಕಲಹದಿಂದ ಮನೆ ತೊರೆದವರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಆದರೆ, ಅಪಹರಣ ಮತ್ತು ಮಾನವ ಕಳ್ಳ ಸಾಗಣೆಯ ಜಾಲಕ್ಕೆ ಸಿಲುಕಿದವರು ಪತ್ತೆಯಾಗಿದ್ದು ಅಪರೂಪ’ ಎನ್ನುತ್ತವೆ ಪೊಲೀಸ್‌ ಇಲಾಖೆಯ ಮೂಲಗಳು.

ADVERTISEMENT

18 ವರ್ಷ ಮೇಲಿನ ಯುವತಿಯರು ಹಾಗೂ ಮಹಿಳೆಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಲೇ ಇವೆ. 2023ರಲ್ಲಿ 585 ಮಹಿಳೆಯರು ನಾಪತ್ತೆಯಾದ ಬಗ್ಗೆ ಜಿಲ್ಲೆಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. 2024ರಲ್ಲಿ ಈ ಸಂಖ್ಯೆ 611ಕ್ಕೆ ಏರಿಕೆಯಾಗಿದೆ. 2025ರ ಜುಲೈವರೆಗೆ 390 ಮಹಿಳೆಯರು ಕಾಣೆಯಾದ ಬಗ್ಗೆ ವರದಿಯಾಗಿದೆ.

‘ಹದಿಹರೆಯದ ಆಕರ್ಷಣೆ, ಶಿಕ್ಷಣಕ್ಕೆ ಪಾಲಕರು ಹೇರುವ ಒತ್ತಡ ಸೇರಿದಂತೆ ಹಲವು ಕಾರಣಗಳಿಂದ ಮಕ್ಕಳು ಮನೆ ತೊರೆಯುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ದಾಖಲಾದ ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಬಾಲಕರಿಗಿಂತ ಬಾಲಕಿಯರ ಸಂಖ್ಯೆ ಹೆಚ್ಚಿದೆ. 2020ರಿಂದ 2025ರ ಜುಲೈವರೆಗೆ ರಾಜ್ಯದಲ್ಲಿ 4,086 ಬಾಲಕರು ಹಾಗೂ 10,792 ಬಾಲಕಿಯರು ನಾಪತ್ತೆಯಾಗಿದ್ದಾರೆ. ಇವರಲ್ಲಿ 333 ಬಾಲಕರು ಹಾಗೂ 1,003 ಬಾಲಕಿಯರು ಪತ್ತೆಯಾಗಿಲ್ಲ’ ಎಂಬುದು ಪೊಲೀಸ್‌ ಅಧಿಕಾರಿಯೊಬ್ಬರ ವಿವರಣೆ.

ಪ್ರತಿ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ. ಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳ ತನಿಖೆ ನಡೆಸಿ ಪತ್ತೆ ಮಾಡುವುದು ಈ ತಂಡದ ಜವಾಬ್ದಾರಿ. ಕಾನೂನು ಸುವ್ಯವಸ್ಥೆ ಹಾಗೂ ಇತರ ಅಪರಾಧ ಪ್ರಕರಣಗಳ ಕಾರ್ಯಭಾರದ ಒತ್ತಡದ ನಡುವೆ ಈ ಪ್ರಕರಣಗಳ ತನಿಖೆಗೂ ಗಮನ ಹರಿಸುವಂತೆ ಪೊಲೀಸ್‌ ಇಲಾಖೆ ಸೂಚಿಸಿದೆ. ನಾಪತ್ತೆ ಪ್ರಕರಣಗಳನ್ನು ನಿಷ್ಕ್ರಿಯ ಪ್ರಕರಣಗಳ ಪಟ್ಟಿಗೆ ಸೇರ್ಪಡೆ ಮಾಡದಂತೆಯೂ ಎಚ್ಚರಿಕೆ ನೀಡಿದೆ.

ಮಕ್ಕಳು ಮತ್ತು ಮಹಿಳೆಯರ ಪತ್ತೆಗೆ ಒತ್ತು ನೀಡಲಾಗಿದೆ. ವಿಶೇಷ ಕಾರ್ಯಾಚರಣೆ ನಡೆಸಿ ಶ್ರಮಿಸಲಾಗುತ್ತಿದೆ. ಸಿಬ್ಬಂದಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಲಾಗಿದೆ. ಸಾಕಷ್ಟು ಪ್ರಕರಣ ಪತ್ತೆಯಾಗುತ್ತಿವೆ
ಉಮಾ ಪ್ರಶಾಂತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಮಕ್ಕಳ ರಕ್ಷಣಾ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕೌನ್ಸೆಲಿಂಗ್‌ ವ್ಯವಸ್ಥೆ ಕಲ್ಪಿಸಿದರೆ ನಾಪತ್ತೆಗೆ ಕಡಿವಾಣ ಹಾಕಲು ಸಾಧ್ಯ
ಕೆ.ಬಿ. ರೂಪ ನಾಯ್ಕ ಮಾಜಿ ಸದಸ್ಯ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ

ಮಹಿಳೆಯರು ವರ್ಷ;ನಾಪತ್ತೆ;ಪತ್ತೆ 2023;585;572 2024;611;597 2025 (ಜುಲೈ);390;356 ಬಾಲಕಿಯರು ವರ್ಷ;ನಾಪತ್ತೆ;ಪತ್ತೆ 2023;64;63 2024;83;80; 2025 (ಜುಲೈ);44;36;

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.